ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಬಾಗಲಕೋಟೆಯ ಪಿ.ಹೆಚ್.ಸಂತೋಷ್ ಮತ್ತು ಹೋಟೆಲ್ ಉದ್ಯಮಿ ಹಾವೇರಿಯ ಬಸವರಾಜು.ಹೆಚ್.ಜಕ್ಕಪ್ಪನವರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ `ನೀ ಇಲ್ಲದ ಹೃದಯ` ಚಿತ್ರದ ಮುಹೂರ್ತ ಸಮಾರಂಭ ಅರೆಕೆರೆಯ ಶ್ರೀ ಸಾಯಿ ಬಾಬಾ ದೇವಸ್ಥಾನದಲ್ಲಿ ನಡೆಯಿತು. ನಾಯಕ, ನಾಯಕಿ ದೇವರಿಗೆ ನಮಸ್ಕರಿಸುವ ದೃಶ್ಯಕ್ಕೆ ದಿಲ್‍ಸತ್ಯಾ ಕ್ಯಾಮಾರ್ ಆನ್ ಮಾಡಿದರೆ, ಬೆತ್ತನಕರೆಯ ಬಿ.ಜಿ.ಮೋಹನ್‍ಗೌಡ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.
ಇಬ್ಬರು ಹುಡುಗಿಯರು, ಒಬ್ಬ ಹುಡುಗನ ಹಲವು ಪ್ರೇಮ ಕತೆಗಳು ಸಾಕಷ್ಟು ಬಂದಿದೆ, ಬರುತ್ತಲೆ ಇದೆ. ಇದರ ಪ್ರತೀಕ ಎನ್ನುವಂತೆ ‘ನೀ ಇಲ್ಲದ ಹೃದಯ’ ಸಿನಿಮಾ ಸೇರ್ಪಡೆಯಾಗಿದೆ. ಇದರಲ್ಲಿ ಮೇಲೆ ಹೇಳಿದಂತೆ ಕತೆ ಇದ್ದರೂ, ನಿರೂಪಣೆ ಬೇರೆ ರೀತಿಯಲ್ಲಿ ಇರುತ್ತದೆಂದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಪ್ರಥಮ ಬಾರಿ ನಿರ್ದೇಶನ ಮಾಡುತ್ತಿರುವ ಮಂಜು ಅಮ್ಮನಪುರ ಹೇಳುತ್ತಾರೆ. ಮೂಲತಃ ಚಾಮರಾಜನಗರದ ನಿರ್ದೇಶಕರು ಈ ಮೊದಲು ದಿಲ್ ಸತ್ಯಾ, ಎಸ್.ನಾರಾಯಣ್, ಬಿ.ಆರ್.ಕೇಶವ ಬಳಿ ಕೆಲಸ ಮಾಡಿದ ಅನುಭವವಿದೆ. ಸಿನಿಮಾ ಕುರಿತು ಹೇಳುವುದಾದರೆ ಹುಡುಗ, ಹುಡುಗಿಯರಲ್ಲೂ ಒಳ್ಳೆಯವರು ಕೆಟ್ಟವರು ಇರುತ್ತಾರೆ. ಅದರಂತೆ ಅವನು ಹುಡುಗಿಯನ್ನು ಪ್ರೀತಿಸುತ್ತಾನೆ. ಆಕೆಯು ಒಂದು ಹಂತದಲ್ಲಿ ಕೈಕೊಟ್ಟಾಗ, ಎಲ್ಲರದು ಇದೇ ಗುಣವೆಂದು ಅಂದಿನಿಂದ ಹೆಣ್ಣುಮಕ್ಕಳನ್ನು ಕಂಡರೆ ದೂರವಿರುತ್ತಾನೆ. ಒಮ್ಮೆ ಪ್ರವಾಸಕ್ಕೆಂದು ಮಲೆನಾಡು ಕಡೆ ಹೋದಾಗ ಅಲ್ಲೊಂದು ಹುಡುಗಿ ಪರಿಚಯವಾಗುತ್ತದೆ. ಇವನ ನಡತೆ ಕಂಡು ನಿವ್ರ್ಯಾಜದಿಂದ ಪ್ರೀತಿಸಲು ಶುರು ಮಾಡುತ್ತಾಳೆ. ಆದರೆ ಆ ಕಡೆಯಿಂದ ಸೂಕ್ತ ಸ್ಪಂದನೆ ಸಿಗುವುದಿಲ್ಲ. ಕ್ಲೈಮಾಕ್ಸ್‍ನಲ್ಲಿ ಇವರಿಬ್ಬರ ಪ್ರೀತಿಗೆ ಜಯ ಸಿಗುತ್ತದಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದಕ್ಕೆ ಹೊಂದಿಕೆಯಾಗುವಂತೆ ಹೃದಯಗಳ ಪಿಸು ಮಾತು ಎಂದು ಅಡಿಬರಹದಲ್ಲಿ ಹೇಳಿಕೊಂಡಿದೆ. ಪಾರು ಐ ಲವ್ ಯುದಲ್ಲಿ ನಟಿಸಿರುವ ರಂಜನ್‍ಹಾಸನ್ ಈ ಚಿತ್ರದ ನಾಯಕ. ಪಕ್ಕದ್ಮನೆ ಹುಡುಗಿಯಾಗಿ ಶುಭಾರಕ್ಷಾ ನಾಯಕಿ. ಮತ್ತೊಂದು ನಾಯಕಿಗಾಗಿ ತಲಾಷ್ ನಡೆಯುತ್ತಿದೆ. ಕನ್ನಡದ ನಟಿಗೆ ಅವಕಾಶ ಮಾಡಿಕೊಡಬೇಕೆಂದು ತಂಡವು ನಿರ್ಣಯ ತೆಗೆದುಕೊಂಡಿದ್ದಾರೆ. ಉಳಿದಂತೆ ರಥಸಪ್ತಮಿ ಅರವಿಂದ್, ಭಾಗ್ಯಶ್ರೀ, ಚೇತನಾಶೆಟ್ಟಿ, ವಿಶ್ವನಾಥ್‍ಬಳ್ಳೆಕಟ್ಟೆ, ಸತೀಶ್‍ನಾಯ್ಕ್, ರಾಕ್‍ಸತೀಶ್, ಶ್ರೀಧರ್‍ಆಚಾರ್ಯ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ಸಕಲೇಶಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ. ಕವಿರಾಜ್, ಹೃದಯಶಿವ ಮತ್ತು ನವಪ್ರತಿಭೆ ರೋಹಿತ್ ಸಾಹಿತ್ಯದ ಐದು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ ನೀಡುತ್ತಿದ್ದಾರೆ. ಛಾಯಾಗ್ರಹಣ ಎಂ.ವಿ.ನಂದಕುಮಾರ್, ಸಾಹಸ ಅಲ್ಟಿಮೇಟ್‍ಶಿವು, ನೃತ್ಯ ವಿ.ಜೈ, ಮೇಕಪ್ ಪುರುಷೋತ್ತಮ್, ಕಾರ್ಯಕಾರಿ ನಿರ್ಮಾಪಕ ಶಂಕರ್‍ನಾಗ್ ಅವರದಾಗಿದೆ.
Be the first to comment