ಏ.12ಕ್ಕೆ ಪ್ರೇಮ್-ಮಾನ್ವಿತಾ ನಟನೆಯ ‘ಅಪ್ಪಾ ಐ ಲವ್ ಯೂ’ ಚಿತ್ರ ಬಿಡುಗಡೆ

ನೆನಪಿರಲಿ ಪ್ರೇಮ್ ಬೆಳ್ಳಿ ತೆರೆ ಮೇಲೆ ಬಂದು ಬಹಳ ದಿನ ಆಯಿತು. ಆದರೆ ಈಗ ಅಪ್ಪ ಐ ಲವ್ ಯು ಚಿತ್ರದ ಮೂಲಕ ಲವ್ಲಿ ಸ್ಟಾರ್ ಪ್ರೇಮ್ ಬರ್ತಿದ್ದಾರೆ. ಟಗರು ಚಿತ್ರ ಖ್ಯಾತಿಯ ನಟಿ ಮಾನ್ವಿತಾ ಹರೀಶ್ ಪ್ರೇಮ್‌ಗೆ ಜೋಡಿ ಆಗಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಬೆಳ್ಳಿತೆರೆಗೆ ಬರುತ್ತಿದೆ. ಇದೀಗ ಇವರ ಈ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದ್ದು ಈ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಅಪ್ಪಾ ಐ ಲವ್ ಯೂ ಸಿನಿಮಾದ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ನಟ ಪ್ರೇಮ್ ಮಾತನಾಡಿ, ಸಾಮಾನ್ಯವಾಗಿ ಎಲ್ಲಾ ತಂದೆಯರು ಎಲ್ಲರಿಗೂ ಹೀರೋ. ಎಷ್ಟೇ ಬಲಹೀನ ಅಗಿದ್ದರೂ ಸಹ ರಸ್ತೆಯಲ್ಲಿ ಜಗಳ ಮಾಡಿ ಹೊಡೆದರು. ಮಕ್ಕಳ ಬಾಯಲ್ಲಿ ಬರುವ ಮಾತು ಎಂದರೆ ಅಪ್ಪನಿಗೆ ಹೇಳ್ತೀನಿ ಅಂತಾ. ಅಪ್ಪನಿಗೆ ಹೋಗಿ ಹೇಳುತ್ತಾರೆ. ನನ್ನ ತಂದೆ ನನಗೆ ಹೀರೋ. ನಾನು ಪ್ಲೇಬ್ಯಾಕ್ ಸಿಂಗರ್ ಆಗಲು ಇಷ್ಟಪಟ್ಟಿದೆ. ಯಾರಾದರೂ ಏನ್ ಆಗ್ತೀಯಾ ಎಂದು ಕೇಳಿದರೆ ನಾನು ಸಿಂಗರ್ ಆಗ್ತೀನಿ ಎನ್ನುತ್ತಿದ್ದೆ. ನಾನು ಚಿಕ್ಕವನು ಇದ್ದಾಗ ಎಲ್ಲಾ ರೀತಿ ಹುಡುಗರ ಸಹವಾಸ ಮಾಡುತ್ತಿದ್ದೆ. ಆದರೆ ನಮ್ಮ ಅಪ್ಪ ಎಂದು ಡೌಟ್ ಪಡಲೇಇಲ್ಲ. ನನ್ನ ಮಗ ಏನು ಅಂತ ಗೊತ್ತು‌ ಎಂದಿದ್ದರು. ಹೀಗಾಗಿ ನಾನು ಕೆಟ್ಟ ದಾರಿ ತುಳಿಯಲಿಲ್ಲ. ನನಗೆ ಕ್ಲೈಮ್ಯಾಕ್ಸ್ ಬಹಳ‌ ಕನೆಕ್ಟ್ ಆಯ್ತು. ನನಗೆ ಸಿಕ್ಕಿರುವ ಪಾತ್ರ ಬಹಳ ಅದ್ಭುತ ಪಾತ್ರ. ನನಗೋಸ್ಕರ ಹುಡುಕಿ ಬಂದ ಪಾತ್ರ. ಹೀಗಾಗಿ ಸಿನಿಮಾ ಒಪ್ಪಿಕೊಂಡೆ ಎಂದರು.

ನಿರ್ದೇಶಕ ಅಥರ್ವ್ ಆರ್ಯ ಮಾತನಾಡಿ, ನಾವು ಹೆಡ್ ಲೈನ್ ಹಾಕಿರುವ ಹಾಗೆ ಇದು ಕಾಲ್ಪನಿಕ ಕಥೆಯಲ್ಲ. ಅಪ್ಪ ಎಂಬ ದೇವರ ಸತ್ಯ ಕಥೆ. ಕಾಲ್ಪನಿಕ ಕಥೆ ಮಾಡುವುದು ಸುಲಭ. ಆದರೆ ನಮ್ಮ ನಿಮ್ಮ ನಡುವೆ ನಡೆಯುವ, ಸಮಾಜದಲ್ಲಿ ವಾಸ್ತವವಾಗಿ ನಡೆಯುವ ಕಥೆಗಳನ್ನು ಎಷ್ಟೋ ಬಾರಿ ಮೆರೆತುಬಿಟ್ಟಿರುತ್ತೇವೆ. ಆದರೆ ನಾವು ಅದನ್ನು ಅನುಭವಿಸುತ್ತಿರುತ್ತೇವೆ. ಅದು ಜೀವನದ ಭಾಗವಾಗಿರುತ್ತದೆ. ಅಂತಹ ಕಥೆಗಳನ್ನು ತೆರೆಮೇಲೆ ತರಬೇಕು ಎಂದು ಅಪ್ಪಾ ಐ ಲವ್ ಯೂ ಕಥೆಯನ್ನು ಆಯ್ಕೆ‌ ಮಾಡಿಕೊಂಡೆವು. ಕಥೆ ಹುಟ್ಟಲು ನಾಣಿ ಸರ್ ಮೂಲ ಕಾರಣ. ಸಿನಿಮಾವಾಗಲೂ ಅವರೇ ಕಾರಣ. ಅಪ್ಪ ಸಂಸಾರಕ್ಕೆ‌ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದು ನಾವು ಅಪ್ಪ ಆದಾಗ ಗೊತ್ತಾಗುತ್ತದೆ. ಅಪ್ಪನ ಮಹತ್ವ ಸಾರುವ ಚಿತ್ರ ಇದೇ 12ನೇ ತಾರೀಖು ತೆರೆಗೆ ಬರಲಿದೆ. ಇಡೀ ತಂಡದ ಬೆಂಬಲದಿಂದ ಈ ಸಿನಿಮಾವಾಗಿದೆ. ಅಪ್ಪಾ ಐ ಲವ್ ಯೂ ಚಿತ್ರದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದರು.

