ರಾಮಚಂದ್ರ ವೈದ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಒಂದಂಕೆ ಕಾಡು’ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ. ರಥರ್ವ, ಸೋನಿ, ಮಧು ಹೆಗ್ಡೆ, ಸುಮಂತ್ ಭಟ್, ಪ್ರೇರಣಾ ಕಂಬಂ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಟ್ರೇಲರ್, ಹಾಡುಗಳ ಮೂಲಕ ಗಮನ ಸೆಳೆದಿದೆ. ಬಿಡುಗಡೆಯ ಸಂತಸದಲ್ಲಿರುವ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ರಾಮಚಂದ್ರ ವೈದ್ಯ ಮಾತನಾಡಿ ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ತೆಲುಗಿನಲ್ಲಿ ‘ಅನಗನಗಾ ಒಕ ಅಡವಿ’ ಹೆಸರಲ್ಲಿ ಸಿನಿಮಾ ಮೂಡಿ ಬಂದಿದೆ. ಚಿತ್ರಕ್ಕೆ ‘ಒಂದಂಕೆ ಕಾಡು’ ಎಂದು ಟೈಟಲ್ ಇಡಲು ಕಾರಣವಿದೆ. ಉತ್ತರ ಕನ್ನಡದಲ್ಲಿ ವಿಶಿಷ್ಟ ಕಾಡಿದೆ. ಮರಗಳ ಬೇರು ನೆಲದ ಒಳಗೆ ಹೋಗುತ್ತದೆ ಆದ್ರೆ ಈ ಭಾಗದ ಕಾಡಲ್ಲಿ ಎಲ್ಲಾ ಮರದ ಬೇರುಗಳು ಕನ್ನಡದ ಒಂದಂಕೆ ಹಾಗೆ ಇರುತ್ತೆ ಅದಕ್ಕೆ ಒಂದಂಕೆ ಕಾಡು ಎಂದು ಇಡಲಾಗಿದೆ. ಕಾಡಿನ ಮಧ್ಯೆ ಚಿತ್ರೀಕರಣ ನಡೆಸಲಾಗಿದೆ. ಕಾರವಾರ, ದಾಂಡೇಲಿ, ಶಿರಸಿ, ಯಲ್ಲಾಪುರ, ಗೋವಾ ಬಾರ್ಡರ್ ನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರ ಮಾರ್ಚ್ 3ರಂದು ಬಿಡುಗಡೆಯಾಗುತ್ತಿದೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಾಯಕ ನಟ ರಥರ್ವ ಮಾತನಾಡಿ ಚಿತ್ರದಲ್ಲಿ ರಿಷಿ ಪಾತ್ರದಲ್ಲಿ ನಟಿಸಿದ್ದೇನೆ. ರಿಷಿ ಬೆಂಗಳೂರು ಹುಡುಗ. ಕೆಲಸ ಹಾಗೂ ಹೆಂಡ್ತಿ ಇಷ್ಟೇ ಅವನಿಗೆ ಜೀವನ. ಹೀಗಿರುವಾಗ ಇಬ್ಬರು ಒಂದಂಕೆ ಕಾಡಿಗೆ ವೆಕೇಶನ್ ಹೋಗುತ್ತಾರೆ. ಆ ಕಾಡಿನಲ್ಲಿ ಏನೇನು ಸಮಸ್ಯೆ ಎದುರಿಸುತ್ತಾರೆ, ಅದನ್ನೆಲ್ಲ ಹೇಗೆ ಫೇಸ್ ಮಾಡ್ತಾರೆ ಅನ್ನೋದೇ ಚಿತ್ರದ ಒನ್ ಲೈನ್ ಕಹಾನಿ. ಇದು ನನ್ನ ಮೊದಲ ಸಿನಿಮಾ. ಮಾರ್ಚ್ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಸಿನಿಮಾ ನೋಡಿ ಪ್ರೋತ್ಸಾಹ ನೀಡಿ ಎಂದು ತಿಳಿಸಿದ್ರು.
ನಾಯಕಿ ಸೋನಿ ಮಾತನಾಡಿ ನಾನು ಮೂಲತಃ ಮೈಸೂರಿನವಳು. ರಂಗಭೂಮಿ ಕಲಾವಿದೆ. ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾವಿದು. ಚಿತ್ರದಲ್ಲಿ ನಂದಿನಿ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ಅನುಭವ ಈ ಸಿನಿಮಾ ನೀಡಿದೆ. ನನಗೆ ಈ ಪಾತ್ರ ನೀಡಿದ್ದಕ್ಕೆ ನಿರ್ದೇಶಕರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂತಸ ಹಂಚಿಕೊಂಡ್ರು.
ಗಣೇಶ್ ಹೆಗ್ಡೆ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಟಿ.ಜಿ. ನಂದೀಶ್ ಸಂಭಾಷಣೆ, ಮಧು ಹೆಗ್ಡೆ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಹೃದಯಶಿವ, ಡಾ. ಉಮೇಶ್ ಸಾಹಿತ್ಯದಲ್ಲಿ ಹಾಡುಗಳು ಮೂಡಿ ಬಂದಿದ್ದು, ಅನುರಾಧ ಭಟ್, ಕಪಿಲ್ ನಾಯರ್, ಕೀರ್ತನ್ ಹೊಳ್ಳ ಹಿನ್ನೆಲೆ ಗಾಯನ ಚಿತ್ರಕ್ಕಿದೆ.
Be the first to comment