ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ಪ್ರಮುಖ ರಾಜ್ಯಕ್ಕೆ ಪಕ್ಷಗಳು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಉಚಿತ ಯೋಜನೆ ಘೋಷಿಸುವ ಮೂಲಕ ಮತದಾರರನ್ನು ತಮ್ಮ ಕಡೆಗೆ ಸೆಳೆಯುವ ಯತ್ನ ಮಾಡಿವೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತ ನೀಡುವುದು, ನಿರುದ್ಯೋಗ ಭತ್ಯೆ ಆಗಿ ಪದವಿದರರಿಗೆ 3000 ರು , ಡಿಪ್ಲೋಮೋ ಪದವೀಧರರಿಗೆ 1500 ರೂಪಾಯಿ, ಅನ್ನ ಭಾಗ್ಯ ಯೋಜನೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ, ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂಪಾಯಿ, ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ, ಪಿ ಎಫ್ ಐ ಹಾಗೂ ಬಜರಂಗದಳಗಳನ್ನು ನಿಷೇಧ ಮಾಡುವುದಾಗಿ ಹೇಳಿದೆ.
ಭಾರತೀಯ ಜನತಾ ಪಕ್ಷ ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ 3 ಅಡಿಗೆ ಅನಿಲ ಸಿಲೆಂಡರ್ ಗಳನ್ನು ಉಚಿತವಾಗಿ ವಿತರಿಸುವುದು, ಮಹಾನಗರ ಪಾಲಿಕೆಯ ಪ್ರತಿ ವಾರ್ಡಿನಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಕೈಗೆಟಕುವ ದರದಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ, ಪೋಷಣೆ ಯೋಜನೆಯ ಹೆಸರಿನಲ್ಲಿ ಬಿಪಿಎಲ್ ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ನಂದಿನಿ ಹಾಲು, ಪ್ರತಿ ತಿಂಗಳು 5 ಕೆಜಿ ಅನ್ನ, ಸಿರಿಧಾನ್ಯವನ್ನು ಒಳಗೊಂಡ ಪಡಿತರ ಕಿಟ್ ನೀಡಲಾಗುವುದು, ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ತಿಳಿಸಿದೆ.
ಜೆಡಿಎಸ್ ಬಿಪಿಎಲ್ ಕುಟುಂಬಗಳಿಗೆ ಪ್ರತಿವರ್ಷ ಐದು ಅಡಿಗೆ ಅನಿಲ ಸಿಲಿಂಡರ್ ಉಚಿತ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ಕೃಷಿ ಕಾರ್ಮಿಕ ಕುಟುಂಬಕ್ಕೆ ತಿಂಗಳಿಗೆ 2 ಸಾವಿರ ರೂಪಾಯಿ, ಆಟೋ ಡ್ರೈವರ್, ನೊಂದಾಯಿತ ಸೆಕ್ಯೂರಿಟಿ ಗಾರ್ಡ್ ಗಳಿಗೆ ತಿಂಗಳಿಗೆ 2000 ರೂ. ಸಹಾಯಧನ, ಹಿರಿಯ ನಾಗರಿಕರ ಪೆನ್ಷನ್ 5000 ರೂಪಾಯಿಗೆ ಏರಿಕೆ ಮಾಡಲಾಗುವುದೆಂದು ತಿಳಿಸಿದೆ.
ಜೆಡಿಎಸ್ ಕೃಷಿ ಪಂಪ್ ಸೆಟ್ ಗಳಿಗೆ 24 ಗಂಟೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದೆ. ಆದರೆ ಇದು ಸಿಂಗಲ್ ಫೇಸೇ ಅಥವಾ ಮೂರು ಫೇಸೇ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲ. ರೈತ ಯುವಕರನ್ನು ಮದುವೆಯಾದ ಯುವತಿಯರಿಗೆ 2 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ. ಪ್ರತಿ ಎಕರೆಗೆ 10,000 ರೂ. ಸಹಾಯಧನ ನೀಡುವುದಾಗಿ ಹೇಳಿದೆ. ಆದರೆ ರೈತರ ಅರ್ಹತೆಯ ಬಗ್ಗೆ ಇಲ್ಲಿ ಸ್ಪಷ್ಟವಾಗಿ ಮಾಹಿತಿ ನೀಡಿಲ್ಲ.
