ಓ ಮೈ ಲವ್ ಚಿತ್ರದಲ್ಲಿ ಮಗಧೀರ ವಿಲನ್

ಜಿಸಿಬಿ ಪ್ರೊಡಕ್ಷನ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ಬಂಡವಾಳ ಹಾಕಿ ನಿರ್ಮಿಸುತ್ತಿರುವ ಹೊಸ ಥರದ ನಿರೂಪಣೆ ಒಳಗೊಂಡ ಚಿತ್ರ ಓ ಮೈ ಲವ್. ಸ್ಮೈಲ್ ಶ್ರೀನು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಮಿನರ್ವ ಮಿಲ್ ಆವರಣದಲ್ಲಿ ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿದ ಸೆಟ್‍ನಲ್ಲಿ ಸಾಹಸ ಸನ್ನಿವೇಶಗಳನ್ನು ಸೆರೆಹಿಡಿಯುವುದರೊಂದಿಗೆ ಎರಡನೇ ಹಂತದ ಚಿತ್ರೀಕರಣವನ್ನು ಪೂರೈಸಿದೆ.

ಈ ಹಂತದ ಚಿತ್ರೀಕರಣದಲ್ಲಿ ಮಗಧೀರ ಖ್ಯಾತಿಯ ವಿಲನ್ ದೇವ್‍ಗಿಲ್ ಹಾಗೂ ನಾಯಕ ಅಕ್ಷಿತ್ ಶಶಿಕುಮಾರ್ ನಡುವಿನ ಭರ್ಜರಿ ಸಾಹಸ ದೃಷ್ಯಗಳನ್ನು ರಿಯಲ್ ಸತೀಶ್ ಅವರ ಸಾರಥ್ಯದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು, ನಾಯಕಿ ಕೀರ್ತಿ ಕಲ್ಕೆರೆ, ಎಸ್.ನಾರಾಯಣ್, ಸಂಗೀತ, ಸುಂದರಶ್ರೀ, ಭಾಗ್ಯಶ್ರೀ, ಪೃಥ್ವೀರಾಜ್ ಅವರುಗಳು ಸಹ ಇಲ್ಲಿ ಭಾಗವಹಿಸಿದ್ದರು. ಇದರೊಂದಿಗೆ ಚಿತ್ರದ ಶೇ40ರಷ್ಟು ಭಾಗದ ಶೂಟಿಂಗ್ ಮುಗಿದಿದೆ.

ವಿಭಿನ್ನವಾದ ಲವ್, ಫ್ಯಾಮಿಲಿ ಎಂಟರ್‍ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಬಳ್ಳಾರಿ ದಬಾರ್, ತೂಫಾನ್ ಹಾಗೂ 18-25 ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಅವರು ಚಿತ್ರಕತೆ-ಸಂಭಾಷಣೆಗಳನ್ನು ಬರೆದು ನಿರ್ದೇಶಿಸುತ್ತಿದ್ದಾರೆ. ಆರಂಭದಿಂದಲೂ ಚಿತ್ರದ ಕಥೆ ಹಾಗೂ ನಿರೂಪಣೆಗೆ ಒತ್ತುಕೊಡುವುದರೊಂದಿಗೆ ಹೊಸ ಪ್ರತಿಭಗಳನ್ನು ಹಾಕಿಕೊಂಡು ಚಿತ್ರ ಮಾಡುತ್ತಿದ್ದ ಸ್ಮೈಲ್ ಶ್ರೀನು ಅವರು ಈ ಸಲ ಹೊಸಬರ ಜೊತೆ ಚಿತ್ರರಂಗದ ಹೆಸರಾಂತ ಅನುಭವಿ ಕಲಾವಿದರನ್ನು ಕೂಡ ಬಳಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ಚರಣ್ ಅರ್ಜುನ್ ಅವರ ಸಂಗೀತ, ರಿಯಲ್ ಸತೀಶ್ ಅವರ ಸಾಹಸ, ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ವಿ.ಮುರಳಿ ಅವರ ನೃತ್ಯ ನಿರ್ದೇಶನ, ಡಿ.ಮಲ್ಲಿಕ್ ಅವರ ಸಂಕಲನ, ಜನಾರ್ದನ್ ಅವರ ಕಲಾ ನಿರ್ದೇಶನವಿದೆ. ಹಿರಿಯ ನಿರ್ದೇಶಕ ಎಸ್. ನಾರಾಯಣ ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ, ಸಾಧುಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ, ಶಿಲ್ಪಾ, ರವಿ ರಾಮ್‍ಕುಮಾರ್ ಹಾಗೂ ಇತರರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!