ನಾನು ಮತ್ತು ಗುಂಡ

Movie Review: ಮನ ಸೆಳೆಯುವ ಶ್ವಾನದ ಕಥೆ

ಚಿತ್ರ: ನಾನು ಮತ್ತು ಗುಂಡ 2
ನಿರ್ದೇಶನ: ರಘು ಹಾಸನ್
ನಿರ್ಮಾಣ: ರಘು ಹಾಸನ್
ತಾರಾಗಣ: ರಾಕೇಶ್ ಅಡಿಗ, ರಚನಾ ಇಂದರ್, ಗೋವಿಂದೇಗೌಡ ಮೊದಲಾದವರು…
ರೇಟಿಂಗ್ : 3.5/5

ಐದು ವರ್ಷಗಳ ಹಿಂದೆ ತೆರೆಕಂಡ ನಾನು ಮತ್ತು ಗುಂಡ ಚಿತ್ರದ ಎರಡನೇ ಭಾಗ ಇದು. ಮೂಲ ಚಿತ್ರದ ಸಾಕಷ್ಟು ಪಾತ್ರಗಳು ಇಲ್ಲಿ ಇಲ್ಲ. ಆದರೆ ನಾಯಿ ಜೊತೆಗಿನ ಮನುಷ್ಯನ ಅನುಬಂಧವನ್ನು ಇನ್ನಷ್ಟು ಆಳಕ್ಕೆ ಕೊಂಡೊಯ್ಯುವಂತೆ ಮಾಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

ನಾನು ಮತ್ತು ಗುಂಡ ಚಿತ್ರದಲ್ಲಿ ಗುಂಡನೆಂಬ ಶ್ವಾನದ ಜೊತೆ ಪ್ರಧಾನ ಪಾತ್ರವಾದ ಶಂಕರನಾಗಿ ಶಿವರಾಜ್ ಕೆ ಆರ್ ಪೇಟೆ ನಟಿಸಿದ್ದರು. ಚಿತ್ರದ ಅಂತ್ಯದಲ್ಲಿ ಶಂಕರನ ಸಾವಾಗಿರುತ್ತದೆ. ಆದರೆ ಆತ ಸಾಕಿದ್ದ ನಾಯಿ ಗುಂಡ ಬದುಕಿರುತ್ತದೆ. ಗುಂಡನ ಬದುಕು ಮುಂದೇನಾಗುತ್ತದೆ? ಎನ್ನುವುದನ್ನು ಈ ಚಿತ್ರದಲ್ಲಿ ವಿಭಿನ್ನವಾಗಿ ಹೇಳಲಾಗಿದೆ. ಸಾವಿಗೊಳಗಾದ ಮಾಲೀಕ ಮರಳಿ ಬರುತ್ತಾನೆ ಎನ್ನುವ ನಿರೀಕ್ಷೆಯೊಂದಿಗೆ ಗುಂಡ ಕಾಯುತ್ತಿರುತ್ತಾನೆ. ಇಂತಹ ಸಂದರ್ಭದಲ್ಲಿ ಗುಂಡನಿಗೆ ಜೊತೆಯಾಗುವುದು ಶಂಕರನ ಮಗ. ಶಂಕರನ ಮಗ ಕೂಡಾ, ಇಲ್ಲಿ ನಾಯಿಯಂತೆ ಅನಾಥವಾಗಿ ಬೆಳೆಯುತ್ತಾನೆ. ತಬ್ಬಲಿಯಾದ ಶಂಕರನನ್ನು ಓರ್ವ ದಂಪತಿ ಸಾಕಿ ಸಲಹುತ್ತಾರೆ. ಸಾಕಷ್ಟು ಮನರಂಜನಾತ್ಮಕ ಘಟನೆಗಳೊಂದಿಗೆ ಮುಂದುವರಿಯುವ ಚಿತ್ರದಲ್ಲಿ ಗುಂಡನಿಗೆ ಎದುರಾಗುವ ಹೃದಯಾಘಾತ ಪ್ರಮುಖ ತಿರುವು ತಂದು ಕೊಡುತ್ತದೆ. ಅಲ್ಲಿಂದಾಚೆ, ಚಿತ್ರವು ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

