ಚಿತ್ರ: ‘ನಾರಾಯಣ ನಾರಾಯಣ’
ನಿರ್ದೇಶನ: ಶ್ರೀಕಾಂತ್ ಕೆಂಚಪ್ಪ
ನಿರ್ಮಾಣ: ಕೃಷ್ಣಪ್ಪ ಪಿ, ಮಂಜುನಾಥ್ ಕೆ.
ತಾರಾಗಣ: ಪವನ್, ಕೀರ್ತಿ ಕೃಷ್ಣ, ದರ್ಶನ್ ಸೂರ್ಯ, ಪುನೀತ್ ಬಿ.ಎ., ರಘು ಭಟ್, ಗುರು ಕಿರಣ್, ಶಶಿಕಾಂತ್ ಗಟ್ಟಿ, ಬಿಂಬಿಕಾ ರಾವ್ ಮತ್ತಿತರರು
ರೇಟಿಂಗ್ : 3.5
ಪ್ರಶಾಂತವಾದ ಊರಿನಲ್ಲಿ ನಿಧಿ ತೆಗೆಯಲು ಮಾಂತ್ರಿಕರು ಬಂದಾಗ ಯಾವ ರೀತಿಯ ಸನ್ನಿವೇಶಗಳು ನಡೆಯುತ್ತವೆ ಎಂದು ಹಾಸ್ಯದ ಮೂಲಕ ತಿಳಿಸುವ ಚಿತ್ರ ಈ ವಾರ ತೆರೆಗೆ ಬಂದಿರುವ ‘ನಾರಾಯಣ ನಾರಾಯಣ’.
ಪರಾರಿ ಆದ ಮಾಂತ್ರಿಕನೊಬ್ಬ 12 ವರ್ಷಗಳ ಬಳಿಕ ಊರಿಗೆ ಬಂದು ನಿಧಿ ತೆಗೆಯಲು ಪೂಜೆ ನಡೆಸುತ್ತಾನೆ. ಅಲ್ಲಿಂದ ಊರಿನಲ್ಲಿ ಶಾಂತಿ ಕದಡುತ್ತದೆ. ಆಗ ಭಗವಂತ ಕೃಷ್ಣ ಕಾಣಿಸಿಕೊಳ್ಳುತ್ತಾನೆ. ಹೀಗೆಲ್ಲಾ ಯಾಕೆ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರವನ್ನು ನೋಡಬೇಕಿದೆ.
ಇದು ಸಂಪೂರ್ಣವಾಗಿ ಹೊಸಬರಿಂದ ತಯಾರಾಗಿರುವ ಚಿತ್ರ. ರಂಗಭೂಮಿ ಹಿನ್ನೆಲೆಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡ ಪ್ರೇಕ್ಷಕರ ಮುಂದೆ ವಿಭಿನ್ನ ಕಥೆಯನ್ನು ತರುವ ಯತ್ನವನ್ನು ಮಾಡಿದೆ. ನಗಿಸುತ್ತಲೇ ಪ್ರೇಕ್ಷಕರಿಗೆ ಸಂದೇಶವನ್ನು ನೀಡುವ ಯತ್ನವನ್ನು ಮಾಡಲಾಗಿದೆ.
ಚಿತ್ರದ ಮೊದಲಾರ್ಧ ಮನರಂಜನೆಯಾಗಿ ಸಾಗುತ್ತದೆ. ನಂತರದ ಭಾಗ ಗಂಭೀರವಾಗುತ್ತದೆ. ಚಿತ್ರದ ಕ್ಲೈಮ್ಯಾಕ್ಸ್ ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿರುತ್ತದೆ. ನಿರ್ದೇಶಕರು ಕೃಷ್ಣನ ಪಾತ್ರಧಾರಿ ಮೂಲಕ ಜೀವನದ ಸತ್ಯದರ್ಶನ ಮಾಡುವ ಯತ್ನವನ್ನು ಮಾಡಿದ್ದಾರೆ.
ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೀರ್ತಿ ಕೃಷ್ಣ, ದರ್ಶನ್ ಸೂರ್ಯ, ಗುರು ಕಿರಣ್, ಶಶಿಕಾಂತ್ ಗಟ್ಟಿ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ನಾಯಕಿ ಬಿಂಬಿಕಾ ರಾವ್ ಅವರಿಗೆ ಹೆಚ್ಹು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಮಜಾ ಟಾಕೀಸ್ ಖ್ಯಾತಿಯ ಪವನ್ ದ್ವಿತೀಯಾರ್ಧದಲ್ಲಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ.
ಹೊಸ ಕಥೆ, ಉತ್ತಮ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ. ಮುಜುಗರ ಇಲ್ಲದೆ ಕುಟುಂಬದೊಂದಿಗೆ ನೋಡುವಂತೆ ಚಿತ್ರ ಮೂಡಿ ಬಂದಿದೆ.

Be the first to comment