ಪಂಚಭಾಷೆಗಳಲ್ಲಿ ಬರುತ್ತಿದೆ “ನಾನು ಭಾರತೀಯ”

ರಾಗಿಣಿ ಮುಖ್ಯಪಾತ್ರದಲ್ಲಿ ನಟಿಸಿರುವ ‘ನಾನು ಭಾರತೀಯ’ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಬಾಲ ವಿಘ್ನೇಶ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣ ಆಗುತ್ತಿರುವ, ಬಾಬು ಗಣೇಶ್ ನಿರ್ದೇಶನ, ಸಂಗೀತ ನಿರ್ದೇಶನ ಮಾಡಿರುವ  ‘ನಾನು ಭಾರತೀಯ’ ಚಿತ್ರದ ಹಾಡುಗಳ ಧ್ವನಿಮುದ್ರಣ ಇತ್ತೀಚಿಗೆ ಅರುಣ್ ಸ್ಟುಡಿಯೋದಲ್ಲಿ ಆರಂಭವಾಯಿತು. ಛಾಯಾಂಕ ಅವರು ಬರೆದಿರುವ ಹಾಗೂ ಸಚಿನ್, ಸ್ವಾತಿ ಹಾಡಿರುವ ‘ವಂದೇ ಮಾತರಂ’ ಹಾಡಿನ ಮೂಲಕ ಚಾಲನೆ ನೀಡಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಸುಂದರರಾಜ್, ಜಯಸಿಂಹ ಮುಸುರಿ  ಹಾಡುಗಳ ಧ್ವನಿಮುದ್ರಣ ಪೂಜಾ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಇದೊಂದು ದೇಶಪ್ರೇಮದ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಈಗಾಗಲೇ ಚಿತ್ರಕ್ಕೆ ಶೇಕಡಾ 70 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಶ್ರೀಲಂಕಾ, ಪಾಂಡಿಚೇರಿ, ಬೆಂಗಳೂರು, ಮೈಸೂರು ಹಾಗೂ ಕೊಡೈಕೆನಾಲ್ ನಲ್ಲಿ ಸಿನಿಮಾದ ಬಹುಭಾಗ ಚಿತ್ರೀಕರಣ ಮಾಡಲಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಐದು ಹಾಡುಗಳಿದೆ‌.

ರಾಹುಲ್, ರಮಾದೇವಿ ಹಾಗೂ ಅಂತೋಣಿ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ನಾದನ್ ಲೀ ಅವರ ಸಾಹಸ, ಸಾಗರ್ ವಿನೋದ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ರಾಗಿಣಿ ದ್ವಿವೇದಿ, ರಿಶಿಕಾಂತ್, ಶ್ರೀಜಿತ್, ಬಾಬು ಗಣೇಶ್, ಮೆಹಾಲಿ, ಬಸಂತ್, ರವಿ, ನಮಿತ, ರಿಷಾ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿಶೇಷಪಾತ್ರದಲ್ಲಿ ಗುರುಪ್ರಸಾದ್(ಪಿ ಯು ಎಸ್) ಹಾಗೂ ಟಿ.ರಾಜೇಂದರ್ ನಟಿಸುತ್ತಿದ್ದಾರೆ.

‘ನಾನು ಭಾರತೀಯ’ ಸಿನಿಮಾದಲ್ಲಿ ನಿರ್ದೇಶಕ ಬಾಬು ಗಣೇಶ್ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ಸಂಗೀತ ನಿರ್ದೇಶನ, ನಿರ್ಮಾಣ, ನಿರ್ದೇಶನ, ನಟನೆ ಸೇರಿದಂತೆ ಹದಿನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡಿರುವುದು ವಿಶೇಷ. ಈ ಹಿಂದೆ ಬಾಬು ಗಣೇಶ್ ಅವರು ‘ನಡಿಗೈ’ ತಮಿಳು ಚಿತ್ರದಲ್ಲೂ ಹದಿನಾಲ್ಕು ವಿಭಾಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಅದು ಗಿನ್ನಿಸ್ ಬುಕ್, ಲಿಮ್ಕಾ ಬುಕ್,  ವಂಡರ್ ಬುಕ್ ಗಳಿಗೆ ದಾಖಲಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!