ರಾಷ್ಟ್ರೀಯ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಘೋಷಣೆ ಮಾಡಿರುವ ಉಚಿತ ಯೋಜನೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇವುಗಳನ್ನು ಈಡೇರಿಸಲು ಹಣ ಹೊಂದಿಕೆ ಎಲ್ಲಿಂದ ಮಾಡಲಾಗುತ್ತದೆ? ಬಹುತೇಕ ಉಚಿತ ಯೋಜನೆಗಳು ಎಲ್ಲವೂ ಸುಳ್ಳು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಶಿಕ್ಷಣ ಆರೋಗ್ಯ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ಒಳ್ಳೆಯ ಯೋಜನೆಗಳನ್ನು ಜಾರಿ ಮಾಡಬೇಕು. ಬೇಕಾಬಿಟ್ಟಿ ಉಚಿತ ಯೋಜನೆಗಳನ್ನು ಘೋಷಣೆ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಚಿತವಾಗಿ ಅಕ್ಕಿ, ಪಡಿತರ ನೀಡುವುದರಿಂದ ಇದನ್ನು ಬೆಳೆಯುವ ರೈತರ ವಸ್ತುಗಳಿಗೆ ಯಾವುದೇ ಬೆಲೆ ಇಲ್ಲವಾಗುತ್ತದೆ. ಈ ರೀತಿಯ ಯೋಜನೆ ಒಳ್ಳೆಯದಲ್ಲ. ರಾಜಕೀಯ ಪಕ್ಷಗಳು ಈ ರೀತಿಯ ಘೋಷಣೆ ಮಾಡುವ ಮುನ್ನ ಸಾಕಷ್ಟು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ಪಕ್ಷಗಳು ಹೊರಡಿಸಿರುವ ಪ್ರಣಾಳಿಕೆಗಳ ಉಚಿತ ಯೋಜನೆಗಳಿಗೆ ಹಣ ಹೊಂದಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸಿ ಆದಾಯ ವೃದ್ಧಿ ಮಾಡುವ ಬಗ್ಗೆ ಮಾಹಿತಿಗಳು ಇಲ್ಲ. ಪೆಟ್ರೋಲ್, ಡೀಸೆಲ್ ಇವುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ, ಜನರ ಮೇಲೆ ಈಗಾಗಲೇ ಹೆಚ್ಚಾಗಿರುವ ತೆರಿಗೆಯನ್ನು ಇಳಿಕೆ ಮಾಡುವ ಬಗ್ಗೆ ಯಾವುದೇ ಪಕ್ಷಗಳು ಮಾತನಾಡಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ವಸತಿ, ಪಡಿತರ ವ್ಯವಸ್ಥೆ ಬಗ್ಗೆ ರಾಜಕೀಯ ಪಕ್ಷಗಳು ಮಾತನಾಡುವುದು ನಾಚಿಕೆಗೇಡು. ಈ ರಾಜ್ಯದಲ್ಲಿ ಆಗಿರುವ ಅಭಿವೃದ್ಧಿಯಾದರೂ ಏನು ಎಂದು ಸಾರ್ವಜನಿಕರು ಟೀಕೆ ಮಾಡಿದ್ದಾರೆ.
ಚುನಾವಣೆ ಬಳಿಕ ಅಧಿಕಾರಕ್ಕೆ ಬರುವ ಪಕ್ಷಗಳು ತಮ್ಮ ಪ್ರಣಾಳಿಕೆಯನ್ನು ಯಾವ ರೀತಿ ಈಡೇರಿಸುತ್ತದೆ? ಇದರ ಫಲ ಎಷ್ಟು ಜನರಿಗೆ ಸಿಗುತ್ತದೆ? ಯಾವ ರೀತಿ ಉಚಿತ ಯೋಜನೆಗಳಿಗೆ ಹಣ ಹೊಂದಿಸುತ್ತದೆ ಎಂದು ಕಾದು ನೋಡಬೇಕಿದೆ. ಆಗ ರಾಜಕೀಯ ಪಕ್ಷಗಳ ನಿಜವಾದ ಬಂಡವಾಳ ಹೊರಗೆ ಬರುತ್ತದೆ.
ಮತದಾರರಿಗೆ ರಾಜಕೀಯ ಪಕ್ಷಗಳು ಅಂಗೈಯಲ್ಲಿ ಆಕಾಶವನ್ನು ತೋರಿಸುತ್ತವೆಯೇ, ಮೂಗಿಗೆ ತುಪ್ಪ ಹಾಕುತ್ತವೆಯೇ ಎನ್ನುವುದು ಚುನಾವಣೆ ಕಳೆದ ಬಳಿಕ ಗೊತ್ತಾಗಲಿದೆ.
____
Be the first to comment