oh manase ಓ ಮನಸೇ’ ಹಾಡುಗಳು ರಿಲೀಸ್

ವಿಜಯ ರಾಘವೇಂದ್ರ, ಧರ್ಮ ಕೀರ್ತಿರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಓ ಮನಸೇ’ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.

ಈ ಮೊದಲು ‘ನವರಂಗಿ’ ಸಿನಿಮಾಗೆ ಆಯಕ್ಷನ್-ಕಟ್ ಹೇಳಿದ್ದ ಉಮೇಶ್ ಗೌಡ ‘ಓ ಮನಸೇ’ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈಗಾಗಲೇ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಒಳ್ಳೆ ಪ್ರಶಂಸೆ ಸಿಕ್ಕಿದ್ದು, ಈಗ ಹಾಡುಗಳಿಗೂ ಒಳ್ಳೆ ರೆಸ್ಪಾನ್ಸ್ ಬರುತ್ತಿದೆ. ಇದೊಂದು ನೈಜಘಟನೆ ಆಧಾರಿತ ಸಿನಿಮಾ ಎಂದರು.

ನಟ ವಿಜಯರಾಘವೇಂದ್ರ ಮಾತನಾಡಿ, ‘ಸಿನಿಮಾ ಪ್ರಮೋಷನ್‌ನಲ್ಲಿ ಆಡಿಯೋ ಬಿಡುಗಡೆ ಮುಖ್ಯವಾದ ಹಂತ. ಸಿನಿಮಾ ಮಾಡೋದು ಮುಖ್ಯವಲ್ಲ. ಜನರಿಗೆ ಅದನ್ನು ತಲುಪಿಸುವುದು ಮುಖ್ಯ. ನಿರ್ಮಾಪಕರು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ನಾನು ಪೊಲೀಸ್ ಪಾತ್ರ ಮಾಡಿದ್ದು, ಚಿತ್ರದಲ್ಲಿ ಕಾಮಿಡಿ. ಆಯಕ್ಷನ್, ಲವ್ ಹೀಗೆ ಎಲ್ಲಾ ಅಂಶಗಳಿವೆ. ಇದು ನನಗೆ ಸ್ಪೆಷಲ್ ಸಿನಿಮಾ ಎನ್ನಬಹುದು’ ಎಂದರು.

ನಾಯಕ ಧರ್ಮ ಕೀರ್ತಿರಾಜ್ ಮಾತನಾಡಿ, ‘ಕೊರೋನಾ ಟೈಮ್‌ನಲ್ಲಿ ನನಗೆ ಈ ಸಿನಿಮಾ ಸಿಕ್ಕಿದ್ದು, ಕಮ್ ಬ್ಯಾಕ್ ಜರ್ನಿ ಎನ್ನಬಹುದು. ನಾನು ಈ ಚಿತ್ರದಲ್ಲಿ ಲವರ್ ಬಾಯ್ ಹಾಗೂ ನೆಗಟಿವ್ ಸೈಡ್ ಪಾತ್ರ ಮಾಡಿದ್ದೇನೆ’ ಎಂದು ತಿಳಿಸಿದರು.

ನಾಯಕಿ ಸಂಚಿತಾ ಪಡುಕೋಣೆ ಮಾತನಾಡಿ, ಇದು ತ್ರಿಕೋನ ಪ್ರೇಮ ಕಥೆ ಒಳಗೊಂಡ ಸಿನಿಮಾ. ಈ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ ಎಂದರು.

ಕವಿರಾಜ್, ಡಾ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಎರಡು ಗೀತೆಗಳನ್ನು ಥೈಲ್ಯಾಂಡ್‌ನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದೆ.

ಬಂಡೆ ಚಂದ್ರು, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಚಎಂ.ಆರ್ ಸೀನು ಛಾಯಾಗ್ರಹಣ, ಶ್ರೀನಿವಾಸ್ ಬಾಬು ಸಂಕಲನ, ಧನಂಜಯ ಅವರ ನೃತ್ಯ ನಿರ್ದೇಶನವಿದೆ.

ಕಾರ್ಯಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ ಹರೀಶ್, ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ, ನಟಿ ಶಾನ್ವಿ ಶ್ರೀವಾತ್ಸವ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಅಣಜಿ ನಾಗರಾಜ್, ಪುಟ್ಟಣ್ಣ ಮುಂತಾದವರು ಅಥಿತಿಗಳಾಗಿ ಆಗಮಿಸಿದ್ದರು.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!