ಸಾಕಷ್ಟು ಅಪಖ್ಯಾತಿಗೆ ಒಳಗಾದ ಡ್ರೋನ್ ಪ್ರತಾಪ್ ಅವರ ಬಗ್ಗೆ ಸಿನಿಮಾ ಬರುತ್ತಿದ್ದು, ಕನ್ನಡದ ಬಿಗ್ಬಾಸ್ ವಿಜೇತ ಪ್ರಥಮ್ ಅವರು ‘ ಡ್ರೋನ್ ಪ್ರತಾಪ್’ ಸಿನಿಮಾದ ಮೂಲಕ ನಿರ್ದೇಶಕನಾಗಲು ಹೊರಟಿದ್ದಾರೆ.
ಹಾಸ್ಯಮಯ ಸಂದೇಶ ಹೊಂದಿರುವ ‘ ಡ್ರೋನ್ ಪ್ರತಾಪ್’ ಸಿನೆಮಾದಲ್ಲಿ ಸ್ವತಃ ಪ್ರಥಮ್ ಅವರು ನಟಿಸಲಿದ್ದಾರೆ. ಡ್ರೋನ್ ಪ್ರತಾಪ್ ದಿಢೀರ್ ಜನಪ್ರಿಯತೆ ಮತ್ತು ಅದರ ಪರಿಣಾಮಗಳ ಕುರಿತು ಕತೆ ಹೆಣೆಯಲಾಗಿದೆ ಎನ್ನುತ್ತಾರೆ ಪ್ರಥಮ್.
“ಚಿತ್ರವನ್ನು ‘ಗೌರಿ ಗಣೇಶ’, ‘ಉಂಡು ಹೋದ ಕೊಂಡು ಹೋದ’ ಸಿನಿಮಾಗಳ ರೀತಿಯಲ್ಲಿ ಮಾಡುವ ಯೋಜನೆ ಇದೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಲಾಗಿದೆ. ಡ್ರೋನ್ ಪ್ರತಾಪ್ ಬಗ್ಗೆ ಅರಿತುಕೊಳ್ಳಲು ಸುಮಾರು ನಾಲ್ಕು ತಿಂಗಳು ವ್ಯಯಿಸಿದ್ದೇನೆ” ಎನ್ನುತ್ತಾರೆ ಪ್ರಥಮ್.
ಪ್ರಥಮ್ ಈ ಸಿನಿಮಾಕ್ಕಾಗಿ ಸುಮಾರು 15 ಕೆ.ಜಿ ತೂಕ ಇಳಿಸಿಕೊಳ್ಳಲಿದ್ದಾರೆ. ಈ ಹಿಂದೆ ಸಿನಿಮಾವನ್ನು ಬೇರೆಯವರು ನಿರ್ದೇಶನ ಮಾಡಬೇಕಾಗಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಪ್ರಥಮ್ ಅವರು ಚಿತ್ರವನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ.
ಸಿನಿಮಾದ ಮುಹೂರ್ತವನ್ನು ಅದ್ಧೂರಿಯಾಗಿ ಮಾಡುವ ಯೋಜನೆಯನ್ನು ಪ್ರಥಮ್ ರೂಪಿಸಿದ್ದಾರೆ. ಪ್ರಸಿದ್ಧ ವ್ಯಕ್ತಿಯನ್ನು ಮಹೂರ್ತದ ವೇಳೆ ಕರೆತರುವ ಬಗ್ಗೆ ಯೋಚನೆ ಮಾಡಿದ್ದಾರೆ.
ಡ್ರೋನ್ ಪ್ರತಾಪ್ ಅವರು ತಮ್ಮನ್ನು ಯುವ ವಿಜ್ಞಾನಿಯೆಂದು ಬಿಂಬಿಸಿಕೊಂಡಿದ್ದರು. ಆದರೆ ಅವರು ಸುಳ್ಳು ಹೇಳಿರುವುದು ಬಹಿರಂಗ ಆದ ಬಳಿಕ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದರು.
ಈಗ ಪ್ರಥಮ್ ಅವರು ಡ್ರೋನ್ ಪ್ರತಾಪ್ ಅವರ ಬಗ್ಗೆ ಸಿನೆಮಾ ಮಾಡಲು ಹೊರಟಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
______________
Be the first to comment