ಕೆಲವು ವರ್ಷಗಳ ಹಿಂದೆ “ಗ್ಯಾಪಲ್ಲೊಂದು ಸಿನಿಮಾ” ಮಾಡಿ ನಂತರ “ಓಮಿನಿ” ಎಂಬ ಚಿತ್ರ ನಿರ್ದೇಶಿಸಿರುವ ಹೆದ್ದೂರ್ ಮಂಜುನಾಥ್ ಶೆಟ್ಟಿ ಈಗ “ಪಾಠಶಾಲಾ” ಎಂಬ ಚಿತ್ರ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ದಂಪತಿ ಟೀಸರ್ ಅನಾವರಣ ಮಾಡಿ “ಪಾಠಶಾಲಾ” ತಂಡಕ್ಕೆ ಶುಭ ಕೋರಿದರು. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ಹೆಚ್ ಎಸ್ ರಾಘವೇಂದ್ರ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ವಿಜಯ್ ಶೆಟ್ಟಿ, “ಕೆರಭೇಟೆ” ಖ್ಯಾತಿಯ ಗೌರಿಶಂಕರ್, ರವೀಂದ್ರ ಸಿಂಗ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ “ಪಾಠಶಾಲಾ” ಬಗ್ಗೆ ಹೆದ್ದೂರ್ ಮಂಜುನಾಥ್ ಶೆಟ್ಟಿ ಮಾತನಾಡಿದರು.
“ಪಾಠಶಾಲಾ” ನನ್ನ ಮೂರನೇ ನಿರ್ದೇಶನದ ಚಿತ್ರ. ನಾನು ಮಲೆನಾಡಿನ ಮೂಲದವನು. ಹದಿನೈದು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವನು. ಕಿರುತೆರೆಯಲ್ಲಿ ಸುಧಾಕರ್ ಬನ್ನಂಜೆ, ಸಿಹಿಕಹಿ ಚಂದ್ರು ನನ್ನ ಗುರುಗಳು. ರವಿಚಂದ್ರನ್ ಅವರು ಸೇರಿದಂತೆ ಅನೇಕ ನಿರ್ದೇಶಕರ ಬಳಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. “ಪಾರ್ವತಿ ಪರಮೇಶ್ವರ” ಧಾರಾವಾಹಿಯ “ತುತ್ತೂರಿ” ನನಗೆ ಹೆಸರು ತಂದುಕೊಟ್ಟ ಪಾತ್ರ. ಈಗ “MS SQUARE MOVIES” ಲಾಂಛನದಲ್ಲಿ ನಾನು ಹಾಗೂ ನನ್ನ ಪತ್ನಿ ಪ್ರೀತಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ಹತ್ತಕ್ಕೂ ಅಧಿಕ ಸ್ನೇಹಿತರ ಸಹ ನಿರ್ಮಾಣ ಈ ಚಿತ್ರಕ್ಕಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ್ದೇವೆ. ನಲವತ್ತಕ್ಕೂ ಆಧಿಕ ಮಕ್ಕಳು ಈ ಚಿತ್ರದಲ್ಲಿ ನಟಿಸಿದ್ದಾರೆ.
ಮಕ್ಕಳಿಗೆ ತರಭೇತಿ ನೀಡಿ ಆನಂತರ ಚಿತ್ರೀಕರಣ ಮಾಡಲಾಯಿತು. ತೀರ್ಥಹಳ್ಳಿ ಆಸುಪಾಸಿನ ಮಕ್ಕಳೇ ಇದರಲ್ಲಿ ನಟಿಸಿದ್ದಾರೆ. ಹಿರಿಯರಾದ ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. 80, 90 ರ ಕಾಲಘಟ್ಟದಲ್ಲಿ ಶಿಕ್ಷಕರ ಹಾಗೂ ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತಲ್ಲಿನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಚಿತ್ರೀಕರಣ ಪೂರ್ಣವಾಗಿದ್ದು, ಡಬ್ಬಿಂಗ್ ಸಹ ಮುಕ್ತಾಯ ಹಂತದಲ್ಲಿದೆ. ಬೇಸಿಗೆ ರಜೆಗೂ ಮುನ್ನ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ ಎಂದು ನಿರ್ದೇಶಕ ಹೆದ್ದೂರ್ ಮಂಜುನಾಥ್ ಶೆಟ್ಟಿ ಮಾಹಿತಿ ನೀಡಿದರು. “ಪಾಠಶಾಲಾ” ಚಿತ್ರಕ್ಕೆ “ಓದು ಅಥವಾ ಓಡೋಗು” ಎಂಬ ಅಡಿಬರಹವಿದೆ.
Be the first to comment