ಓ ಮೈ ಲವ್ – ಶಶಿಕುಮಾರ್ ಪುತ್ರನ ಮತ್ತೊಂದು ಚಿತ್ರ

ಹಿರಿಯ ನಟ ಶಶಿಕುಮಾರ್ ಪುತ್ರ ಅಕ್ಷಿತ್‍ಗೆ ಒಂದರ ಹಿಂದೊಂದರಂತೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈಗವರು ಬಳ್ಳಾರಿ ದರ್ಬಾರ್ ಖ್ಯಾತಿಯ ಸ್ಮೈಲ್ ಶ್ರೀನು ಅವರ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ.

ಈ ಹಿಂದೆ ತೂಫಾನ್, ಬಳ್ಳಾರಿ ದರ್ಬಾರ್ ಹಾಗೂ 18 ಟು 25 ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್‍ಶ್ರೀನು ಈಗ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ತೆರೆಮೇಲೆ ತರಲು ಹೊರಟಿದ್ದಾರೆ. ಆ ಚಿತ್ರಕ್ಕೆ “ಓ ಮೈ ಲವ್’ ಎಂಬ ಶೀರ್ಷಿಕೆಯನ್ನೂ ಫೈನಲ್ ಮಾಡಿದ್ದಾರೆ. ರೊಮ್ಯಾಂಟಿಕ್ ಜಾನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸಿನಲ್ಲಿ ಯುವ ಹೃದಯಗಳ ಮನದಲ್ಲಿ ಉಂಟಾಗುವ ತಳಮಳ, ಪ್ರೀತಿ, ಪ್ರೇಮದ ಕುರಿತಾಗಿ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ನಿರ್ದೇಶಕ ಸ್ಮೈಲ್‍ಶ್ರೀನು ಅವರು ರೆಗ್ಯುಲರ್ ಜಾನರ್ ಬಿಟ್ಟು ಬೇರೆಥರದ ನಿರೂಪಣೆಯನ್ನು ಟ್ರೈಮಾಡುತ್ತಿದ್ದಾರೆ, ಜಿಸಿಬಿ ರಾಮಾಂಜಿನಿ ಅವರು ಈ ಚಿತ್ರದ ಕಥೆ ಬರೆಯುವುದರೊಂದಿಗೆ ಜಿಸಿಬಿ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ರಚಿಸಿದ್ದಾರೆ. ರೊಮ್ಯಾಂಟಿಕ್ ಲವ್‍ಸ್ಟೋರಿ ಜೊತೆಗೆ ಫ್ಯಾಮಿಲಿ ಎಲಿಮೆಂಟ್ ಹಾಗೂ ಹಾಸ್ಯದ ಮಿಳಿತವಾಗಿ ಈ ಚಿತ್ರ ಮೂಡಿಬರಲಿದ್ದು ಒಂದು ಪ್ರೇಮಕಥೆಯನ್ನು ಹೀಗೂ ಹೇಳಬಹುದು ಎಂದು ನಿರ್ದೇಶಕ ಶ್ರೀನು ಈ ಚಿತ್ರದ ಮೂಲಕ ತೋರಿಸಿಕೊಡುತ್ತಿದ್ದಾರೆ.

ಬಿಗ್‍ಬಜೆಟ್ ಮೂಲಕ ತಯಾರಾಗಲಿರುವ ಈ ಚಿತ್ರದ ಮೇಕಿಂಗ್, ಸಾಂಗ್, ಸ್ಟಾರ್‍ಕಾಸ್ಟ್ ಎಲ್ಲದರಲ್ಲೂ ಅದ್ದೂರಿತನ ಎದ್ದು ಕಾಣುತ್ತದೆ. ಅಲ್ಲದೆ ಈ ಚಿತ್ರದಲ್ಲಿ ಅಕ್ಷಿತ್ ಶಶಿಕುಮಾರ್ ಜೊತೆ ನಾಯಕಿಯಾಗಿ ಕೀರ್ತಿ ಕಲಕೇರಿ ಅಭಿನಯಿಸುತ್ತಿದ್ದಾರೆ.

ಸಾಧು ಕೋಕಿಲಾ, ದೀಪಿಕಾ ಆರಾಧ್ಯ ಸೇರಿದಂತೆ ಇತರರೂ ಈ ಚಿತ್ರದಲ್ಲಿರುತ್ತಾರೆ. ಡಾ.ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಚರಣ್ ಅರ್ಜುನ್ ಅವರ ಸಂಗೀತ, ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನ, ಆಕಾಶ್‍ಕುಮಾರ್ ಚವನ್ ಅವರ ಸಹನಿರ್ದೇಶನ ಈ ಚಿತ್ರಕ್ಕಿರಲಿದೆ. ಬೆಂಗಳೂರು, ಮಂಗಳೂರು, ಮಡಿಕೇರಿ, ಹೈದರಾಬಾದ್ ಸೇರಿದಂತೆ ಕರ್ನಾಟಕದ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!