ಬೆಳಗ್ಗೆಯಿಂದ ಸಂಜೆವರೆಗೆ ನಡೆಯುವ ಘಟನೆಯ ಕಥಾಹಂದರವನ್ನು ಹೊಂದಿದ ” ಒಂಭತ್ತನೇ ದಿಕ್ಕು” ಚಿತ್ರ ಜ.28ರಂದು ರಾಜ್ಯಾದಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟಿಸಿದೆ.
ʼʼಲೂಸ್ ಮಾದ ಯೋಗೀಶ್ ನಟನೆಯ ʼಒಂಭತ್ತನೇ ದಿಕ್ಕುʼ ಚಿತ್ರವನ್ನು ಜ. 28ರಂದು ಪ್ರೇಕ್ಷಕರ ಮುಂದೆ ತರಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆʼʼ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಲೂಸ್ ಮಾದ ಯೋಗಿ ಅವರು ನಾಯಕನಾಗಿ ನಟಿಸಿರುವ ಒಂಭತ್ತನೆ ದಿಕ್ಕು ಚಿತ್ರದಲ್ಲಿ ನಾಯಕಿ ಆಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇವರಿಬ್ಬರೂ ವಯಸ್ಸಾದವರ ಪಾತ್ರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದೆ.
“ನಾನು ಇಲ್ಲಿಯವರೆಗೂ ಮಾಡದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ದಯಾಳ್ ಅವರು ಹೇಳಿದ ಕಥೆ ತುಂಬಾ ಹಿಡಿಸಿತು. ಕಂಟೆಂಟ್ ಇರುವ ಕಮರ್ಷಿಯಲ್ ಸಿನಿಮಾ ಇದಾಗಿದೆ ” ಎಂದು ಯೋಗಿ ಹೇಳಿದ್ದಾರೆ.
“ಸಾಮಾನ್ಯವಾಗಿ ನಾಯಕ ನಾಯಕಿಯರು ವಯಸ್ಸಾದ ಪಾತ್ರಗಳು ಎಂದಾಗ ಕೊಂಚ ಹಿಂದೆ ಸರಿಯುತ್ತಾರೆ. ಆದರೆ ಇವರಿಬ್ಬರೂ ಹೇಳಿದ ತಕ್ಷಣ ಒಪ್ಪಿ ನಟಿಸಿದ್ರು” ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ತಮ್ಮ ವಯೋವೃದ್ಧೆಯ ಲುಕ್ ಬಗ್ಗೆ ಮಾತನಾಡಿರುವ ಅದಿತಿ ಪ್ರಭುದೇವ ‘ಈ ದೃಶ್ಯದ ಶೂಟಿಂಗ್ ನ್ನು ಎಂಜಾಯ್ ಮಾಡಿದೆ. ಮುಂದಿನ ದಿನಗಳಲ್ಲಿ ನಾವು ಹೇಗೆ ಕಾಣುತ್ತೇವೆ ಎಂಬುದು ಈಗಲೇ ನಮಗೆ ತಿಳಿದುಕೊಳ್ಳಲು ಈ ದೃಶ್ಯ ಸಹಕಾರಿಯಾಯಿತು. ನಾನಂತೂ ಮೇಕಪ್ ಮುಗಿದ ಮೇಲೆ ಮೂರ್ನಾಲ್ಕು ಬಾರಿಯಾದರೂ ಕನ್ನಡಿ ನೋಡಿಕೊಂಡಿದ್ದೇನೆ. ಚಿತ್ರದಲ್ಲಿ ನಟಿಸಿರುವುದು ಹೊಸ ಅನುಭವ’ ಎಂದಿದ್ದಾರೆ.
” ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಈ ಚಿತ್ರದ ಕಥೆ ಎರಡು ಟೈಮ್‌ಲೈನ್‌ನಲ್ಲಿ ಸಾಗುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ್ದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ. ಚಿತ್ರದಲ್ಲಿ ಮೂರು ಸಾಹಸ ಸನ್ನಿವೇಶಗಳಿವೆ” ಎಂದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆಗಿರುವ ದಯಾಳ್ ಪದ್ಮನಾಭನ್ ಹೇಳಿದ್ದಾರೆ.
ಚಿತ್ರದಲ್ಲಿ ಸಾಯಿಕುಮಾರ್, ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುಂತಾದರು ನಟಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ, ರಾಕೇಶ್ ಛಾಯಾಗ್ರಹಣ ಇದೆ.
ದಯಾಳ್ ಈ ಹಿಂದೆ ‘ಹಗ್ಗದ ಕೊನೆ’, ‘ಆ ಕರಾಳ ರಾತ್ರಿ’, ‘ರಂಗನಾಯಕಿ’ಯಂಥ ವಿಭಿನ್ನ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ. 9ಕೆ ಸ್ಟುಡಿಯೋಸ್ ಹಾಗೂ ನಿರ್ದೇಶಕ ಗುರು ದೇಶಪಾಂಡೆ ಅವರ ಜಿ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣ ಆಗಿದೆ.
___
Be the first to comment