ಸುದೀಪ್ ನಾಯಕತ್ವದ ವಿಕ್ರಾಂತ್ ರೋಣ ಚಿತ್ರದ ಭರ್ಜರಿ ಶೋ ದುಬೈನ ಬುರ್ಜ್ ಖಲೀಫಾದಲ್ಲಿ ನಡೆದಿದ್ದು ಎಲ್ಲರಿಗೂ ಗೊತ್ತು. ಆದರೆ ಈಗಲೂ ಕಿಚ್ಚ ಅಭಿಮಾನಿಗಳಿಂದ ಹಿಡಿದು ಸಕಲ ಸಿನಿಮಾಪ್ರೇಮಿಗಳನ್ನ ಕಾಡುತ್ತಿರುವ ಪ್ರಶ್ನೆ ಅಂದ್ರೆ ಈ ಚಿತ್ರ ಫ್ಯಾಂಟಮ್ ನಿಂದ ವಿಕ್ರಾಂತ್ ರೋಣ ಆಗಿ ಬದಲಾಗಿದ್ದು ಯಾಕೆ ಅನ್ನೋದು. ಅಂದಹಾಗೆ ಚಿತ್ರಗಳ ಶೀರ್ಷಿಕೆ ಬದಲಾಗುತ್ತಿರೋದು ಚಿತ್ರರಂಗದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಮುಹೂರ್ತ ಮಾಡಿಕೊಂಡಾಗ ಒಂದು ಹೆಸರಿದ್ದು, ಚಿತ್ರ ಬಿಡುಗಡೆ ಆಗುವಾಗ ಅದರ ಹೆಸರು, ಸ್ವರೂಪ ಬದಲಾಗಿರುವ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಅದು ಹಳೆಯ ಪ್ರಭಾಕರ್ ಅಭಿನಯದ “ಮುಟ್ಟಿದ್ರೆ ತಟ್ ಬಿಡ್ತೀನಿ” ಚಿತ್ರ “ಬಾಂಬೆ ದಾದಾ” ಆಗಿ ಬದಲಾಗಿದ್ದು ಇರಬಹುದು ಅಥವಾ ಕುಮಾರ್ ಗೋವಿಂದ್ ನಾಯಕತ್ವದಲ್ಲಿ “ಸತ್ಯ” ಆಗಬೇಕಿದ್ದ ಚಿತ್ರ ಶಿವರಾಜ್ ಕುಮಾರ್ ನಾಯಕತ್ವದಲ್ಲಿ “ಓಂ” ಆಗಿದ್ದು ಇರಬಹುದು. ಇವು ಕೇವಲ ಎರಡು ಉದಾಹರಣೆಗಳು ಅಷ್ಟೇ. ಸೆನ್ಸಾರ್ ನಿಂದ ಹಿಡಿದು, ಚಿತ್ರದ ಶೀರ್ಷಿಕೆ ರೈಟ್ಸ್ ಇನ್ಯಾರತ್ರನೋ ಇದೆ ಎನ್ನುವ ಕಾರಣಗಳಿಗಾಗಿ ಚಿತ್ರಗಳ ಶೀರ್ಷಿಕೆ ಬದಲಾಗಿವೆ. ಅವುಗಳಲ್ಲಿ ಕೆಲವು ಮೈನರ್ ಚೇಂಜ್ ಆಗಿ, “ಶತ್ರು” ಇದ್ದಿದ್ದು “ನನ್ನ ಶತ್ರು” ಆಗುತ್ತದೆ. “ಕಿರಣ್ ಬೇಡಿ” “ಕನ್ನಡದ ಕಿರಣ್ ಬೇಡಿ” ಆಗುತ್ತಾಳೆ. “ಪೊಲೀಸ್ ದಾದಾ” “ಪೊಲೀಸ್ ಮತ್ತು ದಾದಾ” ಆಗುತ್ತಾನೆ. “ರೌಡಿ ಎಂ ಎಲ್ ಎ” “ರೌಡಿ ಅಂಡ್ ಎಂಎಲ್ ಎ” ಆಗುತ್ತಾನೆ. ಆದರೆ ಕಿಚ್ಚ ಸುದೀಪ್ ಅವರ ಫ್ಯಾಂಟಮ್ ಬದಲಾಗಿದ್ದು ಮಾತ್ರ ಯಾರಿಗೂ ಅರ್ಥವಾಗದ ವಿಷಯವಾಗಿದೆ.
