‘ನಾನು ಮತ್ತು ಗುಂಡ 2’ಗೆ ಶ್ವಾನ ಸಿಂಬಾ ಡಬ್ಬಿಂಗ್‌

‘ನಾನು ಮತ್ತು ಗುಂಡ 2’ ಸಿನಿಮಾಗಾಗಿ ಶ್ವಾನದಿಂದ ಡಬ್ಬಿಂಗ್ ಮಾಡಿಸಲಾಗುತ್ತಿದೆ.

ಸಿನಿಮಾಗೆ ಶ್ವಾನ ಸಿಂಬಾ ರೆಕಾರ್ಡಿಂಗ್ ಸ್ಟುಡಿಯೋಗೆ ಬಂದು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ. ಇಡೀ ಸಿನಿಮಾದಲ್ಲಿ ಸಿಂಬಾನ ಒರಿಜಿನಲ್ ಸೌಂಡ್ ಕಾಣಿಸಿಕೊಳ್ಳಲಿವೆ. ಎಲ್ಲೆಲ್ಲಾ ಶ್ವಾನ ಬೊಗಳಬೇಕೋ ಆ ಎಲ್ಲಾ ಜಾಗದಲ್ಲಿ ಸಿಂಬಾನಿಂದಲೇ ಧ್ವನಿಯನ್ನು ರೆಕಾರ್ಡ್ ಮಾಡಲಾಗಿದೆ.

‘ನಾನು ಮತ್ತು ಗುಂಡ 2’ ಸಿನಿಮಾಗೆ ನಿರ್ದೇಶಕ ರಘು ಹಾಸನ್ ಆಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾ ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ನಡೆಯುತ್ತಿದೆ.

“ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಡಾಗ್ ಕೈಲಿ ಡಬ್ಬಿಂಗ್ ಮಾಡಿಸುತ್ತಿರುವುದು ನಾವೇ ಮೊದಲೆನ್ನಬಹುದು. ಹಿಂದಿನ ಪಾರ್ಟ್ ಒನ್ ಚಿತ್ರದಲ್ಲೂ ಡಾಗ್‌ನಿಂದಲೇ ಡಬ್ಬಿಂಗ್ ಮಾಡಿಸಿದ್ದೇವೆ.  ಅದು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಆಗಿತ್ತು. ಪಾರ್ಟ್-2ನ ಇಡೀ ಸಿನಿಮಾದಲ್ಲಿ  ಸಿಂಬಾನೇ ಡಬ್ ಮಾಡುತ್ತಿದೆ.” ಎನ್ನುತ್ತಾರೆ ನಿರ್ದೇಶಕರು.

‘ನಾನು ಮತ್ತು ಗುಂಡ’  ಸಿನಿಮಾದ ಸೀಕ್ವೇಲ್ ‘ನಾನು ಮತ್ತು ಗುಂಡ -‌2’. ಎರಡನೇ ಸರಣಿಯಲ್ಲಿ ಸಿನಿಮಾ ತಾರಾ ಬಳಗ ಬದಲಾಗಿದ್ದಾರೆ. ಶಿವು ಕೆ ಆರ್ ಪೇಟೆ ಜಾಗದಲ್ಲಿ ನಾಯಕನಾಗಿ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆಗೆ ವಿಶೇಷ ಪಾತ್ರದಲ್ಲಿ ಶ್ವಾನ ಸಿಂಬ ಕೂಡ ಪ್ರಮುಖ‌ ಪಾತ್ರದಲ್ಲಿ ನಟಿಸಿದೆ.

ಈಗಾಗಲೇ ಶ್ವಾನವನ್ನು ಮುಂದಿಟ್ಟುಕೊಂಡು ಹಲವು ಸಿನಿಮಾಗಳು ಬಂದಿದೆ. ಕನ್ನಡದಲ್ಲಿಯೇ ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಟಿಸಿದ ‘ಚಾರ್ಲಿ 777’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೆಚ್ಚು ಕಡಿಮೆ ಅದೇ ಸಮಯಕ್ಕೆ ‘ನಾನು ಮತ್ತು ಗುಂಡ’ ಸಿನಿಮಾ ಕೂಡ ರಿಲೀಸ್ ಆಗಿತ್ತು. ಎರಡೂ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಇದೇ ಸಿನಿಮಾದ ಸೀಕ್ವೆಲ್ ‘ನಾನು ಮತ್ತು ಗುಂಡ 2’ ಬಿಡುಗಡೆ ರೆಡಿಯಾಗಿದೆ.

‘ನಾನು ಮತ್ತು ಗುಂಡ 2’ ಡಬ್ಬಿಂಗ್ ಹಂತದಲ್ಲಿದ್ದು, ಡಿಐ ಹಾಘೂ ಆರ್‌ಆರ್ ಕೆಲಸ ಆಗಬೇಕಿದೆ.  ಬಹಳ ದಿನಗಳ ಬಳಿಕ ಆರ್.ಪಿ.ಪಟ್ನಾಯಕ್ ಸಂಗೀತ ನೀಡಿದ್ದಾರೆ. ಸಿನಿಮಾಗೆ ರುತ್ವಿಕ್ ಮುರಳೀಧರ್  ಹಿನ್ನೆಲೆ ಸಂಗೀತವಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!