ನಿಮಗೊಂದು ಸಿಹಿ ಸುದ್ದಿʼ
ಇದು ಗರ್ಭ ಧರಿಸಿದ ಪುರುಷನ ಸುತ್ತಲಿನ ಕತೆ…
ವೆಬ್ ಸರಣಿಯಲ್ಲಿ ನಗುವಿನ ಜೊತೆ ರೋಚಕ ಕತೆ
ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ.. ಹೆಣ್ಣು ಹೆಣ್ಣ ಮದುವೆಯಾಗೋ ಮೋಹ ಬಂತಯ್ಯ.. ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ – ಹೀಗೊಂದು ಹಾಡಿನ ಸಾಲನ್ನು ಕೇಳಿರುತ್ತೀರಿ. ಈ ಹಾಡಿನ ಸಾಲುಗಳನ್ನು ನಿಜವಾಗಿಸುವಂತೆ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು LG BT Q ಕಥೆಯನ್ನಾಧರಿಸಿದ ಸಿನಿಮಾಗಳು ರೂಪುಗೊಂಡಿವೆ. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ!
ಹೆಣ್ಣು ಗರ್ಭಧರಿಸಿದಾಗ, ಪರೀಕ್ಷಿಸಿದ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು ವಾಡಿಕೆ. ಅದೇ ಒಬ್ಬ ಪುರುಷನನ್ನು ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಅಂದರೆ, ಎಂಥವರಿಗಾದರೂ ಆಶ್ಚರ್ಯವಾಗುವುದಿಲ್ಲವಾ? ಗಂಡಸು ಗರ್ಭ ಧರಿಸುತ್ತಾನೆ ಅನ್ನೋ ಕಲ್ಪನೆಯೇ ಒಂಥರಾ ವಿಲಕ್ಷಣ ಎನ್ನುವ ವಾತಾವರಣವೇ ಈ ಕ್ಷಣಕ್ಕೂ ಜಗದಗಲ ಚಾಲ್ತಿಯಲ್ಲಿದೆ. ಹೀಗಿರುವಾಗ ಅದನ್ನು ವೆಬ್ ಸರಣಿಯ ಸರಕಾಗಿಸಿರುವ ತಂಡದ ಧೈರ್ಯ ಬಲು ದೊಡ್ಡದು. ಸದ್ಯ ಲೋಕಾರ್ಪಣೆಗೊಂಡಿರುವ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರು ವ್ಯಾಪಕವಾಗಿ ವೈರಲ್ ಆಗಿದೆ. ಕನ್ನಡದ ಮಟ್ಟಿಗೆ ಇದು ಹೊಚ್ಚಹೊಸ ಕಾನ್ಸೆಪ್ಟ್ ಆಗಿರುವುದರಿಂದ ನೋಡಿದ ಎಲ್ಲರ ಗಮನ ಸೆಳೆದಿದೆ. ಒಂದೇ ದಿನದಲ್ಲಿ ಈ ಪೋಸ್ಟರ್ 8 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.
ಅರ್ಜುನ್ ಮತ್ತು ಡಿಡಿ ಎಂಬಿಬ್ಬರು ದೋಸ್ತಿಗಳು. ಅದರಲ್ಲಿ ಅರ್ಜುನ್ ಸೆಲೆಬ್ರಿಟಿ ಬಾಣಸಿಗರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅದೊಂದು ದಿನ ಅರ್ಜುನ್ ಉದರದಲ್ಲಿ ಕೂಸುಂದು ಪ್ರತಿಷ್ಟಾಪನೆಗೊಂಡಿರುತ್ತದೆ. ಈ ಯುವಕ ಗರ್ಭ ಧರಿಸಿದ್ದು ಹೇಗೆ? ಹಿಂದಿನ ತಿಂಗಳಲ್ಲಿ ಏನೇನು ವಿಚಾರಗಳು ಘಟಿಸಿರುತ್ತವೆ? ಈ ನಡುವೆ ಗರ್ಭ ಧರಿಸಿದ ಹುಡುಗನ ಪ್ರಿಯತಮೆ ಹೇಗೆ ಪ್ರತಿಕ್ರಿಯಿಸುತ್ತಾಳೆ? ಏನೆಲ್ಲಾ ಅವಾಂತರಗಳು ಎದುರಾಗುತ್ತವೆ? ಉದ್ಭವಿಸುವ ಪ್ರತಿಯೊಂದು ಗೊಂದಲಗಳು ಪ್ರೇಕ್ಷಕರನ್ನು ಹೇಗೆ ನಗುವಿನಲ್ಲಿ ಮುಳುಗಿಸುತ್ತದೆ ಅನ್ನೋ ಕೌತುಕಗಳೆಲ್ಲಾ 8 ಎಪಿಸೋಡುಗಳ ಈ ರೋಚಕ ಮತ್ತು ಹಾಸ್ಯಭರಿತ ವೆಬ್ ಸರಣಿಯಲ್ಲಿ ಬಿಚ್ಚಿಕೊಳ್ಳಲಿದೆ.
