ಹಿರಿಯ ನಟಿ ಜಯಂತಿ ಅವರು ನೇತ್ರದಾನ ಮಾಡುವ ಮೂಲಕ ತಮ್ಮ ಸಾವಿನಲ್ಲಿ ಮೇಲ್ಪಂಕ್ತಿ ಹಾಕಿದ್ದಾರೆ.
ತಮ್ಮ ಸಾವಿನ ಮುಂಚೆ ನೇತ್ರ ದಾನಕ್ಕೆ ಜಯಂತಿ ಅವರು ಕುಟುಂಬಸ್ಥರ ಒಪ್ಪಿಗೆ ಪಡೆದುಕೊಂಡಿದ್ದರು. ನಿನ್ನೆ ನಿಧನ ಆದ ಜಯಂತಿ ಅವರ ಅಂತ್ಯಕ್ರಿಯೆಗೂ ಮುನ್ನ ಅವರ ಕಣ್ಣುಗಳನ್ನು ವೈದ್ಯರು ತೆಗೆದುಕೊಂಡಿದ್ದಾರೆ.
ಈ ಮೂಲಕ ಜಯಂತಿ ಅವರು ಕಣ್ಣು ಇಲ್ಲದವರ ಬಾಳಿನಲ್ಲಿ ಬೆಳಕು ಮೂಡಿಸಿದ್ದಾರೆ.
ಡಾ ರಾಜ್ ಕುಮಾರ್ ಅವರು ನೇತ್ರ ದಾನ ಮಾಡುವ ಮೂಲಕ ಮಾದರಿ ಆಗಿದ್ದರು. ಅವರ ಜೊತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಅವರು ಈಗ ನೇತ್ರದಾನ ಮಾಡುವ ಮೂಲಕ ರಾಜ್ ಹಾದಿಯಲ್ಲಿ ಸಾಗಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
76 ವರ್ಷದ ಜಯಂತಿ ಅವರು ನಿನ್ನೆ ವಯೋಸಹಜ ಅನಾರೋಗ್ಯದಿಂದ ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದರು. 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದು , 60ರಿಂದ 80ರ ದಶಕದಲ್ಲಿ ಅವರು ಬಹುಬೇಡಿಕೆಯ ನಟಿ ಆಗಿದ್ದರು.
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಮರಾಠಿ ಭಾಷೆಯ ಚಿತ್ರಗಳಲ್ಲಿ ಜಯಂತಿ ನಟಿಸಿ ಮೆಚ್ಚುಗೆ ಪಡೆದಿದ್ದರು.
___________

Be the first to comment