ಇದಕ್ಕೆ ಕಾರಣಗಳನ್ನು ಹುಡುಕುತ್ತ ಹೊರಟರೆ ಅದಕ್ಕೆ ಕೆಲವು ಅಸ್ಪಷ್ಟ ಕಲ್ಪನೆಗಳು ಕಾಣಸಿಗುತ್ತವೆ.
ಸಾಧ್ಯತೆ 1
ಫ್ಯಾಂಟಮ್ ಅನ್ನೋ ಶೀರ್ಷಿಕೆ ಇನ್ಯಾರ ಬಳಿಯೋ ಇದ್ದು ಅದು ಸುದೀಪ್ ಅಂಡ್ ತಂಡಕ್ಕೆ ಸಿಗದೇ ಇರುವುದು. ಈ ಸಾಧ್ಯತೆ ತೀರಾ ಕಡಿಮೆ. ಯಾಕಂದ್ರೆ ಈ ಟೈಟಲ್ ಇನ್ಯಾರ ಬಳಿಯೋ ಇದ್ದಿದ್ದರೆ ಅವರು ಚಿತ್ರ ಆರಂಭವಾದಾಗಲೇ ತಕರಾರು ತೆಗೆದು ಚಿತ್ರದ ಶೀರ್ಷಿಕೆಯನ್ನು ಕೊಡಲ್ಲ ಎಂದು ಹೇಳುತ್ತಿದ್ದರು. ಅಲ್ಲದೆ ಸುದೀಪ್ ಅವರಂಥ ಸೂಪರ್ ಸ್ಟಾರ್ ಗೆ ಹಾಗೆ ಈ ಚಿತ್ರದ ಶೀರ್ಷಿಕೆ ಇನ್ನೊಬ್ಬ ಬಳಿ ಇದ್ದಿದ್ದರೂ ಅದನ್ನು ತೆಗೆದುಕೊಳ್ಳುವುದು ದೊಡ್ಡ ಮಾತೇನು ಆಗಿರಲಿಲ್ಲ. ಹಾಗಾಗಿ ಈ ಸಾಧ್ಯತೆಯನ್ನು ಸುಲಭವಾಗಿ ತಳ್ಳಿ ಹಾಕಬಹುದು.
ಸಾಧ್ಯತೆ 2
ಫ್ಯಾಂಟಮ್ ಅನ್ನೋ ಶೀರ್ಷಿಕೆಯೇ ಬೇಡ ಅಂತ ಚಿತ್ರತಂಡ ತೀರ್ಮಾನ ಮಾಡರಬಹುದು. ಯಾಕಂದ್ರೆ ಫ್ಯಾಂಟಮ್ ಎನ್ನುವ ಸೂಪರ್ ಹೀರೋ ಕಾಲ ತುಂಬಾ ಹಳೆಯದ್ದಾಯಿತು. ಈಗಿನ ಜೆನರೇಶನ್ ಗೆ ಫ್ಯಾಂಟಮ್ ಕೊಂಚ ಅಪರಿಚಿತನೇ. ಅವನೇನಿದ್ದರೂ 90 ದಶಕದ ಹುಡುಗರ ಪಾಲಿಗೆ ಸೂಪರ್ ಹೀರೋ ಆಗಿದ್ದವ. ಹಾಗಾಗಿ ಈಗಿನವರಿಗೆ ಈ ಹೆಸರು ಕನೆಕ್ಟ್ ಆಗುವುದಿಲ್ಲ ಎಂಬುದು ನಿರ್ದೇಶಕ ಅನೂಪ್ ಭಂಡಾರಿ, ಕಿಚ್ಚ ಸುದೀಪ್ ಮತ್ತು ಅವರ ತಂಡಕ್ಕೆ ತಡವಾಗಿ ಹೊಳೆದಿರಬಹುದು. ಅಥವಾ ಯಾರಾದರೂ ತಿಳಿ ಹೇಳಿರಬಹುದು. ಹಾಗಾಗಿ ಫ್ಯಾಂಟಮ್ ವಿಕ್ರಾಂತ್ ರೋಣ ಆಗಿ ಬದಲಾಗಿರಬಹುದು.