ತಬಲಾ ನಾಣಿ ಮಾತನಾಡಿ, ಕಿನ್ನಾಳ್ ರಾಜ್, ಈ ಸಿನಿಮಾಗೆ ಅದ್ಭುತ ಹಾಡು ಕೊಟ್ಟಿದ್ದಾರೆ. ಕಿನ್ನಾಳ್ ರಾಜ್ ಕೆಜಿಎಫ್ ಸಾಂಗ್ ಒಂದು ರೀತಿಯಾಯ್ತು. ನಮ್ಮ ಚಿತ್ರದಲ್ಲಿ ಅವರು ಬರೆದಿರುವ ಹಾಡನ್ನು ಆಡುವಾಗ ವಿಜಯ್ ಪ್ರಕಾಶ್ ಕಣ್ಣೀರಾದರು. ಅಂತಹ ಸಾಹಿತ್ಯ. ಅದಕ್ಕೆ ತಕ್ಕನಾದ ಟ್ಯೂನ್ ಆಕಾಶ್ ಕೊಟ್ಟಿದ್ದಾರೆ. ವಿಜಯ್ ಚೆಂಡೂರು ಒಳ್ಳೆ ಪಾತ್ರ ಮಾಡಿದ್ದಾರೆ. ಇದೇ‌ ತಿಂಗಳು 12ಕ್ಕೆ ಚಿತ್ರ ತೆರೆಗೆ ಬರ್ತಿದೆ ನಿಮ್ಮ ಬೆಂಬಲ ಇರಲಿ ಎಂದರು.

ಅಥರ್ವ್ ಆರ್ಯ ‘ಅಪ್ಪಾ ಐ ಲವ್ ಯೂ’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.ಮೂರು ಜವಾಬ್ದಾರಿಯನ್ನ ನಿರ್ವಹಿಸಿರೋ ಡೈರೆಕ್ಟರ್ ಈಗ ಚಿತ್ರವನ್ನ ರಿಲೀಸ್‌ಗೆ ರೆಡಿ ಮಾಡಲು ಸಜ್ಜಾಗಿದ್ದಾರೆ. ಅಪ್ಪಾ ಐ ಲವ್ ಯು ಅಂದ್ಮೇಲೆ ಅಪ್ಪನ ಕಥೆಯನ್ನೆ ಇಲ್ಲಿ ನಿರೀಕ್ಷೆ ಮಾಡಬೇಕಾಗುತ್ತದೆ. ಅದು ಈ ಸಿನಿಮಾ ವಿಚಾರದಲ್ಲೂ ನಿಜವೇ ಆಗಿದೆ. ಅಪ್ಪನಾಗಿಯೇ ಹಾಸ್ಯ ನಟ ತಬಲಾ ನಾಣಿ ಅಭಿನಯಿಸಿದ್ದಾರೆ.

ಪ್ರೇಮ್ ಹಾಗೂ ಮಾನ್ವಿತಾ ಕಾಮತ್ ಜೊತೆಗೆ ಸಂಜಯ್, ಜೀವಿತಾ, ರಂಗೀತರಂಗ ಅರವಿಂದ್, ವಿಜಯ್ ಚೆಂಡೂರ್, ಬಲ ರಾಜ್ವಾಡಿ, ಮಿಮಿಕ್ರಿ ಗೋಪಿ, ಅರುಣ ಬಾಲರಾಜ್, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಸೇರಿದಂತೆ ಹಲವು ತಾರಾಬಳಗ ಚಿತ್ರದಲ್ಲಿದೆ.

ಅಥರ್ವ ಆರ್ಯ ಅವರ ಈ ಚಿತ್ರ ಇದೇ ಏಪ್ರಿಲ್-12 ರಂದು ರಿಲೀಸ್ ಆಗುತ್ತಿದೆ. ಆಕಾಶ್ ಪರ್ವ ಸಂಗೀತ ಒದಗಿಸಿದ್ದಾರೆ . ಕೆಜಿಎಫ್ ಕಿನ್ನಾಳ್ ರಾಜ್, ಕವಿರಾಜ್, ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ನಾಗಾರ್ಜುನ್ ಆರ್.ಡಿ. ಛಾಯಾಗ್ರಹಣ ಮಾಡಿದ್ದಾರೆ. K.R.S ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!