ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿ ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕ ಹಾಗೂ ನಟರಿಗೆ ನೋಟಿಸ್ ನೀಡಲಾಗಿದೆ .
ಆಚಾರ್ಯ ಪ್ರಮೋದ್ ಕೃಷ್ಣಂ ಅವರ ವಕೀಲ ಉಜ್ವಲ್ ಆನಂದ್ ಶರ್ಮಾ ಅವರು ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕರು, ನಿರ್ದೇಶಕ ಹಾಗೂ ನಟರಿಗೆ ಕಾನೂನಿನ ಪ್ರಕಾರ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
‘ನಮ್ಮ ಪವಿತ್ರ ಗ್ರಂಥಗಳನ್ನು ವಿರೂಪಗೊಳಿಸುವ ಹಕ್ಕು ಯಾರಿಗೂ ಇಲ್ಲ. ಹಿಂದೂ ಪುರಾತನ ಗ್ರಂಥಗಳ ಪಠ್ಯಗಳನ್ನು ವಿರೂಪಗೊಳಿಸುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಕಲ್ಕಿ ಅವತಾರವು ಭಗವಾನ್ ವಿಷ್ಣುವಿನ ಕೊನೆಯ ಅವತಾರವಾಗಿದೆ. ಈ ಚಿತ್ರದಲ್ಲಿ ಜನರಿಗೆ ತಪ್ಪು ಸಂದೇಶವನ್ನು ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಮತ್ತು ಪವಿತ್ರ ಹಿಂದೂ ಗ್ರಂಥಗಳನ್ನು ತಿರುಚಿದ ಆರೋಪದಡಿ ಕಲ್ಕಿ ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ನಿರ್ದೇಶಕ ನಾಗ ಅಶ್ವಿನ್ ಮತ್ತು ಅಭಿನಯಿಸಿದ ನಟರಿಗೂ ನೋಟಿಸ್ ಕಳುಹಿಸಲಾಗಿದೆ’ ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
ಮಹಾಭಾರತದ ಕುರುಕ್ಷೇತ್ರ ಯುದ್ಧದ ಕಡೆ ದಿನದಂದು ಶುರುವಾಗುವ ‘ಕಲ್ಕಿ 2898 ಎಡಿ’ ಸಿನಿಮಾವು, ಕುರುಕ್ಷೇತ್ರ ಯುದ್ಧ ನಡೆದ 6000 ವರ್ಷಗಳವರೆಗೂ ಸಾಗುತ್ತದೆ. ಜಗತ್ತಿನ ಮೊದಲ ನಗರ ಎಂಬ ಖ್ಯಾತಿಗೆ ಪಾತ್ರವಾದ ಕಾಶಿಯು 2898ರಲ್ಲಿ ಜಗತ್ತಿನ ಕೊನೆ ನಗರವಾಗಿ ಉಳಿದಿರುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣನಿಂದ ಶಾಪ ಪಡೆದ ದ್ರೋಣಾಚಾರ್ಯರ ಪುತ್ರ ಚಿರಂಜೀವಿ ಅಶ್ವತ್ಥಾಮ 2898ರಲ್ಲಿ ಕಾಶಿ ಪಟ್ಟಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಆತ ಅಲ್ಲಿಗೆ ಬರಲು ಕಾರಣವೇನು? ಭೈರವ ಹೆಸರಿನ ಪಾತ್ರ ಮಾಡಿರುವ ಪ್ರಭಾಸ್ ಯಾರು? ನಿಜವಾದ ಕಲ್ಕಿ ಎಲ್ಲಿರುತ್ತಾನೆ? ಈ ಪ್ರಶ್ನೆಗಳೊಂದಿಗೆ ಸಿನಿಮಾ ಸಾಗುತ್ತದೆ.
ಹೀರೋ ಆಗಿ ಪ್ರಭಾಸ್, ಹೀರೋಯಿನ್ ಆಗಿ ದೀಪಿಕಾ ಪಡುಕೋಣೆ, ಪೋಷಕ ಪಾತ್ರಗಳಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪಶುಪತಿ, ಶೋಭನಾ, ಶಾಶ್ವತ ಚಟರ್ಜಿ, ರಾಜೇಂದ್ರ ಪ್ರಸಾದ್, ಬ್ರಹ್ಮಾನಂದಂ, ದಿಶಾ ಪಟಾಣಿ, ಅನ್ನಾ ಬೆನ್ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ವಿಜಯ್ ದೇವರಕೊಂಡ, ರಾಜಮೌಳಿ, ದುಲ್ಖಾರ್ ಸಲ್ಮಾನ್, ಮೃಣಾಲ್ ಠಾಕೂರ್, ರಾಮ್ ಗೋಪಾಲ್ ವರ್ಮಾ, ಕೆ ವಿ ಅನುದೀಪ್ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಮೊದಲ ದಿನ ಈ ಸಿನಿಮಾ 191.50 ಕೋಟಿ ರೂಪಾಯಿ ಗಳಿಸಿತ್ತು.
Be the first to comment