ಲಾಕ್ ಡೌನ್ ಸಮಯದಲ್ಲಿ ಕೋವಿಡ್ ಮಹಾಮಾರಿ ಮನುಷ್ಯನ ಬದುಕಿಗೆ ಕಲಿಸಿದ ಪಾಠಗಳು ಸಾಕಷ್ಟು ಇವೆ. ಆಸ್ಪತ್ರೆ ಸಿಗದೆ ಪರದಾಟ, ಸಾವು, ನೋವು… ಬದುಕಿನಿಂದ ಬಿಟ್ಟುಹೋದವರ ಚಿತೆಗೆ ಕುಟುಂಬಸ್ಥರು ಅಗ್ನಿ ಸ್ಪರ್ಶ ಮಾಡಲೂ ಸಾಧ್ಯವಾಗದಂತಹ ಕರಾಳ ಸ್ಥಿತಿಯನ್ನು ಈ ಮಹಾಮಾರಿ ಸೃಷ್ಟಿಸಿತ್ತು. ಎಲ್ಲ ಸನ್ನಿವೇಶಗಳನ್ನಿಟ್ಟುಕೊಂಡು ಹೆಣೆದ ಚಿತ್ರವೇ ‘ನೈಟ್ ಕರ್ಫ್ಯೂ’ ಈ ವಾರ ಬಿಡುಗಡೆಯಾಗಿದೆ.
ಈ 3 ವರ್ಷಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಹಲವು ಚಿತ್ರಗಳು ಬಂದಿವೆ. ಮಾಲಾಶ್ರೀ ಅಭಿನಯದ ‘ನೈಟ್ ಕರ್ಫ್ಯೂ’ ಸಹ ಲಾಕ್‍ಡೌನ್ ಸಮಯವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂದು ಸಾರುವ ಇನ್ನೊಂದು ಚಿತ್ರ.
ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಮಾಲಾಶ್ರೀ ಮತ್ತು ರಂಜನಿ ರಾಘವನ್ ಇಬ್ಬರೂ ವೈದ್ಯರು. ಕರೋನಾ ಉತ್ತುಂಗದಲ್ಲಿದ್ದ ಕಾಲ. ಕರೋನಾ ಪೀಡಿತ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಇಲ್ಲದಂತಹ ಸನ್ನಿವೇಶ. ಆಗ ಇವರ ಆಸ್ಪತ್ರೆಗೆ ಮಹಿಳೆಯೊಬ್ಬರನ್ನು ಕರೆತರಲಾಗುತ್ತದೆ. ಆಕೆಯನ್ನು ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸುತ್ತಿರುವಾಗಲೇ ಆಕೆಯ ಜೀವ ಹೋಗಿರುತ್ತದೆ. ಇಲ್ಲಿಂದ ಚಿತ್ರದ ಕಥೆ ಪ್ರಾರಂಭವಾಗುತ್ತದೆ.
ಇಡೀ ಚಿತ್ರದ ಕಥೆ ಒಂದು ಆಸ್ಪತ್ರೆಯಲ್ಲಿ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತದೆ. ಅದನ್ನು ನೋಡಿ ಇದೊಂದು ಮೆಡಿಕಲ್ ಮಾಫಿಯಾ ಕುರಿತಾದ ಚಿತ್ರ, ಲಾಕಡೌನ್ ಸಮಯದಲ್ಲಿ ವೈದ್ಯಕೀಯ ವ್ಯವಸ್ಥೆಯನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳಲಾಯಿತು ಎಂದು ಸಾರುವ ಚಿತ್ರ ಎಂದನಿಸಬಹುದು. ಅಲ್ಲೇ ಇರೋದು ಟ್ವಿಸ್ಟ್. ಹಾಗೆ ನೋಡಿದರೆ, ಇದಕ್ಕೂ ಮೆಡಿಕಲ್ ಮಾಫಿಯಾಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಾವಿನ ಸುತ್ತ ನಡೆಯುವ ಸಂಚಿನ ಕುರಿತಾದ ಚಿತ್ರ.
ಮಾಲಾಶ್ರೀ ಚಿತ್ರ ಎಂದ ಮೇಲೆ ಆರು ಫೈಟುಗಳಿರಬಹುದು ಅಂದುಕೊಂಡರೆ ಅದು ತಪ್ಪು. ಚಿತ್ರದ ಕೊನೆಯಲ್ಲಿ ಒಂದು ಫೈಟಿದೆ ಮತ್ತು ಮಾಲಾಶ್ರೀ ಎಂದಿನಂತೆ ಚೆನ್ನಾಗಿ ಹೊಡೆದಾಡಿದ್ದಾರೆ. ಮಿಕ್ಕಂತೆ ಇಡೀ ಚಿತ್ರವನ್ನು ಅವರು ಹೆಗಲ ಮೇಲೆ ಹೊತ್ತು ಓಡಾಡಿದ್ದಾರೆ. ಮಾಲಾಶ್ರೀ ಜೊತೆಗೆ ಮಿಂಚುವ ಮತ್ತೊಬ್ಬರೆಂದರೆ ಅದು ಪ್ರಮೋದ್ ಶೆಟ್ಟಿ. ಪ್ರಮೋದ್, ಮಾಲಾಶ್ರೀ ಎದುರು ಒಬ್ಬ ಖಡಕ್ ವಿಲನ್ ಆಗಿ ಕಂಗೊಳಿಸಿದ್ದಾರೆ. ಬಲ ರಾಜವಾಡಿ, ವರ್ಧನ್ ತೀರ್ಥಹಳ್ಳಿ, ಅಶ್ವಿನ್ ಹಾಸನ್, ರಂಜನಿಗೆ ಹೆಚ್ಚು ಕೆಲಸವಿಲ್ಲ. ಅವರೆಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಂಗಾಯಣ ರಘು ಹೀಗೆ ಬಂದು ಹಾಗೆ ಹೋಗುತ್ತಾರೆ.
ಇಡೀ ಚಿತ್ರವನ್ನು ರಾತ್ರಿ ಕಟ್ಟಿಕೊಟ್ಟಿರುವ ಛಾಯಾಗ್ರಾಹಕ ಪ್ರಮೋದ್ ಭಾರತೀಯ ಶ್ರಮ ಕಾಣುತ್ತದೆ. ಚಿತ್ರದಲ್ಲಿ ಹಾಡುಗಳಿಲ್ಲ. ಒಂದು ಸಸ್ಪೆನ್ಸ್ ಚಿತ್ರಕ್ಕಿರಬೇಕಿದ್ದ ಹಿನ್ನೆಲೆ ಸಂಗೀತ ಇಲ್ಲಿ ಮಿಸ್ಸಾಗಿದೆ.
ಕಥಾವಸ್ತುವಿಗೆ ತಕ್ಕಂತೆ ಕಥೆಯನ್ನು ನಿರ್ದೇಶಕರು ನಿರೂಪಿಸಿದ್ದಾರೆ. ಕರೋನಾದಲ್ಲಿದ್ದ ಭಯ, ಕೊಲೆಯ ಸುತ್ತಲಿನ ಕುತೂಹಲಗಳು ದೃಶ್ಯಗಳಾಗಿ ಇನ್ನಷ್ಟು ಗಟ್ಟಿಯಾಗಬೇಕಿತ್ತು. ಅನ್ನಿಸುತ್ತೆ.
Be the first to comment