ನಾಗರಹಾವು’ ಅಲ್ಲ, ಇದು ಕೇರೆಹಾವು!

ನಾಗರಹಾವು’ ಅಲ್ಲ, ಇದು ಕೇರೆಹಾವು’ -ತ.ರಾ.ಸು

`ನಾಗರ ಹಾವು’ ಕನ್ನಡ ಚಿತ್ರ ರಂಗದ ಒಂದು ಮೈಲುಗಲ್ಲು. ಎಪ್ಪತ್ತರ ದಶಕದಲ್ಲಿ ಅಸಾಧ್ಯ ಜನಾಕರ್ಷಣೆಯಿಂದ ಗಲ್ಲಾ ಪೆಟ್ಟಿಗೆಯಲ್ಲಿ ಹೊಸ ದಾಖಲೆಯನ್ನು ಸ್ಥಾಪಿಸಿ, ಕನ್ನಡ ಚಿತ್ರ ರಂಗದಲ್ಲಿ ಮೂಡಿಬಂದ ಹೊಸ ಅಲೆಯ ಚಿತ್ರ. ಪ್ರೇಮ ದೃಶ್ಯಗಳ ಚಿತ್ರೀಕರಣ, ಹಿನ್ನಲೆ ಧ್ವನಿಮುದ್ರಣ, ಭಾವೋದ್ವೇಗದ ದೃಶ್ಯಗಳು, ಸ್ಲೋ ಮೊಶನ್ ಹಾಡು, ಕಲಾವಿದರ ಅಭಿನಯ, ಎಲ್ಲಾ ವಿಷಯಗಳಲ್ಲ್ಲೂ `ನಾಗರಹಾವು’ ಇತರೆ ಚಿತ್ರಗಳಿಗಿಂತÀ ಭಿನ್ನವಾಗಿ ಮೂಡಿಬಂತು.
ಮೂಲತಃ ಚಿತ್ರದುರ್ಗದವರಾದ ಪ್ರಸಿದ್ದ ಪತ್ರಕರ್ತ ಡಾ. ಬಿ. ವಿ. ವೈಕುಂಠರಾಜು ಸಂಪಾದಕರಾಗಿದ್ದ ವಾರಪತ್ರಿಕೆಗಾಗಿ ಆರ್.ಜಿ. ವಿಜಯಸಾರಥಿ ಅವರಿಂದ ಬರೆಯಿಸಿದ ಪುಟ್ಟಣ್ಣನವರ ಜೀವನ ಚರಿತ್ರೆ. ಅದಾಗಲೇ ಪುಟ್ಟಣ್ಣನವರನ್ನು ಸಂದರ್ಶಿಸಿದ್ದ ವೈಕುಂಠರಾಜು ಅವರಿಗೆ ಪುಟ್ಟಣ್ಣವರ ಬಗ್ಗೆ ಇದ್ದ ಅಭಿಮಾನ. ಕಾರಣವೇನೆಂದರೆ ಚಿತ್ರದುರ್ಗದ ಐತಿಹಾಸಿಕ ಸ್ಥಳವನ್ನು ಚಲನಚಿತ್ರ ಮಾಧ್ಯಮದ ಮುಖೇನ ಪ್ರೇಕ್ಷಕರಿಗೆ ಕಟ್ಟಿಕೂಟ್ಟ ಪರಿಯಿಂದ ಆಕರ್ಷಿತರಾದ ವೈಕುಂಠರಾಜು ಅವರ ಆಸಕ್ತಿಯಿಂದಾಗಿ ಪುಟ್ಟಣ್ಣನವರ ಜೀವನ ಚರಿತ್ರೆ “ಚಿತ್ರ ಶಿಲ್ಪಿ” ಎಂಬ ಹೆಸರಿನಿಂದ ಮೂಡಿ ಬಂದಿತು.
