ಮಂಡ್ಯ ರಮೇಶ್ ಗೆ ಪಂಚಮಿ ಪ್ರಶಸ್ತಿ

ಮಂಡ್ಯ ರಮೇಶ್ ಗೆ ಪ್ರತಿಷ್ಠಿತ ‘ಪಂಚಮಿ ಪುರಸ್ಕಾರ -2025’

ಕನ್ನಡ ರಂಗಭೂಮಿಯ ಹಿರಿಯ ನಟ ಮಂಡ್ಯ ರಮೇಶ್ ಅವರನ್ನುಪಂಚಮಿ ಟ್ರಸ್ಟ್ (ರಿ), ಉಡುಪಿ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ ಕೊಡಮಾಡುವ ‘ಪಂಚಮಿ ಪುರಸ್ಕಾರ- 2025’ಕ್ಕೆ ಆಯ್ಕೆ ಮಾಡಲಾಗಿದೆ.

ಪುರಸ್ಕಾರವು ಗೌರವ ಧನ 1,00,000 (ಒಂದು ಲಕ್ಷ) ರೂಪಾಯಿ ಯೊಂದಿಗೆ ಪ್ರಶಸ್ತಿ ಪತ್ರ, ಪದಕ ಒಳಗೊಂಡಿದೆ. ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯ ಸಂಚಾಲಕರಾದ ರವಿರಾಜ್ ಎಚ್. ಪಿ.  ತಿಳಿಸಿದ್ದಾರೆ.

ಮಂಡ್ಯ ರಮೇಶ್ ನಟ, ನಿರ್ದೇಶಕ, ರಂಗಶಿಕ್ಷಕ, ರಂಗ ಸಂಘಟಕ ಹಾಗೂ ಕಿರುತೆರೆ-ಚಲನಚಿತ್ರಗಳ ಹಿರಿಯ ಕಲಾವಿದ, ಮೈಸೂರಿನ ನಟನ ಸಂಸ್ಥೆ ಹಾಗೂ ರಂಗಶಾಲೆಯ ಸ್ಥಾಪಕ ಆಗಿದ್ದಾರೆ.  ನಾಗಮಂಡಲದ  ಅಭಿನಯಕ್ಕೆ ರಾಜ್ಯಸರ್ಕಾರದ ಶ್ರೇಷ್ಠ ಪೋಷಕನಟ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಂಗಭೀಷ್ಮ, ಕರ್ನಾಟಕ ನಾಟಕ ಅಕಾಡೆಮಿ  2017ರ ವಾರ್ಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮಂಡ್ಯ ರಮೇಶ್ ಅವರ ನೇತೃತ್ವದ ನಟನ ರಂಗಶಾಲೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ದೊರೆತಿದೆ. ಮೈಸೂರಿನಲ್ಲಿ ‘ನಟನ’ ರಂಗಶಾಲೆ ಜೊತೆಯಲ್ಲೇ ನಟನ ರಂಗಮಂದಿರ ಕಟ್ಟಿ, ನೂರಾರು ಕಲಾವಿದರನ್ನು ಬೆಳೆಸಿ ಮೈಸೂರಿನಲ್ಲಿ ರಂಗಕಾಯಕಕ್ಕೆ ಒಂದು ಪ್ರತಿಷ್ಠೆಯನ್ನು ತಂದು ಕೊಟ್ಟಿರುವ ಅಪರೂಪದ ಸಾಂಸ್ಕೃತಿಕ ಸಾಧಕ ಮಂಡ್ಯ ರಮೇಶ್. ಮೈಸೂರು ವಿಶ್ವವಿದ್ಯಾನಿಲಯದ ಗುಬ್ಬಿ ವೀರಣ್ಣ ರಂಗಪೀಠಕ್ಕೆ ಎರಡನೇ ಅವಧಿಗೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೇಂದ್ರ ಸಂಸ್ಕೃತಿ ಇಲಾಖೆಯಲ್ಲಿ ಅವಜ್ಞಿತ ಕಲಾ ಪರಂಪರೆ ತಜ್ಞರ ಸಮಿತಿ ಸದಸ್ಯರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ.

ಜೀ ಕನ್ನಡದ ಪ್ರತಿಷ್ಠಿತ ಕಾರ್ಯಕ್ರಮ ರಮೇಶ್ ಅರವಿಂದ್ ಅವರು ನಡೆಸಿಕೊಡುವ  ‘ವೀಕೆಂಡ್ ವಿತ್ ರಮೇಶ್’ ದಲ್ಲಿ ತಮ್ಮ ರಂಗಭೂಮಿ ಸಾಧನೆಗಾಗಿ ಮಂಡ್ಯ ರಮೇಶ್  ಸಾಧಕರ ಕುರ್ಚಿಯನ್ನು ಅಲಂಕರಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!