ಆರು ತಿಂಗಳ ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ, ನಟಿ ಪವಿತ್ರಾ ಗೌಡ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ.
ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಜಾಮೀನು ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಪವಿತ್ರಾ ಗೌಡ ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪವಿತ್ರಾ ಗೌಡ ಜೊತೆ ಆರೋಪಿ ಪ್ರದೂಶ್ ಬಿಡುಗಡೆಯಾಗಿದ್ದಾನೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ಶುಕ್ರವಾರ ಹೈಕೋರ್ಟ್ ವಿಧಿಸಿ ಜಾಮೀನು ಮಂಜೂರು ಮಾಡಿತ್ತು.
ಪವಿತ್ರಾ ಗೌಡಗೆ ಶುಕ್ರವಾರ ಜಾಮೀನು ಸಿಕ್ಕಿದೆ. ಆದರೆ ವೀಕೆಂಡ್ ಆದ ಕಾರಣ ಹೊರ ಬರಲು ಸಾಧ್ಯವಾಗಲಿಲ್ಲ. ಸೋಮವಾರ ಜಾಮೀನು ಪ್ರತಿ ತಡವಾಗಿ ಜೈಲಧಿಕಾರಿಗಳ ಕೈಸೇರಿದ ಹಿನ್ನೆಲೆಯಲ್ಲಿ ಜೈಲಿನಲ್ಲೇ ಕಳೆದರು.
ಪವಿತ್ರಾ ತಾಯಿ ಪರಪ್ಪನ ಅಗ್ರಹಾರದ ಬಳಿ ಇರುವ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಮಗಳ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವರಿಗೆ ನಿಂಬೆಹಣ್ಣಿನ ಹಾರ ಹಾಕಿ ಪೂಜೆ ಮಾಡಿದ್ದಾರೆ.
ಇಂದು ಬೆಳಗ್ಗೆ ದರ್ಶನ್ ಮ್ಯಾನೇಜರ್ ನಾಗರಾಜ್ ಕಲಬುರಗಿ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಮ್ಯಾನೇಜರ್ ನಾಗರಾಜ್ ಕೂಡ ಅರೆಸ್ಟ್ ಆಗಿದ್ದರು.
Be the first to comment