`ಸಾಕ್ಷತ್ಕಾರ’ ಚಿತ್ರದ ನಂತರದಲ್ಲಿ ಹಲವು ಹತಾಶೆ, ಅವಮಾನ, ನಿರಾಶೆಯ ಬೇಗುದಿಯಲ್ಲಿದ್ದ ಪುಟ್ಟಣ್ಣನವರಲ್ಲಿ ಹೊಸ ಕೆಚ್ಚು ಮೂಡಿತ್ತು. ತಾವು ನಿರ್ದೇಶಿಸಿದ್ದ “ಶರಪಂಜರ” ಇಪ್ಪತೈದು ವಾರ ಪ್ರದರ್ಶನ ಕಂಡು ಕನ್ನಡೇತರ ಪ್ರೇಕ್ಷಕರನ್ನು ಸಹ ಆಕರ್ಷಿಸಿತ್ತು, ಆ ಹೊತ್ತಿಗೆ ಎನ್. ವೀರಾಸ್ವಾಮಿ ಯವರು ಪುಟ್ಟಣ್ಣನವರಿಂದ ಒಂದು ಚಿತ್ರವನ್ನು ನಿರ್ದೇಶಿಸಿ ನಿರ್ಮಿಸುವ ಬಯಕೆ ಹೊಂದಿದ್ದರು, ಪುಟ್ಟಣ್ಣನವರ ಸಲಹೆಯ ಮೇರೆಗೆ ತ.ರಾ.ಸು ಅವರ `ನಾಗರಹಾವು’ ಚಿತ್ರಕ್ಕೆ ಸಂಬಂಧಿಸಿದ ಮೂರು ಕಥೆಗಳ ಹಕ್ಕನ್ನು ಪಡೆದಿದ್ದರು, `ನಾಗರಹಾವು’ ಚಿತ್ರವನ್ನು ಚಿತ್ರದುರ್ಗದಲ್ಲಿಯೇ ಚಿತ್ರೀಕರಿಸಬೇಕೆಂದು ಹಠ ತೊಟ್ಟಿದ್ದ ಪುಟ್ಟಣ್ಣನವರಿಗೆ ಪ್ರಾರಂಭದಲ್ಲಿಯೆ ವಿಘ್ನಗಳು ಎದುರಾದವು. ಚಿತ್ರದುರ್ಗದ ಬೆಟ್ಟದಲ್ಲಿ ಕೋಟೆ ಕೊತ್ತಲುಗಳ ದುರ್ಗಮ ಹಾದಿಯಲ್ಲಿ ಚಿತ್ರವನ್ನು ಚಿತ್ರೀಕರಿಸುವುದಕ್ಕೆ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯವು ಅನುಮತಿ ನಿರಾಕರಿಸಿತು. ಪುಟ್ಟಣ್ಣ ಹಾಗೂ ನಿರ್ಮಾಪಕರಾದ ವೀರಾಸ್ವಾಮಿ ಅವರು ಹಿಡಿದ ಹಠ ಬಿಡಲಿಲ್ಲ. ಇವರಿಬ್ಬರ ಬೆಂಬಲಕ್ಕೆ ನಿಂತ ಕೆಲವು ಕನ್ನಡಪರ ಸಂಘ ಸಂಸ್ಥೆಗಳು ಕೇಂದ್ರ ಸರ್ಕಾರ ಅನುಮತಿ ನೀಡದಿದ್ದರೆ ಚಳವಳಿ ಹೂಡುವ ಬೆದರಿಕೆ ಒಡ್ಡಿದವು, ಚಿತ್ರದುರ್ಗದ ಜನ ಚಿತ್ರೀಕರಣಕ್ಕೆ ಒತ್ತಾಯಿಸಿದ ಪರಿಣಾಮ ಅನುಮತಿ ಸಿಕ್ಕಿತು.