ಗೋಲ್ಡ್ ಚೈನ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಪ್ರಯೋಗವಿದು. ಉಪೇಂದ್ರ ಅವರ ಟೋಪಿವಾಲಾ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸುಧೀಂದ್ರ ನಾಡಿಗರ್ ಆರ್ ಈ ವೆಬ್ ಸಿರೀಸ್ ಮೂಲಕ ನಿರ್ದೇಶಕರಾಗಿ ಕಾರ್ಯಾರಂಭ ಮಾಡುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಿಂದ ಪರಿಚಯಗೊಳ್ಳುತ್ತಿದ್ದಾರೆ. ಇಷ್ಟಕಾಮ್ಯ ಸೇರಿದಂತೆ ಕನ್ನಡದ ಕೆಲವಾರು ಸಿನಿಮಾಗಳಲ್ಲಿ ನಟಿಸಿರುವ ಕಾವ್ಯಾ ಶೆಟ್ಟಿ ನಾಯಕಿಯಾಗಿದ್ದಾರೆ. ಉರ್ವಿ ಸಿನಿಮಾದ ಮೂಲಕ ಛಾಯಾಗ್ರಹಣದಲ್ಲಿ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟ ಆನಂದ್ ಸುಂದರೇಶ್ ಛಾಯಾಗ್ರಹಣ ವಿರುವ ಈ ಸರಣಿಯ ಕ್ರಿಯೇಟೀವ್ ತಂಡದಲ್ಲಿ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣ ಹಾಗೂ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಪ್ರಿಯಾಂಕಾ ಎಂ ಆರ್, ಜಗದೀಶ್ ಸಿಂಗ್, ಯೋಗೇಶ್ ನಂಜಪ್ಪ, ಪ್ರಕಾಶ್ ಎಸ್ಆರ್, ಅನಿಲ್ ಕುಮಾರ್, ಅಕ್ಷೋಭ್ಯಾ, ಪ್ರಶಾಂತ್ ಆರ್ ಮತ್ತು ಮಂಜುನಾಥ್ ಸಿಂಗ್, ಪ್ರಜ್ವಲ್ ಮುದ್ದಿ ಕೆಲಸ ಮಾಡಲಿದ್ದಾರೆ.
ಕಾಫಿ ಡೇ ಈ ಸರಣಿಯ ಬ್ರಾಂಡ್ ಪಾರ್ಟ್ನರ್ ಕೂಡಾ ಆಗಿರುವುದರಿಂದ ಅಲ್ಲಿಯೇ ʻನಿಮಗೊಂದು ಸಿಹಿ ಸುದ್ದಿʼಯ ಪೋಸ್ಟರ್ ಅನ್ನು ವಿನೂತನವಾಗಿ ಅನಾವರಣ ಮಾಡಲಾಗಿದೆ. ಜನಸಾಮಾನ್ಯರೇ ಇದ್ದಲ್ಲಿಂದಲೇ ಸ್ಕ್ರಾಚ್ ಕಾರ್ಡ್ ಲಿಂಕ್ ಶೇರ್ ಮಾಡುವ ಮೂಲಕ ಫಸ್ಟ್ ಲುಕ್ ಲಾಂಚ್ ಮಾಡಿದ್ದಾರೆ. ಮೊದಲೇ ಬಿಡುಗಡೆಗೊಂಡಿದ್ದ ಲಿಂಕ್ ಕ್ಲಿಕ್ ಮಾಡಿದರೆ, ಅದು ರೀ ಡೈರೆಕ್ಟ್ ಮಾಡುತ್ತದೆ. ಅಲ್ಲಿ ಸ್ಕ್ರಾಚ್ ಮಾಡಬಹುದು, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಬಹುದು. ಹಾಗೆ ಶೇರ್ ಮಾಡಿದ ಕೆಲವರನ್ನು ಆಯ್ಕೆ ಮಾಡಿಕೊಂಡು, ಅವರಿಗೆ ನಡೆಯಲಿರುವ ಸಮಾರಂಭದಲ್ಲಿ ವಿಶೇಷ ಉಡುಗೊರೆಯನ್ನೂ ನೀಡಲಾಗುತ್ತಿದೆ.
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನ ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ. ಹೊಸತು ಅನ್ನೋ ಪದಕ್ಕೇ ಅನ್ವರ್ಥವಾಗಿರುವ ಆಲೋಚನೆಯೊಂದಿಗೆ ಯುವ ಪ್ರತಿಭೆಗಳೆಲ್ಲಾ ಸೇರಿ ʻನಿಮಗೊಂದು ಸಿಹಿ ಸುದ್ದಿʼ ನೀಡಲು ಮುಂದಾಗಿದೆ. ಸದ್ಯ ಕಾನಿ ಸ್ಟುಡಿಯೋ ವಿನ್ಯಾಸಗೊಳಿಸಿರುವ ಪೋಸ್ಟರ್ ಎಲ್ಲರ ಗಮನ ಸೆಳೆದಿರುವುದರೊಂದಿಗೆ, ಚರ್ಚೆಯ ವಸ್ತುವೂ ಆಗಿದೆ!
Pingback: CI CD Solutions
Pingback: Devops Companies