ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್ 2′ ಚಿತ್ರದಲ್ಲಿ ತಮಿಳು ನಟ ನಾಜರ್ ಅವರು ರಮೇಶ್ ಅವರ ತಂದೆಯಾಗಿ ನಟಿಸಲಿದ್ದಾರೆ.
ಶಿವಾಜಿ ಸುರತ್ಕಲ್ 2′ ಚಿತ್ರದ ಚಿತ್ರೀಕರಣ ಡಿ.13ರಿಂದ ಪ್ರಾರಂಭವಾಗಿದೆ. ಕಳೆದ 10 ದಿನಗಳ ಕಾಲ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
“ಶಿವಾಜಿಯ ತಂದೆ ವಿಜಯೇಂದ್ರ ಸುರತ್ಕಲ್ ಆಗಿ ನಾಜರ್ ನಟಿಸುತ್ತಿದ್ದಾರೆ. ಅವರು ಪೊಲೀಸ್ ಇಲಾಖೆಯಲ್ಲಿ ಐಜಿಯಾಗಿ ನಿವೃತ್ತರಾಗಿರುತ್ತಾರೆ. ಮೊದಲ ಭಾಗದಲ್ಲಿ ಅವರ ಪಾತ್ರವೇಕೆ ಕಾಣಿಸಲಿಲ್ಲ ಎಂದು ಇಲ್ಲಿ ಗೊತ್ತಾಗುತ್ತದೆ. ಪತ್ತೆದಾರಿಕೆಯ ಜತೆಗೆ ಇಲ್ಲಿ ಅಪ್ಪ-ಮಗನ ಕಥೆಯೂ ಇದೆ” ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಹೇಳಿದ್ದಾರೆ.
” ತಂದೆ – ಮಗನ ನಡುವೆ ಕಾರಣಾಂತರಗಳಿಂದ ಮಾತುಕತೆ ನಿಂತು ಹೋಗಿರುತ್ತದೆ. ಇಬ್ಬರೂ ಜೀವನವನ್ನು ನೋಡುವ ರೀತಿ ಬೇರೆಯಾಗಿದ್ದು, ಅದೇ ಘರ್ಷಣೆಗೆ ಕಾರಣವಾಗಿರುತ್ತದೆ. ಅದರ ಬಗ್ಗೆ ಈ ಭಾಗದಲ್ಲಿ ಹೇಳುತ್ತಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.
ನಾಜರ್ ಮತ್ತು ರಮೇಶ್ ಸುಮಾರು 30 ವರ್ಷದಿಂದ ಸ್ನೇಹಿತರಾಗಿದ್ದು, ಇದೇ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ.
‘ಶಿವಾಜಿ ಸುರತ್ಕಲ್ 2’ ಚಿತ್ರಕ್ಕೆ ಆಕಾಶ್ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ವಿುಸುತ್ತಿದ್ದಾರೆ.
ಈ ಚಿತ್ರದಲ್ಲಿ ರಮೇಶ್ ಜತೆಗೆ ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್ ಮುಂತಾದವರು ನಟಿಸುತ್ತಿದ್ದಾರೆ. ಮೇಘನಾ ಗಾಂವ್ಕರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. 2022ರ ಜನವರಿ ಅಂತ್ಯಕ್ಕೆ ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ಬಳಿಕ ಚಿತ್ರ ತೆರೆಗೆ ಬರಲಿದೆ.
___

Be the first to comment