ವಿನೋದ್ ಪ್ರಭಾಕರ್ ಪ್ರಮುಖ ಪಾತ್ರದಲ್ಲಿ ನಡೆಸಿರುವ ಫೈಟರ್ ಚಿತ್ರದ ಟ್ರೈಲರ್ ಅಕ್ಟೋಬರ್ 1ರಂದು ಬಿಡುಗಡೆ ಆಗಲಿದೆ.
ಚಿತ್ರದಲ್ಲಿ ರೈತರ ಉಳಿವಿಗಾಗಿ ಹೋರಾಟ ನಡೆಸುವ ಯುವ ನಾಯಕನಾಗಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಅನ್ನ ನೀಡುವ ರೈತರನ್ನು ಉಳಿಸಿಕೊಳ್ಳಬೇಕು ಎನ್ನುವ ಅಂಶ ಇಟ್ಟುಕೊಂಡು ಮನರಂಜನಾತ್ಮಕವಾಗಿ ಕಥೆಯನ್ನು ನಿರ್ದೇಶಕ ನೂತನ್ ಉಮೇಶ್ ಅವರು ಚಿತ್ರದ ಮೂಲಕ ನಿರೂಪಣೆ ಮಾಡುತ್ತಿದ್ದಾರೆ.
ಆಕಾಶ್ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸೋಮಶೇಖರ್ ಕೊಟ್ಟಿಗೆನಹಳ್ಳಿ ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲು ನಿರ್ಮಾಪಕರು ಯೋಜನೆ ರೂಪಿಸಿದ್ದಾರೆ. ಚಿತ್ರ ಅಕ್ಟೋಬರ್ ಆರರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಚಿತ್ರಕ್ಕೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಥಿಯೇಟರ್ ಮಾಲೀಕರು ನಿರ್ಮಾಪಕರಿಗೆ ಕರೆ ಮಾಡಿ ಸಿನಿಮಾವನ್ನು ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಚಿತ್ರದ ನಾಯಕಿಯಾಗಿ ಲೇಖಚಂದ್ರ ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿಯಾಗಿ ಹಿರಿಯ ನಟಿ ನಿರೋಷ ಅವರು ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಗಿರಿಜಾ ಲೋಕೇಶ್, ಕುರಿ ಪ್ರತಾಪ್ ಇತರರು ನಟಿಸಿದ್ದಾರೆ.
ಚಿತ್ರವನ್ನು ಸುಮಾರು 65 ದಿನಗಳ ಕಾಲ ಉತ್ತರ ಕರ್ನಾಟಕದ ಸುತ್ತಮುತ್ತ, ಪಾಂಡಿಚೇರಿ ಹಾಗೂ ಬೆಂಗಳೂರು, ಚಿತ್ರದುರ್ಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಐದು ವಿಭಿನ್ನ ಶೈಲಿಯ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿದೆ.
___

Be the first to comment