Ondu Sanne Ondu Maatu :‘ಒಂದು ಸನ್ನೆ ಒಂದು ಮಾತು’ಚಿತ್ರದ ಪೋಸ್ಟರ್ ಬಿಡುಗಡೆ

 ಸಂಪೂರ್ಣ ರಂಗಭೂಮಿ ಕಲಾವಿದರೇ ಅಭಿನಯಿಸಿರುವ ಈ ಚಿತ್ರಕ್ಕೆ ಸಂತೋಷ್ ಬಾಗಲಕೋಟಿ ಆಕ್ಷನ್ ಕಟ್ ಹೇಳಿದ್ದಾರೆ. ನವಿರಾದ ಪ್ರೇಮ ಕಥೆ ಹೊತ್ತ ಈ ಚಿತ್ರದ ಹೆಸರೇ ‘ಒಂದು ಸನ್ನೆ ಒಂದು ಮಾತು’. ಸದ್ಯ ಚಿತ್ರದ ನಾಯಕ ನಟ ಅಮೋಘ್ ಸಿದ್ದಾರ್ಥ್ ಹುಟ್ಟು ಹಬ್ಬದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಗಮನ ಸೆಳೆಯುತ್ತಿದೆ.

‘ಒಂದು ಸನ್ನೆ ಒಂದು ಮಾತು’ ಸಂತೋಷ್ ಬಾಗಲಕೋಟಿ ಅವರ ಹಲವು ವರ್ಷದ ಸಿನಿಮಾ ಕನಸು. ನವಿರಾದ ಪ್ರೇಮಕಥೆ ಹೊತ್ತ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಸಂತೋಷ್ ಬಾಗಲಕೋಟಿ. ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು ‘ಪಾನಿಪುರಿ’, ‘ಜಿಂಕೆಮರಿ’, ‘ನಮಸ್ತೆ ಇಂಡಿಯಾ’ ಸೇರಿದಂತೆ ಏಳೆಂಟು ಸಿನಿಮಾಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವವಿದೆ. ‘ಒಂದು ಸನ್ನೆ ಒಂದು ಮಾತು’ ಚಿತ್ರದ ಮೂಲಕ ಚಿತ್ರರಂಗದ ಅನುಭವವನ್ನು ಧಾರೆ ಎರೆದು ನಿರ್ದೇಶಕನಾಗಿ ಪರಿಚಿತರಾಗುತ್ತಿದ್ದಾರೆ.

ಚಿತ್ರದಲ್ಲಿ ರಂಗಭೂಮಿ ಕಲಾವಿದ ಅಮೋಘ್ ಸಿದ್ದಾರ್ಥ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇಂದು ನಾಯಕನಟನ ಹುಟ್ಟುಹಬ್ಬವಾದ್ದರಿಂದ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸುವ ಮೂಲಕ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದೆ. ಕಳೆದ ಏಳು ವರ್ಷಗಳಿಂದ ಅಮೋಘ್ ಸಿದ್ದಾರ್ಥ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಮಂಡ್ಯ ರಮೇಶ್ ಅವರ ನಟನ ರಂಗಭೂಮಿ ತಂಡದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ‘ಒಂದು ಸನ್ನೆ ಒಂದು ಮಾತು’ ಮೂಲಕ ನಾಯಕ ನಟನಾಗಿ ಪರಿಚಿತರಾಗುತ್ತಿದ್ದಾರೆ.

ನಾಯಕಿಯಾಗಿ ಯಶಸ್ವಿನಿ ನಾಚಪ್ಪ ನಟಿಸುತ್ತಿದ್ದಾರೆ. ‘ಮುಗುಳು ನಗೆ’ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಯೋಗರಾಜ್ ಭಟ್ ಜೊತೆ ಕೆಲಸ ಮಾಡಿದ ಅನುಭವ ಇವರಿಗಿದೆ. ಕಳೆದ ಐದು ವರ್ಷದಿಂದ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇವರಿಗೆ ನಾಯಕಿಯಾಗಿ ಇದು ಮೊದಲ ಸಿನಿಮಾ. ಉಳಿದಂತೆ ದಯಾನಂದ್ ನೀನಾಸಂ, ವೆಂಕಣ್ಣ ಜಾಲಿಮನೆ, ಮುರುಳಿ ಶೃಂಗೇರಿ ಸೇರಿದಂತೆ ಹಲವು ರಂಗಭೂಮಿ ಕಲಾವಿದರ ಸಮಾಗಮ ಈ ಚಿತ್ರದಲ್ಲಿದೆ.

ಥ್ರಿ ಮಂಕೀಸ್ ಶೋ ಬ್ಯಾನರ್ ನಡಿ ಸುವರ್ಣ ಲಕ್ಷಣ್ ಚೂನಪ್ಪಗೋಳ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶಿಲ್ಪಾ ಕಂಬಣ್ಣಾ ಬಂಡಿಗಣಿ ಸಹ ನಿರ್ಮಾಣ ಚಿತ್ರಕ್ಕಿದೆ. ಎರಡು ಹಾಡನ್ನು ಹೊರತು ಪಡಿಸಿ ಉಳಿದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿರುವ ಚಿತ್ರತಂಡ ಜೂನ್ ನಲ್ಲಿ ಸಿನಿಮಾವನ್ನು ತೆರೆ ಮೇಲೆ ತರುವ ಯೋಜನೆಯಲ್ಲಿದೆ. ಕಾರವಾರ, ಉತ್ತರ ಕನ್ನಡ, ಉಡುಪಿ, ಶಿರಸಿ, ಧಾರಾವಾಡದಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ, ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಉಗ್ರಂ ಹಾಗೂ ಕೆ.ಜಿ.ಎಫ್ ಖ್ಯಾತಿಯ ಶ್ರೀಕಾಂತ್ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!