ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರ ನೇತೃತ್ವದ ನವರಸ ನಟನ ಅಕಾಡೆಮಿಯ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನೆರವೇರಿತು. ನಟ ಶರಣ್ ಹಾಗೂ ಜಯಮಾಲಾ ದೀಪ ಬೆಳಗುವುದರ ಮೂಲಕ ಈ ಕಾರ್ಯಕ್ರಮನ್ನು ಉದ್ಘಾಟಿಸಿದರು. ಕಲಾವಿದರಾದ ನವರಸನಾಯಕ ಜಗ್ಗೇಶ್, ರಮೇಶ್ ಅರವಿಂದ್, ವಿಜಯ ರಾಘವೇಂದ್ರ, ಅನಿರುದ್ಧ, ಸಚಿವ ಬಿ.ಸಿ. ಪಾಟೀಲ, ಸಿಹಿಕಹಿ ಚಂದ್ರು, ಸಾಧು ಕೋಕಿಲ, ಥ್ರಿಲ್ಲರ್ ಮಂಜು, ರಘು ಮುಖರ್ಜಿ, ವಸಿಷ್ಠ ಸಿಂಹ, ಅನು ಪ್ರಭಾಕರ್, ರಾಗಿಣಿ ಹಾಗೂ ಐಪಿಎಸ್ ಅಧಿಕಾರಿ ರವಿಕಾಂತೇಗೌಡ, ಐಜಿಪಿ ಹರಿಶೇಖರನ್ ಮುಂತಾದವರು ಈ ಕಾರ್ಯಕ್ರಮಕ್ಕೆ ಆಗಮಿಸಿ ನವರಸ ಸಂಸ್ಥೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಟಿ ಜಯಮಾಲಾ ಮಾತನಾಡಿ ಮಾಲೂರು ಶ್ರೀನಿವಾಸ್ ಅವರು ಈ ಅಕಾಡೆಮಿಯನ್ನು ಕಟ್ಟಿ ಈ ಮಟ್ಟಕ್ಕೆ ಬೆಳೆಸುವಲ್ಲಿ ಅವರ ಶ್ರೀಮತಿಯವರ ಪಾಲು ಬಹು ದೊಡ್ಡದು. ಎಲ್ಲರೂ ಸ್ಟಾರ್‌ಗಳಾಗಲು ಸಾಧ್ಯವಿಲ್ಲ. ಆದರೆ ನಮ್ಮ ಪ್ರಯತ್ನ ನಿರಂತರವಾಗಿರಬೇಕು ಎಂದು ಹೇಳಿದರು.
ನಂತರ ನಟ ಜಗ್ಗೇಶ್ ಮಾತನಾಡುತ್ತ ತನ್ನ ಆರಂಭದ ದಿನಗಳಲ್ಲಿ ಅಂದರೆ ಚಿತ್ರರಂಗದ ಚಟುವಟಿಕೆಗಳೆಲ್ಲ ಮದರಾಸಿನಲ್ಲಿದ್ದ ಕಾಲದಲ್ಲಿ ತಾನು ಮದರಾಸಿಗೆ ಅಲೆದಾಡಿದ್ದು, ಪುಟ್ಟಣ್ಣ ಕಣಗಾಲರ ಬಳಿ ಅವಕಾಶ ಕೇಳಿ ಹೋಗಿದ್ದು ಎಲ್ಲ ವಿಷಯಗಳನ್ನು ನೆರೆದಿದ್ದ ವಿದ್ಯಾರ್ಥಿಗಳ ಮುಂದೆ ಹೇಳುತ್ತಾ ಸಾಧನೆಯ ಮೆಟ್ಟಿಲೇರುವಾಗ ಏನೇ ಅಡ್ಡ ಬಂದರೂ ಎದೆಗುಂದದೆ ಸಾಗಿದರೆ ಜಯ ಸಿಗುತ್ತದೆ ಎಂಬ ಕಿವಿಮಾತನ್ನು ಹೇಳಿದರು. ಜೊತೆಗೆ ನವರಸ ನಟನ ಅಕಾಡೆಮಿ ಕರ್ನಾಟಕದ ನಂ.೧ ತರಬೇತಿ ಸಂಸ್ಥೆ ಎಂದರು. ‘ಕರ್ನಾಟಕದಲ್ಲಿ ಎಷ್ಟೇ ತರಬೇತಿ ಸಂಸ್ಥೆಗಳಿದ್ದರೂ ಉತ್ತಮ ಕಲಾವಿದರನ್ನು ತಯಾರು ಮಾಡುವಲ್ಲಿ ‘ನವರಸ ನಟನ ಅಕಾಡೆಮಿ’ ನಂ.೧ ಸ್ಥಾನದಲ್ಲಿದೆ’ ಎಂದು ಜಗ್ಗೇಶ್ ಅನಿಸಿಕೆ ವ್ಯಕ್ತಪಡಿಸಿದರು.
ಸಚಿವರಾದ ಬಿ.ಸಿ.ಪಾಟೀಲ್ ಮಾತನಾಡಿ, ಸಿನಿಮಾರಂಗಕ್ಕೆ ಬರಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗೆ ತುಸು ಹೆಚ್ಚು ಎನ್ನಬಹುದು. ಆದರೆ ಕೆಲವರಷ್ಟೇ ಅಲ್ಲಿಂದ ಬೆಂಗಳೂರಿಗೆ ಬಂದು ನಟನೆಯ ತರಬೇತಿ ಪಡೆದುಕೊಳ್ಳುತ್ತಾರೆ. ಹೀಗಾಗಿ ಉತ್ತರ ಕರ್ನಾಟಕದಲ್ಲೊಂದು ನವರಸ ನಟನ ಅಕಾಡೆಮಿ ಮತ್ತೊಂದು ಶಾಖೆ ತೆರೆಯುವುದಾದರೆ ನಾನು ಯಾವುದೇ ರೀತಿಯಲ್ಲೂ ಸಹಕರಿಸಲು ಸಿದ್ಧನಿದ್ದೇನೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭಲ್ಲಿ ನವರಸ ನಟನ ಅಕಾಡೆಮಿಯ ೩ನೇ ವರ್ಷದ ಮೊದಲನೇ ಬ್ಯಾಚ್‌ಗೆ ಚಾಲನೆ ನೀಡಲಾಯಿತು. ಅಲ್ಲದೆ ಕಳೆದ ಬ್ಯಾಚ್‌ನಲ್ಲಿ ಕಲಿತ ಎಲ್ಲಾ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ವರ್ಣರಂಜಿತವಾಗಿ ನಡೆದ ಈ ಸಮಾರಂಭದಲ್ಲಿ ನವರಸ ನಟನ ಅಕಾಡೆಮಿಯ ವಿದ್ಯಾರ್ಥಿಗಳಿಂದ ನಾಟಕ, ನೃತ್ಯ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು,
ಸಂಸ್ಥೆಯ ಪ್ರಾಂಶುಪಾಲರಾದ ಎಸ್. ನಾರಾಯಣ್, ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್ ಹಾಗೂ ನಿರ್ದೇಶಕ ಎಸ್. ಮಹೇಂದರ್ ಸೇರಿದಂತೆ ಅಕಾಡೆಮಿಯ ಆಡಳಿತ ಮಂಡಳಿ ಹಾಗೂ ತರಬೇತಿ ವರ್ಗದವರೆಲ್ಲರೂ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಿರ್ಮಾಪಕಿ ಭಾಗ್ಯವತಿ ನಾರಾಯಣ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಶ್ರೀನಿವಾಸ್ ದೀಪ ಬೆಳಗಿದರು. ಹೊಸದಾಗಿ ಶುರುವಾಗಿರುವ ಬ್ಯಾಚ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ೯೮೮೦೪ ೧೯೬೬೬ / ೯೮೮೦೨ ೧೯೬೬೬ ಸಂಪರ್ಕಿಸಬಹುದು.
Pingback: dumps + pin