ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ಸಿನಿಮಾ ‘ಪೆದ್ದಿ’ ಯನ್ನು ಏಪ್ರಿಲ್ 30ಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.
‘ಪೆದ್ದಿ’ ಸಿನಿಮಾ ಮಾರ್ಚ್ 10ರಂದು ತೆರೆಗೆ ಬರಲಿದೆ ಎಂದು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆಯ ಕಾರಣದಿಂದ ‘ಪೆದ್ದಿ’ ಸಿನಿಮಾ ಮುಂದೂಡಲಾಗಿದೆ ಎನ್ನಲಾಗುತ್ತಿದೆ. ಮೊದಲು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 10ಕ್ಕೆ ಬಿಡುಗಡೆ ಆಗಲಿತ್ತು. ನಂತರ ದಿನಾಂಕ ಬದಲಿಸಿ ಮಾರ್ಚ್ 26ಕ್ಕೆ ನಿಗದಿಪಡಿಸಲಾಯಿತು. ಮಾರ್ಚ್ 19ರಂದು ‘ಟಾಕ್ಸಿಕ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಬಿಡುಗಡೆಯಾಗುತ್ತಿರುವ ಹಿನ್ನೆಲೆ ಬಿಡುಗಡೆ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ.
‘ಪೆದ್ದಿ’ ಸಿನಿಮಾ ಹಳ್ಳಿಯ ಹಿನ್ನೆಲೆಯಲ್ಲಿರುವ ಕ್ರಿಕೆಟ್ ಆಟಗಾರನೊಬ್ಬನ ಜೀವನಕಥೆಯನ್ನು ಆಧರಿಸಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಬೊಮನ್ ಇರಾನಿ, ಜಗಪತಿ ಬಾಬು ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.
ಸಿನಿಮಾವನ್ನು ‘ಉಪ್ಪೆನ’ ಖ್ಯಾತಿಯ ನಿರ್ದೇಶಕ ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಸಿನಿಮಾವನ್ನು ವೃದ್ಧಿ ಸಿನಿಮಾಸ್ ಹಾಗೂ ಐವಿವೈ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿವೆ. ಎ.ಆರ್.ರೆಹಮಾನ್ ಅವರು ಸಂಗೀತ ಸಂಯೋಜನೆ ನೀಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ‘ಚಿಕಿರಿ-ಚಿಕಿರಿ’ ಹಾಡು ಭಾರೀ ಹಿಟ್ ಆಗಿದೆ.
—-





Be the first to comment