ಹಂಸಲೇಖಗೆ ವಿಚಾರಣೆಗೆ ನೋಟೀಸ್

ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದ ಸೃಷ್ಟಿಸಿರುವ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಇಂದು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಈ ಬಗ್ಗೆ, ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಮಾಹಿತಿ ನೀಡಿದ್ದು, ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆಗೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

ಹಂಸಲೇಖ ಅವರು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ, ”ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋದರು ಎಂಬುದು ಬಹಳ ಸುದ್ದಿಯಾಗಿತ್ತು. ದಲಿತರ ಮನೆಗೆ ಹೋಗಿ ಪೇಜಾವರ ಸ್ವಾಮಿಗಳು ಅಲ್ಲಿ ಕುಳಿತಿದ್ದರಷ್ಟೆ. ಅವರು ಕೋಳಿ ಕೊಟ್ಟರೆ ತಿನ್ನಲಿಕ್ಕಾಗುತ್ತದೇ? ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ಅವರು ತಿನ್ನುತ್ತಿದ್ದರೇ? ಲಿವರ್ ಫ್ರೈ ಕೊಟ್ಟಿದ್ದರೆ ತಿನ್ನುತ್ತಿದ್ದರೇನು?” ಎಂದು ಪ್ರಶ್ನೆ ಮಾಡಿದ್ದರು.

ಅಲ್ಲದೇ, “ಬಲಿತರು ದಲಿತರ ಮನೆಗೆ ಹೋಗುವುದು ಅದೇನು ದೊಡ್ಡ ವಿಷಯ? ಬಲಿತರು ದಲಿತರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಬೇಕು. ಊಟ ಹಾಕಬೇಕು. ಕುಡಿಯಲು ಲೋಟ ಕೊಡಬೇಕು. ಬಳಿಕ ಆ ಲೋಟವನ್ನು ನಾವು ತೊಳೆಯುತ್ತೇವೆ ಎಂದು ಅವರು ಹೇಳಬೇಕು” ಎಂದು ಹಂಸಲೇಖ ಹೇಳಿದ್ದರು.

“ಬಿಳಿಗಿರಿ ರಂಗಯ್ಯ ಸೋಲಿಗರ ಮನೆಗೆ ಹೋಗಿ ಹೆಣ್ಣಿನೊಂದಿಗೆ ಸಂಸಾರ ಮಾಡುವುದರಲ್ಲಿ ಯಾವ ದೊಡ್ಡ ವಿಷಯವಿದೆ? ರಂಗಯ್ಯ ಆ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಸ್ಥಾನದಲ್ಲಿ ಇಟ್ಟು ಗೌರವ ಮಾಡಿದ್ದರೆ ಅದು ರಂಗಯ್ಯನ ತಾಕತ್ತು ಆಗುತ್ತಿತ್ತು. ಬೆಳಕು ಇಲ್ಲದಾಗ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುವುದು ಅದೇನು ದೊಡ್ಡ ವಿಷಯ? ಅದು ನಾಟಕ, ಬೂಟಾಟಿಕೆ” ಎಂದು ಹೇಳಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪರ ವಿರೋಧದ ಅಭಿಪ್ರಾಯ ಕೇಳಿ ಬಂದಿತ್ತು. ಬಳಿಕ ಹಂಸಲೇಖ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಿದ್ದರು. ಕ್ಷಮೆ ಕೋರಿದ ಬಳಿಕವೂ ಹಂಸಲೇಖ ವಿರುದ್ಧ ಪ್ರತಿಭಟನೆ, ದೂರು ದಾಖಲು ಆಗಿದ್ದವು.
___

 

Be the first to comment

Leave a Reply

Your email address will not be published. Required fields are marked *

Translate »
error: Content is protected !!