ಚಿತ್ರ ವಿಮರ್ಶೆ : ರಹಸ್ಯದ ಪತ್ತೆಯ ಪ್ರಯತ್ನ

ಚಿತ್ರ: ನವರತ್ನ

ತಾರಾಗಣ: ಪ್ರತಾಪ್ ರಾಜ್, ಮೋಕ್ಷ ಕುಲಾಲ್, ಅಮಿತ್
ನಿರ್ದೇಶಕ: ಪ್ರತಾಪ್ ರಾಜ್
ನಿರ್ಮಾಪಕ: ಚಂದ್ರಶೇಖರ್

ನವರತ್ನ ಎಂದರೆ ಒಂಬತ್ತು ರತ್ನಗಳು ಎನ್ನುವ ನೇರವಾದ ಅರ್ಥವಿಲ್ಲ. ಬೇರೆ ಯಾವ ಅರ್ಥವಿದೆ ಎಂದು ಸಿನಿಮಾ ಪ್ರೇಮಿಗಳೇ ಪತ್ತೆಗೈಯ್ಯಬೇಕು ಎಂದು ತಲೆಗೆ ಹುಳ ಬಿಟ್ಟಿದ್ದ ಚಿತ್ರತಂಡ ಈಗ ಅದರ ಅರ್ಥ ವ್ಯಾಪ್ತಿಯ ಅನಾವರಣ ಮಾಡಿದೆ. ಇದು ರಾಜಮನೆತನಗಳು ಆಳ್ವಿಕೆ ನಡೆಸುತ್ತಿದ್ದ ಕಾಲದ ಘಟನೆಗೆ ಪೂರಕವಾದ ಚಿತ್ರ.

ಚಿತ್ರದಲ್ಲಿನ ನವರತ್ನದ ಹಾರವನ್ನು ಮಂತ್ರಶಕ್ತಿಯ ಮೂಲಕ ನಿರ್ಮಿಸಲಾಗಿರುತ್ತದೆ. ಅಂಥದೊಂದು ಹಾರ ಇಂದಿನ ಜಮಾನದ ಮಂದಿಯ ಕೈಗೆ ದೊರಕಿದಾಗ ಉಂಟಾಗುವ ಸಮಸ್ಯೆಗಳೇನು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕಟ್ಟಡವೊಂದರ ಅಡಿಪಾಯಕ್ಕಾಗಿ ಅಗೆಯುವಾಗ ಕಾರ್ಮಿಕನೋರ್ವನಿಗೆ ರತ್ನಖಚಿತ ಪೆಟ್ಟಿಗೆ ದೊರಕುತ್ತದೆ. ಅದರಲ್ಲಿ ನವರತ್ನದ ಹಾರದ ಜತೆಗೆ ಒಂದು ತಾಳೆಗರಿಯ ಓಲೆ ಕೂಡ ಇರುತ್ತದೆ. ಅಲ್ಲಿಂದ ಆ ನವರತ್ನ ಹಾರ ಯಾರ ಕೈಗಳನ್ನೆಲ್ಲ ತಲುಪುತ್ತದೆಯೋ, ಅವರೆಲ್ಲ ಯಾವುದಾದರೊಂದು ಕಾರಣದಿಂದ ಸಾಯುತ್ತಾರೆ. ಆದರೆ ಅದಕ್ಕೇನು ಕಾರಣ ಎನ್ನುವುದನ್ನು ಫ್ಲ್ಯಾಶ್ ಬ್ಯಾಕ್ ಕತೆಯ ಮೂಲಕ ತಿಳಿಸಲಾಗುತ್ತದೆ. ರಾಜನೋರ್ವ ಆ ನವರತ್ನ ಹಾರದೊಳಗೆ ದುಷ್ಟ ಶಕ್ತಿಗಳನ್ನು ಆವಾಹಿಸಿರುತ್ತಾನೆ. ಅದನ್ನು ಯಾರೇ ಧರಿಸಿದರೂ ಅನಾಹುತವಾಗುವಂತೆ ಮಾಡುವುದು ಆತನ ಉದ್ದೇಶವಾಗಿರುತ್ತದೆ. ಅದು ಆತನ ಕಾಲಾನಂತರವೂ ಮುಂದುವರಿದಿರುತ್ತದೆ. ಇಲ್ಲಿ ಕಥಾನಾಯಕ ಪ್ರತಾಪ್ ಓರ್ವ ಮಫ್ತಿಯಲ್ಲಿರುವ ಪೊಲೀಸ್ ತನಿಖಾಧಿಕಾರಿ. ಕಾಡಿನಲ್ಲಿ ನಡೆಯುವ ನಾಪತ್ತೆ ಪ್ರಕರಣಗಳ ಶೋಧದಲ್ಲಿ ಕಾರ್ಯನಿರತನಾಗಿರುತ್ತಾನೆ. ಚಿತ್ರದ ಕ್ಲೈಮ್ಯಾಕ್ಸ್ ಕುತೂಹಲಭರಿತವಾಗಿದೆ.