ಶಂಕರನ ಪುತ್ರ ಯುವ ಶಂಕರನಾಗಿ ರಾಕೇಶ್‌ ಅಡಿಗ ನಟಿಸಿದ್ದಾರೆ. ಆದರೆ ಈ ಯುವ ಶಂಕರನ ಪ್ರವೇಶದ ತನಕ ಚಿತ್ರದಲ್ಲಿ ಹಾಸ್ಯಕ್ಕೆ ಒತ್ತು ನೀಡಲಾಗಿದೆ. ರಾಕೇಶ್ ಅಡಿಗ ಎಂಟ್ರಿಯಾಗುವಾಗ ಚಿತ್ರ ಮಧ್ಯಂತರ ತಲುಪಿರುತ್ತದೆ. ಆದರೆ ಗುಂಡ ಮರುಜನ್ಮಗೊಂಡಿದ್ದಾನೆಂದು ಹುಡುಕಿಕೊಂಡು ಹೋಗುವ ಶಂಕರನಿಗೆ ಚಿತ್ರದ ನಾಯಕಿಯ ಭೇಟಿಯಾಗುತ್ತದೆ. ಈ ಮೂರು ಪ್ರಧಾನ ಪಾತ್ರಗಳೊಂದಿಗೆ ಸಿನಿಮಾದ ಕ್ಲೈಮ್ಯಾಕ್ಸ್‌ ವಿಶೇಷ ಆಕರ್ಷಣೆ ಪಡೆಯುತ್ತದೆ.

ಆರಂಭದಲ್ಲಿ ಮಾಲೀಕನನ್ನು ಕಳೆದುಕೊಂಡ‌ ನಾಯಿ ಮತ್ತು ಮಧ್ಯದಲ್ಲಿ ನಾಯಿಯನ್ನು ಕಳೆದುಕೊಂಡ ಮಾಲೀಕ ಈ ಎರಡು ಮಾದರಿಯ ಆತ್ಮಬಂಧವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಭಾವನಾತ್ಮಕ ಸಂಘರ್ಷದ ಮಧ್ಯದಲ್ಲೇ ನಾಯಕಿಯಾಗಿ ರಚನಾ ಇಂದರ್ ಪಾತ್ರಕ್ಕೂ ಉತ್ತಮ ಅವಕಾಶ ಲಭಿಸಿದೆ. ಹಾಸ್ಯ ಪಾತ್ರಗಳಿಗೂ ಇಲ್ಲಿ ಉತ್ತಮ ದೃಶ್ಯಗಳಿವೆ. ರಿಯಾಲಿಟಿ ಶೋಗಳಿಂದ ಜನಮನ ಗೆದ್ದಿರುವ ನಯನಾ ಮತ್ತು ಗೋವಿಂದೇ ಗೌಡ ತಮ್ಮ ಪಾತ್ರಗಳಿಂದ‌ ನಗಿಸಿದ್ದಾರೆ. ಇವರಷ್ಟೇ ಅಲ್ಲದೆ ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ಕಲಾವಿದರು ನಟಿಸಿರುವ ದೃಶ್ಯಗಳು‌ ಕೂಡ ನಗು ತರಿಸುವಲ್ಲಿ ಯಶಸ್ವಿಯಾಗಿದೆ. ಆರ್‌ ಪಿ ಪಟ್ನಾಯಕ್‌ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಮನಮೋಹಕವಾಗಿದೆ. ಪ್ರಾಣಿ ಪ್ರಿಯರು, ಪ್ರೇಮಿಗಳು, ಹಾಸ್ಯ ಪ್ರಿಯರು ಹೀಗೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯಬಲ್ಲ ಕೌಟುಂಬಿಕ ಚಿತ್ರ ಇದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!