ಚಿತ್ರ: ‘ನೋಡಿದವರು ಏನಂತಾರೆ’
ನಿರ್ದೇಶಕ: ಕುಲದೀಪ್ ಕಾರಿಯಪ್ಪ
ನಿರ್ಮಾಪಕ: ನಾಗೇಶ್ ಗೋಪಾಲ್
ತಾರಾಗಣ: ನವೀನ್ ಶಂಕರ್, ಅಪೂರ್ವ ಭಾರದ್ವಾಜ್, ಪದ್ಮಾವತಿ ರಾವ್, ಸೋನು ಗೌಡ ಇತರರು
ರೇಟಿಂಗ್: 3.5
ಪ್ರತಿಯೊಬ್ಬರ ಬದುಕಿನಲ್ಲಿ ಬರುವ ಹಲವು ಪ್ರಶ್ನೆಗಳಿಗೆ ವೇದಿಕೆಯಾಗಿ ಈ ವಾರ ತೆರೆಗೆ ಬಂದಿರುವ ಚಿತ್ರ ‘ನೋಡಿದವರು ಏನಂತಾರೆ’.
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನಾಯಕನಿಗೆ ಬ್ರೇಕ್ ಅಪ್ ನೋವು ಕಾಡುತ್ತಿರುತ್ತದೆ. ಚಿಕ್ಕವಯಸ್ಸಿನಲ್ಲಿ ತನ್ನನ್ನು ಬಿಟ್ಟುಹೋದ ತಾಯಿಯ ಜೊತೆಗೆ ಈ ನೋವು ಅವನನ್ನು ಮಹಿಳಾ ವರ್ಗವನ್ನು ದ್ವೇಷ ಮಾಡುವಂತೆ ಮಾಡುತ್ತದೆ. ಒಂಟಿಯಾಗಿ ಜೀವನ ನಡೆಸುವ ನಾಯಕನಿಗೆ ಇನ್ನೊಂದು ಕಡೆ ಸಂಗಾತಿಯ ಬಯಕೆ ಇರುತ್ತದೆ. ಈ ರೀತಿಯ ಇಬ್ಬಂದಿತನದ ಮನೋಸ್ಥಿತಿಯನ್ನು ಚಿತ್ರ ವಿವರಿಸುತ್ತದೆ.
ಚಿತ್ರದ ಮೊದಲಾರ್ಧದಲ್ಲಿ ಕಾರ್ಪೊರೇಟ್ ಜಗತ್ತಿನ ಬೂಟಾಟಿಕೆ, ಒತ್ತಡದ ಬದುಕು, ಅಗತ್ಯಕ್ಕೆ ತಕ್ಕಂತೆ ಹುಟ್ಟಿ ಸಾಯುವ ಸಂಬಂಧಗಳು ಇವೆಲ್ಲದರ ಬಗ್ಗೆ ಚಿತ್ರಣ ಇದೆ. ಆನಂತರದ ಭಾಗದಲ್ಲಿ ಸ್ವತಂತ್ರವಾಗಿ ಬದುಕಲು ಇಷ್ಟಪಡುವ ಮಹಿಳೆಗೆ ಅಡ್ಡಿಯಾಗುವ ಸಮಾಜದ ಧೋರಣೆಯ ಬಗ್ಗೆ ಮಾತುಗಳಿವೆ.
ಚಿತ್ರ ಕ್ಲಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಇಲ್ಲಿ ತಾಯಿ ಮಗನ ಸೆಂಟಿಮೆಂಟ್ ಇದೆ. ಅಬ್ಬರದ ಡೈಲಾಗ್ ಇಲ್ಲ. ಅತಿರೇಕದ ವೈಭವೀಕರಣ ಕಂಡು ಬರುವುದಿಲ್ಲ. ನಿರೂಪಣೆ ನಿಧಾನವಾಗಿ ಸಾಗುತ್ತದೆ.
ಮಯೂರೇಶ್ ಅಧಿಕಾರಿ ಹಿನ್ನೆಲೆ ಸಂಗೀತ ಸಿನಿಮಾಗೆ ಫೀಲ್ ನೀಡಿದೆ. ಅತಿಥಿ ಪಾತ್ರಕ್ಕೆ ಸೋನು ಗೌಡ ಪಾತ್ರ ಸೀಮಿತ ಆಗಿದೆ. ನವೀನ್ ಶಂಕರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಪೂರ್ವ ಭಾರದ್ವಾಜ್ ನಟನೆ ಉತ್ಸಾಹ ಮೂಡಿಸುತ್ತದೆ. ಪದ್ಮಾವತಿ ರಾವ್ ಕ್ಲೈಮಾಕ್ಸ್ ಗೆ ಜೀವ ತುಂಬಿದ್ದಾರೆ.
ಒಟ್ಟಾರೆ ಚಿತ್ರ ‘ಏನಂತಾರೆ’ ಎನ್ನುವುದನ್ನು ಬದಿಗಿಟ್ಟರೆ ಏನಾಗುತ್ತದೆ ಎನ್ನುವ ಸಂದೇಶ ನೀಡುತ್ತದೆ. ಕಮರ್ಷಿಯಲ್ ಚಿತ್ರಕ್ಕಿಂತ ಭಿನ್ನವಾಗಿ ಈ ಚಿತ್ರ ಮೂಡಿ ಬಂದಿದೆ.
Be the first to comment