ವಂಚಕ ಸುಕೇಶ್ ಚಂದ್ರಶೇಖರ್ನ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಇಲಾಖೆಯ ಹಣಕಾಸು ಅಪರಾಧ ವಿಭಾಗವು ಇಂದು ನಟಿ ನೋರಾ ಫತೇಹಿ ಅವರ ವಿಚಾರಣೆ ನಡೆಸುತ್ತಿದೆ.
ಆರೋಪಿ ಸುಕೇಶ್ ಚಂದ್ರಶೇಖರ್ನಿಂದ ಜಾಕ್ವೆಲಿನ್ ಮಾತ್ರವೇ ಅಲ್ಲದೆ ಗ್ಲಾಮರಸ್ ನಟಿ ನೋರಾ ಫತೇಹಿ ಸಹ ಉಡುಗೊರೆಗಳನ್ನು ಪಡೆದಿದ್ದರು ಎನ್ನಲಾಗಿದೆ. ಹೀಗಾಗಿ ಅವರನ್ನು ಹಣಕಾಸು ಅಪರಾಧ ವಿಭಾಗ ವಿಚಾರಣೆ ನಡೆಸಿದೆ.
ಜಾಕ್ವೆಲಿನ್ಗೆ ಮೂರು ಬಾರಿ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದರು. ಆಗಸ್ಟ್ 29 ಹಾಗೂ ಸೆಪ್ಟೆಂಬರ್ 12 ರಂದು ಸಮನ್ಸ್ ನೀಡಿದಾಗ ನಟಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇದೀಗ ಮೂರನೇ ಸಮನ್ಸ್ಗೆ ವಿಚಾರಣೆ ಎದುರಿಸಿದ್ದಾರೆ.
ಕಳೆದ ವರ್ಷ ಎರಡು ಬಾರಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ವಿಚಾರಣೆ ಸಂದರ್ಭದಲ್ಲಿ ತಾನು ಸುಕೇಶ್ ಚಂದ್ರಶೇಖರ್ ನಿಂದ ದುಬಾರಿ ಉಡುಗೊರೆ ಪಡೆದಿದ್ದಾಗಿ ಅವರು ಒಪ್ಪಿಕೊಂಡಿದ್ದರು. ಆದರೆ ತಮಗೆ ಸುಕೇಶ್ನ ಪರಿಚಯವಾಗಲಿ, ಆತನ ಹಿನ್ನೆಲೆ, ಆದಾಯದ ಮೂಲದ ಬಗ್ಗೆ ಪರಿಚಯ ಇರಲಿಲ್ಲವೆಂದು ಹೇಳಿದ್ದರು. ಪ್ರಕರಣದಲ್ಲಿ ನೋರಾ ಅನ್ನು ಸಾಕ್ಷಿಯನ್ನಾಗಿ ಇಡಿ ಅಧಿಕಾರಿಗಳು ಪರಿಗಣಿಸಿದ್ದರು.
ನಟಿ ಜಾಕ್ವೆಲಿನ್ ಫರ್ನಾಂಡೀಸ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು ಪ್ರಕರಣದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್, ಸುಕೇಶ್ ಜೊತೆ ಆಪ್ತ ಸಂಬಂಧ ಇರಿಸಿಕೊಂಡಿದ್ದರು. ಹಲವು ದುಬಾರಿ ಉಡುಗೊರೆಗಳನ್ನು ಸುಕೇಶ್ನಿಂದ ಪಡೆದಿದ್ದು, ತನ್ನ ಸಹೋದರನಿಗೂ ಸುಕೇಶ್ನಿಂದ ಹಣ ಕೊಡಿಸಿದ್ದರು.
_________





Be the first to comment