ಮುಂದಿನ ನಿಲ್ದಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಲಾವಿದರೊಬ್ಬರ ಶಕ್ತಿಯುತ ಮರು ಪ್ರವೇಶ~ ಹಿಂದೆಂದೂ ಕಂಡರಿಯದ ಗೆಟಪ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ನಾಯಕ ನಟ ಪ್ರವೀಣ್ ತೇಜ್!
ಚೂರಿ ಕಟ್ಟೆ ಖ್ಯಾತಿಯ ಪ್ರವೀಣ್ ತೇಜ್ ಅವರು ನಾಯಕ ನಟರಾಗಿ ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ನಿಲ್ದಾಣ ಚಿತ್ರದ ಹೊಸ ಹಾಡೊಂದರಲ್ಲಿ ಅವರು ಹಿಂದೆಂದೂ ಕಂಡರಿಯದ ಗೆಟಪ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಮೂಲಕ ಅನಾವರಣಗೊಳ್ಳುತ್ತಿರುವ ಅವರ ಸಿಕ್ಸ್ ಪ್ಯಾಕ್ ಮೈಕಟ್ಟು ಎಂತಹಾ ಹುಡುಗಿಯರನ್ನೂ ವಾವ್ ಎಂದು ಉದ್ಗರಿಸುವಂತೆ ಮಾಡುತ್ತಿದೆ. “ತನ್ನ ಈ ಮಾದಕ ಮೈಕಟ್ಟಿನ ಹಿಂದೆ ನಾಲ್ಕು ತಿಂಗಳುಗಳ ಕಠಿಣ ಪರಿಶ್ರಮವಿದೆ. ಕಟ್ಟುನಿಟ್ಟಿನ ಆಹಾರ ಪದ್ಧತಿ ಹಾಗೂ ಎಡೆಬಿಡದ ಪರಿಶ್ರಮದಿಂದ ಮಾತ್ರ ಇದು ಸಾಧ್ಯವಾಯಿತು” ಎಂದು ತನ್ನ ಸಿಕ್ಸ್ ಪ್ಯಾಕ್ ಹಿಂದಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ ಪ್ರವೀಣ್ ತೇಜ್.
ಅತಿ ವಿಶಿಷ್ಟವಾಗಿ ಮೂಡಿ ಬಂದಿರುವ ಈ ಹಾಡನ್ನು ಚೆನ್ನೈ ಮೂಲದ ಸಂಗೀತ ಮಾಂತ್ರಿಕ ಶ್ರೀನಿಧಿ ವೆಂಕಟೇಶ್ ಅವರು ರಾಗ ಸಂಯೋಜನೆ ಗೈದು ಹಾಡಿದ್ದಾರೆ.ಇವರು ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಗರಡಿಯಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲ ಪಳಗಿದ ಅನುಭವವನ್ನು ಹೊಂದಿದ್ದಾರೆ. ಖ್ಯಾತ ಡ್ರಂ ಕಲಾವಿದ ಶಿವಮಣಿ ಅವರ ಪುತ್ರ ಕುಮಾರ್ ಶಿವಮಣಿ ಹಾಗೂ ಇಶಾನ್ ಛಾಬ್ರಾ ತಂಡವು ಈ ಹಾಡನ್ನು ನಿರ್ಮಿಸಿದೆ. ಮಾತ್ರವಲ್ಲದೇ ಖ್ಯಾತ ಆಫ್ರಿಕನ್ ರ್ಯಾಪ್ ಆರ್ಟಿಸ್ಟ್ ಆಗಿರುವ ಅಗಾಬಸ್ ಅವರು ಈ ಹಾಡಿನ ರ್ಯಾಪ್ ಭಾಗವನ್ನು ರಚಿಸಿದ್ದು ಮಾತ್ರವಲ್ಲದೇ ತಾವೇ ಆ ಭಾಗವನ್ನು ಹಾಡಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.
ಪಾರ್ಥನೆಂಬ ಕಥಾಪಾತ್ರದ ನೀರಸ ಜೀವನವನ್ನು ಚಿತ್ರಿಸುವ ಈ ಹಾಡಿನಲ್ಲಿ ಹೊಸತನದ ಜೊತೆಗೆ ಯುವ ಜನತೆಯನ್ನು ಆಕರ್ಷಿಸುವ ಎಲ್ಲಾ ಅಂಶಗಳೂ ಅಡಗಿವೆ. “ಆಪರೇಷನ್ ಡೈಮಂಡ್ ರಾಕೆಟ್” ಎಂಬ ಡಾ. ರಾಜ್ ಕುಮಾರ್ ಚಿತ್ರದ “ಈಫ್ ಯೂ ಕಂ ಟುಮಾರೋ..” ಎಂಬ ಹಾಡಿನ ನಂತರ ಸಂಪೂರ್ಣ ಇಂಗ್ಲಿಷ್ ಸಾಹಿತ್ಯದೊಂದಿಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿರುವ ಮೊದಲ ಹಾಡು ಎಂಬ ಹೆಗ್ಗಳಿಕೆಯೂ ಈ ಹಾಡಿಗಿದೆ!
ಒಂದರ ಹಿಂದೊಂದರಂತೆ ಅತಿ ವಿಶಿಷ್ಟ ಹಾಡುಗಳನ್ನು ಪರಿಚಯಿಸಿ ಸದ್ದು ಮಾಡುತ್ತಿರುವ ಮುಂದಿನ ನಿಲ್ದಾಣ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶಿಸಿದ್ದು, ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ತನ್ನ ವಿಶಿಷ್ಟ ಮಾದರಿಯ ಟೀಸರ್ ಹಾಗೂ ಎರಡು ಮನಮೋಹಕ ಹಾಡುಗಳೊಂದಿಗೆ ಬಿಡುಗಡೆಗೂ ಮುನ್ನವೇ ಚಿತ್ರರಸಿಕರ ಮನ ಗೆದ್ದಿರುವ ಈ ಚಿತ್ರವು ನವೆಂಬರ್ ಮಾಸದಲ್ಲಿ ತೆರೆಕಾಣಲಿದೆ.
Pingback: Regression Testing