ಚಿತ್ರ: ನೈಟ್ ರೋಡ್
ನಿರ್ಮಾಣ ಹಾಗೂ ನಿರ್ದೇಶನ: ಗೋಪಾಲ್ ಹಳೇಪಾಳ್ಯ
ತಾರಾಗಣ: ಧರ್ಮ, ರವಿ ಕಿಶೋರ್, ಮಂಜು ಮೈಸೂರು, ಸುರೇಖಾ, ಚಂದ್ರು ಇತರರು
ರೇಟಿಂಗ್: 3.5
ಹಿಂದಿನ ಜನ್ಮದ ಪಾಪದ ಕರ್ಮಗಳು ಮನುಷ್ಯನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತೋರಿಸುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ನೈಟ್ ರೋಡ್.
ಹೈವೇ ರಸ್ತೆಯಲ್ಲಿ ಪ್ರತೀ ಅಮಾವಾಸ್ಯೆಯ ದಿನ ಅಪಘಾತ ನಡೆದು ಜನಗಳು ಸಾಯುತ್ತಿರುತ್ತಾರೆ. ಒಂದು ಬಾರಿ ಪೊಲೀಸ್ ಇನ್ಸ್ಪೆಕ್ಟರ್ ಸಹೋದರ ಇಲ್ಲಿ ಸಾಯುತ್ತಾನೆ. ಇದಕ್ಕೆ ಕಾರಣ ಹುಡುಕುವ ಇನ್ಸ್ಪೆಕ್ಟರ್ ಗೆ ಹಲವು ವಿಚಿತ್ರ ಸತ್ಯಗಳು ಗೋಚರವಾಗುತ್ತವೆ. ಈ ಸತ್ಯಗಳು ಏನು ಎನ್ನುವುದನ್ನು ತಿಳಿಯಲು ಚಿತ್ರವನ್ನು ನೋಡಬೇಕಿದೆ.
ನಿರ್ದೇಶಕ ಗೋಪಾಲ್ ಹಳೆಪಾಳ್ಯ ಅವರು ಯಾವುದೇ ಗೊಂದಲ ಇಲ್ಲದೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಕರ್ಮಗಳು ಯಾವ ರೀತಿ ಮನುಷ್ಯನನ್ನು ಈ ಜನ್ಮದಲ್ಲಿ ಸುತ್ತಿಕೊಳ್ಳುತ್ತವೆ ಎನ್ನುವುದನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಎಲ್ಲಾ ಘಟನೆಗಳನ್ನು ಸರಿಯಾಗಿ ಜೋಡಿಸಿ ನಿರ್ದೇಶಕರು ಪ್ರೇಕ್ಷಕರ ಮುಂದೆ ಬಿಗಿಯಾಗಿ ಕಥೆಯನ್ನು ಇಟ್ಟಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧರ್ಮ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರಕಥೆಯನ್ನು ಅವರು ಹೆಗಲ ಮೇಲೆ ಹೊತ್ತಂತೆ ಕಾಣಿಸುತ್ತಾರೆ. ಧರ್ಮ ಪತ್ನಿಯಾಗಿ ಜ್ಯೋತಿ ರೈ ಸಹಜ ಅಭಿನಯದಲ್ಲಿ ಕಾಣಿಸಿಕೊಂಡಿದ್ದಾರೆ. ಗೋವಿಂದೇ ಗೌಡ, ರವಿ ಕಿಶೋರ್, ಸುರೇಖಾ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ಬೇಕಾಗಿರುವ ಎಲ್ಲಾ ಗುಣಗಳನ್ನು ಹೊಂದಿರುವ ನೈಟ್ ರೋಡ್ ಸಿನಿ ಪ್ರೇಕ್ಷಕರಿಗೆ ಉತ್ತಮ ಮನೋರಂಜನೆಯನ್ನು ನೀಡುತ್ತದೆ. ಸಿನಿಮಾದ ಕ್ಯಾಮೆರಾ ಕೆಲಸ ಚೆನ್ನಾಗಿದೆ. ಡ್ರೋನ್ ಕ್ಯಾಮರಾದಲ್ಲಿ ಹೈವೇ ರಸ್ತೆಯನ್ನು ಕುತೂಹಲಕರಾಗಿ ಚಿತ್ರಿಸಿ ಪ್ರೇಕ್ಷಕರ ಮುಂದೆ ಚಿತ್ರತಂಡ ಇಟ್ಟಿದೆ.
Be the first to comment