ಅಲಮೇಲು ಪಾತ್ರದ ಆಯ್ಕೆಯ ಕಗ್ಗಂಟು :
“ಗೆಜ್ಜೆಪೂಜೆ” ಚಿತ್ರದಲ್ಲಿ ಅಭಿನಯಿಸಿದ್ದ ಆರತಿಯವರು “ಠಕ್ಕ ಬಿಟ್ರೆ ಸಿಕ್ಕ” ಚಿತ್ರದಲ್ಲಿ ಅಭಿನಯಿಸಿದರಾದರು ಹೇಳಿಕೊಳ್ಳುವಂತಹ ಚಿತ್ರಗಳು ಅವರಿಗೆ ಸಿಗಲಿಲ್ಲ. ತೆಲಗು ಚಿತ್ರಗಳಲ್ಲಿ ಅಭಿನಯಿಸಲು ಪ್ರಾರಂಭಿಸಿ ಮದ್ರಾಸಿನಲ್ಲಿಯೆ ಮನೆ ಮಾಡಿಕೊಂಡಿದ್ದರು. ಪುಟ್ಟಣ್ಣ ನವರು ಅಲಮೇಲು ಪಾತ್ರಕ್ಕೆ ಅರತಿಯವರನ್ನು ಆಯ್ಕೆಮಾಡಲು ಕಾರಣ “ಸಿಪಾಯಿ ರಾಮು” ಚಿತ್ರದಲ್ಲಿ ಅವರು ನೀಡಿದ್ದ ಭರವಸೆಯ ಅಭಿನಯ.
ಮಾರ್ಗರೇಟ್ ಪಾತ್ರವನ್ನು ನಿರ್ವಹಿಸುವ ಅಭಿಲಾಷೆ ಹೊಂದಿದ್ದ ಕಲ್ಪನಾ ನಟ ಹಾಗೂ ನಿರ್ಮಾಪಕರಾದ ಶಿವರಾಂ ಅವರಲ್ಲಿ ತಮಗೆ ಆ ಅವಕಾಶ ಸಿಗಬಹುದೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ಆದರೆ ಪುಟ್ಟಣ್ಣನವರ ಕಲ್ಪನೆಯ ರಾಮಾಚಾರಿ ಒಬ್ಬ ಕಾಲೇಜು ಹುಡುಗನಾಗಿದ್ದ ಕಾರಣ ಈ ಹಿಂದಿನ ತಮ್ಮ ಚಿತ್ರಗಳಲ್ಲಿ ಹಲವಾರು ರೀತಿಯ ಪ್ರಬುದ್ಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಲ್ಪನಾ ಅವರನ್ನು ರಾಮಚಾರಿ ಜೋಡಿಯಾಗಿಸುವುದು ಪುಟ್ಟಣ ಅವರಿಗೆ ಬಿಲ್‍ಕುಲ್ ಇಷ್ಟವಿರಲ್ಲಿಲ್ಲ. ಮಾರ್ಗರೇಟ್ ಪಾತ್ರಕ್ಕೆ ಹಿರಿಯ ನಿರ್ದೇಶಕ ವೇದಾಂತಂ ರಾಘವಯ್ಯ ಅವರ ಪುತ್ರಿಯಾದ ಶುಭಾಳನ್ನು ಆಯ್ಕೆ ಮಾಡಿದರು. `ಗೂಡು ಪುಟಾಣಿ’ ಎನ್ನುವ ತೆಲುಗು ಚಿತ್ರದಲ್ಲಿ ಚೆನ್ನಾಗಿ ಅಭಿನಯಿಸಿದ್ದ ಶುಭ ಅವರು ಮಾರ್ಗರೇಟ್ ಪಾತ್ರಕ್ಕೆ ಸೂಕ್ತ ಎಂದು ಪುಟ್ಟಣ್ಣ ಅವರು ಅರಿತುಕೊಂಡಿದ್ದರು. ಇದರಿಂದ ಕಲ್ಪನಾ ಅವರಿಗೆ ನಿರಾಶೆಯಾಯಿತು. ಆದರೆ ಚಿತ್ರದ ಹಾಡಿನಲ್ಲಿ ಬರುವ ಚಾರಿತ್ರಿಕ ಸನ್ನಿವೇಶದ ಓಬ್ಬವ್ವನ ಪಾತ್ರ ಮಾಡಲು ವೀರಾಸ್ವಾಮಿಯವರಿಂದ ಕರೆಹೋಯಿತಾದರೂ ತಮಗೆ ಒಗ್ಗದ ಪಾತ್ರದಲ್ಲಿ ತಾವು ಅಭಿನಯಿಸುವುದಿಲ್ಲ ಎಂದು ಬಿಟ್ಟರು ಕಲ್ಪನಾ. ಒನಕೆ ಓಬವ್ವನ ಹಾಡಿನ ಚಿತ್ರೀಕರಣವನ್ನು ಅದ್ದೂರಿಯಾಗಿ ಚಿತ್ರೀಕರಿಸಬೇಕೆಂದು ನಿರ್ಧರಿಸಿದ ಪುಟ್ಟಣ ಅವರು `ಕನ್ನಡ ನಾಡಿನ ವೀರರ ಮಣಿಯ’ ಹಾಡಿಗಾಗಿ ಹೈದರಾಲಿ ಮತ್ತು ಮದಕರಿನಾಯಕನ ಸೈನಿಕರಿಗಾಗಿ 220 ಹೋಂಗಾರ್ಡ್‍ಗಳನ್ನು ಕರೆಸಿದ್ದರು. ಹಾಡಿನ ಸನ್ನಿವೇಶದಲ್ಲಿ ಬರುವ ಓಬವ್ವನ ಪಾತ್ರವನ್ನು ಕೂಡಲೇ ಒಪ್ಪಿಕೊಂಡು ಅಭಿನಯಿಸಿದ್ದ ಜಯಂತಿ ಅವರನ್ನು `ಎಡಕಲ್ಲು ಗುಡ್ಡದ ಮೇಲೆ’ ಚಿತ್ರದಲ್ಲಿ ಮುಖ್ಯ ಪಾತ್ರ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದರು.
ತಡವಾದ ಚಿತ್ರೀಕರಣ ವರವಾದ ವಾತಾವರಣ
ಅನುಮತಿ ಸಿಗದ ಕಾರಣ ತಡವಾಗಿ ಆರಂಭವಾದ ಚಿತ್ರೀಕರಣಕ್ಕೆ ಒಂದು ರೀತಿ ಒಳ್ಳೆಯದೇ ಆಯಿತು. ಈ ವಿಳಂಬದ ಮಧ್ಯೆ ಮಳೆ ಬಂದು ಬೆಟ್ಟದಲ್ಲೆಲ್ಲಾ ಹಸಿರುಹುಲ್ಲು ಬೆಳೆದು ಚಿತ್ರೀಕರಣಕ್ಕೆ ಬೇಕಾದ ವಾತಾವರಣ ದುರ್ಗದ ಎಲ್ಲಾ ಐತಿಹಾಸಿಕ ಸ್ಥಳಗಳನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆಹಿಡಿಯಲು ಅವಕಾಶವಾಯಿತು. ಚಿತ್ರೀಕರಣ ನಡೆಯುವ ಮೊದಲ ದಿನವೇ ಸಾವಿರಾರು ಮಂದಿ ಜಮಾಯಿಸಿದ್ದರು. ದುರ್ಗದ ಕೋಟೆ, ದುರ್ಗದ ಹಳೆಯ ರಸ್ತೆ, ಗರಡಿ, ಸುಲ್ತಾನ್‍ಬತೇರಿ, ಮಾರೀಕಣಿವೆ, ಅಂಗುಲಂಗುಲ ಸ್ಥಳವನ್ನು ಪುಟ್ಟಣ್ಣ ಅವರು ಸೆರೆಹಿಡಿದರು. ರಾಮಾಚಾರಿಯ ದುರಂತ ಪ್ರೇಮಕಥೆಯ ಬೆಟ್ಟಗುಡ್ಡಗಳು, ಬಂಡೆಗಳು, ಮಾರ್ಗರೇಟ್ ಮನೆಗಾಗಿ ವಿಶೇಷ ಸೆಟ್, ಅಯ್ಯಂಗಾರರ ಮನೆಯ ರೀತಿ ರಿವಾಜುಗಳಿಗೆ ತಕ್ಕಂತ ಅಲಮೇಲು ಮನೆಯ ಸೆಟ್, ವಿಷ್ಣುವರ್ಧನ್, ಅಂಬರೀಷ್ ಹೊಡೆದಾಟದ ದೃಶ್ಯಗಳನ್ನು ರಸ್ತೆಯಲ್ಲಿಯೆ ಚಿತ್ರೀಕರಿಸಿದರು. ಎಂ.