ಕನ್ನಡದ ಸೂಪರ್ ಡೂಪರ್ ಹಿಟ್ ‘ಕಾಂತಾರ’ ಸಿನಿಮಾ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
“ಕಾಂತಾರ” ಸಿನಿಮಾ ಅತ್ಯುತ್ತಮ ಮನೋರಂಜನಾ ಚಿತ್ರ ಹಾಗೂ ನಿರ್ದೇಶನ ಮಾಡಿರುವ ರಿಷಬ್ ಶೆಟ್ಟಿ ತಮ್ಮ ಅದ್ಭುತ ಅಭಿನಯಕ್ಕಾಗಿ “ಅತ್ಯುತ್ತಮ ನಟ” ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ರಿಷಬ್ ಶೆಟ್ಟಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕಾರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ‘ಕಾಂತಾರ’ ಅತ್ಯುತ್ತಮ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅತ್ಯುತ್ತಮ ರಾಷ್ಟ್ರ ಪ್ರಶಸ್ತಿ ಬಂದಿದ್ದು, ಈ ಜಯ ಕೇವಲ ನನ್ನೊಬ್ಬನಿಂದ ಸಾಧ್ಯವಿಲ್ಲ. ಇದು ಇಡೀ ತಂಡದ ಯಶಸ್ಸು ಎಂದರು.
“ಕಾಂತಾರ” ನನ್ನ ಉತ್ಸಾಹದಿಂದ ಸೃಷ್ಟಿಯಾದ ಕಥೆ, ಇದು ನನ್ನ ತವರೂರಿನ ಕಥೆಯಾಗಿದೆ. ರಾಷ್ಟ್ರಪ್ರಶಸ್ತಿ ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಕಾಂತಾರ ಯಶಸ್ಸು ಮತ್ತು ಪ್ರೇಕ್ಷಕರ ಬೆಂಬಲವು ದೈವದ ನಿಜವಾದ ಆಶೀರ್ವಾದವಾಗಿದೆ. ಈ ಚಿತ್ರದ ಮೂಲಕ ಪ್ರತಿಯೊಂದು ಪ್ರದೇಶದ ಜನರು ತಮ್ಮ ಬೇರುಗಳೊಂದಿಗೆ ಸಂಪರ್ಕ ಸಾಧಿಸಬಹುದು. ಇದು ಪ್ರಾದೇಶಿಕ ಕಥೆಗಳು ಸಾರ್ವತ್ರಿಕವಾಗಿವೆ ಎಂದು ತೋರಿಸುತ್ತದೆ. ಇಲ್ಲಿಯವರೆಗಿನ ನನ್ನ ಅತ್ಯಂತ ದುಬಾರಿ ಚಿತ್ರವಾಗಿರುವ ಈ ವಿಶಿಷ್ಟ ಚಿತ್ರದಲ್ಲಿ ಯಾವಾಗಲೂ ನನ್ನೊಂದಿಗೆ ಇರುವ ಹೊಂಬಾಳೆ ಪಾಲುದಾರರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಭಾವುಕರಾಗಿ ನುಡಿದರು.
ರಿಷಬ್ ಶೆಟ್ಟಿ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವಾಗಲೂ ಪಂಚೆ ಧರಿಸಿ ದಕ್ಷಿಣ ಭಾರತದ ಸಾಂಪ್ರದಾಯಿಕ ಗೆಟಪ್ನಲ್ಲಿ ಎಲ್ಲರ ಗಮನ ಸೆಳೆದರು.
Be the first to comment