ಸಾಧ್ಯತೆ 3
ಇನ್ನು, ಕನ್ನಡ ಚಿತ್ರರಂಗದಲ್ಲಿ ತಮ್ಮ ಅತಿ ನಿರೀಕ್ಷೆ ಹುಟ್ಟಿಸಿದ ಟೈಟಲ್ ಗಳಿಂದಾಗಿಯೇ ಸೋತಿರುವ ಚಿತ್ರಗಳ ದೊಡ್ಡ ಪಟ್ಟಿಯೇ ಇದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿನಯದ “ಏಳು ಸುತ್ತಿನ ಕೋಟೆ” ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ಎಷ್ಟೇ ಇಷ್ಟವಾಗಿದ್ದರೂ ಆ ಚಿತ್ರ ಅನೌನ್ಸ್ ಆದಾಗ ಅದು ಕ್ಲಾಸ್ ಟೈಟಲ್ ಎಂದೇ ಹಲವು ಅಭಿಮಾನಿಗಳು ಭಾವಿಸಿದ್ದರು. ಏಳು ಸುತ್ತಿನ ಕೋಟೆಯ ಒಳಗಿರುವ ವಿಲನ್ ಅನ್ನು ರೆಬೆಲ್ ಸ್ಟೈಲಲ್ಲಿ ಅಂಬಿ ಸದೆಬಡಿಯುತ್ತಾರೆ ಎಂದು ಅಂದುಕೊಂಡವರಿಗೆ ಎದುರಾಗಿದ್ದು ಒಂದು ಪಕ್ಕಾ ಕಲಾತ್ಮಕ ಚಿತ್ರ. ಹಾಗೆಯೇ ಇತ್ತೀಚಿನ ಸೂರಿ ನಿರ್ದೇಶನದ “ಅಣ್ಣಾಬಾಂಡ್” ಚಿತ್ರ ಕೂಡ ತನ್ನ ಶೀರ್ಷಿಕೆಯ ಭಾರದಿಂದಲೇ ಸೊರಗಿ ಹೋಯಿತು. ಪುನೀತ್ ಅಭಿನಯದ “ನಟಸಾರ್ವಭೌಮ” ಚಿತ್ರಕ್ಕೂ ಇದೇ ಕಾರಣ ಮುಳುವಾಗಿದ್ದು ಸುಳ್ಳಲ್ಲ. ಹಾಗಾಗಿ ಫ್ಯಾಂಟಮ್ ಎಂದಾಕ್ಷಣ ಪ್ರೇಕ್ಷಕರು ಅತೀಂದ್ರಿಯ ಶಕ್ತಿ ಹೊಂದಿದ ಅತಿ ಮಾನುಷ ಕಥೆಯನ್ನು ನಿರೀಕ್ಷೆ ಮಾಡಿ ಚಿತ್ರಮಂದಿರಕ್ಕೆ ಬಂದರೆ ಅವರಿಗೆಲ್ಲಿ ಭ್ರಮ ನಿರಸನ ಆಗುತ್ತದೋ ಎಂಬ ಅನಿಸಿಕೆಯಲ್ಲಿ ಈ ಚಿತ್ರದ ಟೈಟಲ್ ವಿಕ್ರಾಂತ್ ರೋಣ ಆಗಿ ಬದಲಾಗಿರುವ ಸಾಧ್ಯತೆಯೂ ಇದೆ. ಬಹುತೇಕ ಈ ಕಾರಣವೇ ಟೈಟಲ್ ಬದಲಾವಣೆಗೆ ಮುಖ್ಯ ಕಾರಣವಾಗಿರುವ ಸಾಧ್ಯತೆ ಹೆಚ್ಚು.
ಒಟ್ಟಿನಲ್ಲಿ ಚಿತ್ರತಂಡ ಮಾತ್ರ ಇದುವರೆಗೂ ಈ ಬದಲಾವಣೆಗೆ ಕಾರಣ ಕೊಟ್ಟಿಲ್ಲ. ಆದರೆ ಇದರಿಂದ ಚಿತ್ರದ ಬಗೆಗಿನ ನಿರೀಕ್ಷೆಗಳೇನೂ ಕಡಿಮೆ ಆಗಿಲ್ಲ. ವಿಕ್ರಾಂತ್ ರೋಣ ಎಂಬ ಟೈಟಲ್ ಕೂಡಾ ಈಗಾಗಲೇ ಸಾಕಷ್ಟು ಪ್ರಶ್ನೆ ಮತ್ತು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಅದಕ್ಕೆ ತಕ್ಕಂತ ಯಶಸ್ಸು ಕೂಡಾ ಸಿಗುತ್ತದೆ ಎಂಬುದು ಚಿತ್ರತಂಡದ ನಂಬಿಕೆ.
Be the first to comment