ಪೊಲೀಸ್ ಅಧಿಕಾರಿ ಪ್ರತಾಪ್ ಪಾತ್ರದಲ್ಲಿ ನಿರ್ದೇಶಕ ಪ್ರತಾಪ್ ರಾಜ್ ಅಭಿನಯಿಸಿದ್ದಾರೆ. ನಿರ್ದೇಶಕರಾಗಿ ಅವರು ಪ್ರಥಮ ಪ್ರಯತ್ನದಲ್ಲೇ ಇಂಥದೊಂದು ಗುಣಮಟ್ಟದ ಚಿತ್ರ ನೀಡಿರುವುದನ್ನು ಮೆಚ್ಚಲೇಬೇಕು. ನಾಯಕಿಯಾಗಿ ಮೋಕ್ಷ ಕುಶಾಲ್ ಗ್ಲಾಮರಸ್ ಬೆಡಗಿ ಎನ್ನುವುದನ್ನು ನಿರೂಪಿಸಿದ್ದಾರೆ. ಹಾಡುಗಳು ಚೆನ್ನಾಗಿ ಮೂಡಿ ಬಂದಿದ್ದು, ಅವುಗಳ ನೃತ್ಯ ನಿರ್ದೇಶನ ರೀತಿಯನ್ನು ಮೆಚ್ಚಲೇಬೇಕು! ನಾಯಕನ ಸ್ನೇಹಿತ ಲಿಂಗನ ಪಾತ್ರದಲ್ಲಿ ಯುವ ಹಾಸ್ಯನಟ ಅಮಿತ್ ಇದ್ದಾರೆ. ಅವರು ಸಂಭಾಷಣೆಗಳನ್ನು ಹೇಳುವ ಶೈಲಿ ಚಿತ್ರದ ಹೈಲೈಟ್ ಗಳಲ್ಲೊಂದು. ದೇಶ ವಿದೇಶದ ಕಾಡುಗಳಲ್ಲಿ ನಡೆಸಿರುವ ಚಿತ್ರೀಕರಣ ನಮ್ಮನ್ನು ಕಾಡಿನೊಳಗೆ ಕರೆದೊಯ್ದ ಭಾವ ಮೂಡಿಸುತ್ತದೆ. ಅದರ ಕ್ರೆಡಿಟ್ ಸಂಪೂರ್ಣವಾಗಿ ಛಾಯಾಗ್ರಾಹಕ ರಿಜೊ ಪಿ ಜಾನ್ ಅವರಿಗೆ ಸಲ್ಲಬೇಕು. ಸಿನಿಮಾ ಸಂಕಲನಕಾರರಾಗಿ ಮೊದಲ ಹೆಜ್ಜೆ ಇಟ್ಟಿರುವ ವಿಷ್ಣು ಅವರ ಪ್ರಯತ್ನ ಪ್ರಶಂಸಾರ್ಹ.ನ

ನವರತ್ನ ಚಿತ್ರದಲ್ಲಿ ನವರಸಗಳು ಕೂಡ ತುಂಬಿವೆ. ಪ್ರೇಮ, ದ್ವೇಷ, ಹಾಸ್ಯ, ಆಟ, ಕಾಟ, ಹುಡುಕಾಟ, ಹೊಡೆದಾಟ, ಮೈಮಾಟ ಹೀಗೆ ಎಲ್ಲವೂ ತುಂಬಿರುವ ರಸದೂಟ ಇದು. ಅದರಲ್ಲಿ ಯಾವ ಭಾವ ಬೇಕು ಎಂದು ಆಯ್ಕೆ ಮಾಡುವ ಅವಕಾಶ ಪ್ರೇಕ್ಷಕರದ್ದು.

@bcinemas.in

 

This Article Has 1 Comment
  1. Pingback: credit card dumps track 2 and pin

Leave a Reply

Your email address will not be published. Required fields are marked *

Translate »
error: Content is protected !!