ಹಠವಾದಿ ಕ್ರಿಯೇಶನ್ಸ್ ಮೂಲಕ ದಾವಣಗೆರೆ ಮೂಲದ ರಾಜಶೇಖರ್ ಚಂದ್ರಶೇಖರ್ ಅವರು ನಿಮ್ಮೂರು ಎಂಬ ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪಕ್ಕಾ ಹಳ್ಳಿಸೊಗಡಿನಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕೂಡ ನಿಮ್ಮೂರು ಚಿತ್ರದಲ್ಲಿದೆ.
ವಿಜಯ್ ಎಸ್. ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿ ನಿರ್ದೇಶನ ಮಾಡಿದ್ದಾರೆ. ನಮ್ಮ ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯಪ್ರಜ್ಞೆ ಹೇಗಿರುತ್ತೆ ಎಂಬುದನ್ನು ಅನಾವರಣ ಮಾಡುವುದರ ಜೊತೆಗೆ ಒಂದು ಉತ್ತಮವಾದ ಮನರಂಜನಾತ್ಮಕ ಕಥಾಹಂದರ ಈ ಚಿತ್ರದಲ್ಲಿದೆ. ಅಲ್ಲದೆ ಗ್ರಾಮೀಣ ಭಾಗದ ಜನರು ತಿಳಿದುಕೊಳ್ಳಲೇಬೇಕಾದಂಥ ಒಂದು ಸಂದೇಶ ಕೂಡ ಇದರಲ್ಲಿದೆ.
ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ತಲಕಾಡು, ಹಾಸನ, ಸಕಲೇಶಪುರ, ಹಾಗೂ ರಾಣೆಬೆನ್ನೂರು ಸುತ್ತ ಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಚಿತ್ರದ ಪ್ರಥಮಪ್ರತಿ ಕೂಡ ಹೊರಬಂದಿದೆ.
ಚಿತ್ರವನ್ನು ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ನಿರ್ಮಾಪಕರಿಗಿದೆ. ಈ ಚಿತ್ರಕ್ಕೆ ಪಳನಿವೇಲು ಅವರ ಛಾಯಾಗ್ರಹಣ, ಅಭಿನಂದನ್ ಕಷ್ಯಪ್ ಮದು ಸುದಂಡಿ ಅವರ ಸಂಗೀತ ಸಂಯೋಜನೆ, ಹನುರಾಜ್ ಮಧುಗಿರಿ ಅವರ ಸಾಹಿತ್ಯ, ಚಂದ್ರು ಬಂಡೆ ಅವರ ಸಾಹಸ, ಲೋಕೇಶ್ ಯರಂಬಳ್ಳಿ ಅವರ ಕಲಾನಿರ್ದೇಶನ, ಸಿ.ಕೆ. ಕುಮಾರ್ ಅವರ ಸಂಕಲನ, ನೀಲ್ರಾಜ್ ರಾಜ್ ನಿರಂಜನ ಸಿಎಂಹೆಚ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಲಕ್ಕಿರಾಮ್, ವೀಣಾ ಗಂಗಾರಾಮ್, ತ್ರಿವಿಕ್ರಂ, ಸಿದ್ದುಮಂಡ್ಯ, ಮಂಜುನಾಥ್, ಅಂಜಿನಪ್ಪ, ಸುಧಾ. ಆರ್, ಶ್ರೀಕಾಂತ್ ಹೊನ್ನವಳ್ಳಿ ಶ್ರೀಭಾ ಮೂರ್ತಿ ಹಾಗೂ ಇತರರು ಈ ಚಿತ್ರದಲ್ಲಿದ್ದಾರೆ.
Be the first to comment