ಜಿ.ಆರ್ ಅವರ ಚಿತ್ರಗಳಿಗೆ ಶಾಶ್ವತವಾಗಿ ಹೊಡೆದಾಟದ ದೃಶ್ಯಗಳನ್ನು ಸಂಯೋಜಿಸುತ್ತಿದ್ದ ಶ್ಯಾಮಸುಂದರ್ ಅವರಿಗೆ ಇದೊಂದು ವಿನೂತನ ಅನುಭವ. ನಿರ್ಮಾಪಕ ವೀರಾಸ್ವಾಮಿ ಹಾಗೂ ಸಹ ನಿರ್ಮಾಪಕರಾಗಿದ್ದ ಗಂಗಪ್ಪ ಪುಟ್ಟಣ್ಣನವರು ಹೇಳಿದ್ದೆನೆಲ್ಲ ಸರಬರಾಜು ಮಾಡಿ ಚಿತ್ರ ಅದ್ದೂರಿಯಾಗಿ ಮೂಡಿ ಬರಲು ಶ್ರಮಸಿದ್ದರು.
ಕಪಾಳ ಮೋಕ್ಷ
ಬೆಟ್ಟದಲ್ಲಿ ಮೊದಲು ನಾಲ್ಕು ಹಾಡುಗಳ ಮತ್ತು ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಿತು. ಸಾಕಷ್ಟು ಭಾವೋದ್ವೇಗದಿಂದಿರುತ್ತಿದ್ದ ಪುಟ್ಟಣ್ಣನವರಿಂದ ಕಲಾವಿದರಿಗೆ ಕಪಾಳ ಮೋಕ್ಷವೂ ಆಗುತಿತ್ತು.
ನ್ಯಾಷನಲ್ ಕಾಲೇಜಿನ ಸಂಪತ್‍ಕುಮಾರ್ ವಿಷ್ಣುವರ್ಧನ್ ಆಗಿದ್ದು
ನಾಗರಹಾವು ಚಿತ್ರದ ನಾಯಕನಿಗಾಗಿ ಪುಟ್ಟಣ್ಣ ಹಲವಾರು ದಿನಗಳ ಅನ್ವೇಷಣೆ ನಡೆಸಿದ್ದರು. ಮೈಸೂರಿನಲ್ಲಿ ಸುಮಾರು 500 ಕಾಲೇಜು ಹುಡುಗರ ಸಂದರ್ಶನ ನಡೆಯಿತು. ಆದರೆ ಪುಟ್ಟಣ್ಣನವರಿಗೆ ಯಾರು ಸರಿಬರಲಿಲ್ಲ. ಒಂದು ದಿನ ಸ್ನೇಹಿತರೊಬ್ಬರು ಕರೆತಂದ ಹುಡಗನನ್ನು ನೋಡಿದ ಪುಟ್ಟಣ್ಣನವರು ಹುಡುಗ ನೋಡುವುದಕ್ಕೆ ಅಂದವಾಗಿದ್ದಾನೆ ಎಂದರು. ಕಾನಕಾನಹಳ್ಳಿ ಗೋಪಿ ‘ಪ್ರಜಾವಾಣಿ’ಯ ವೈ.ಎನ್ಕೆ ಯವರ ಮೂಲಕ ಜಿ.ವಿ. ಅಯ್ಯರ್ ಅವರಿಗೆ ಪರಿಚಿತವಾಗಿ ಗಿರೀಶ್‍ಕಾರ್ನಡ್ ನಿರ್ದೇಶನದ `ವಂಶವೃಕ್ಷ’ದಲ್ಲಿ ಪೃಥ್ವಿ ಅಂತ ಚಿತ್ರದ ಕಡೆಯಲ್ಲಿ ಬರುವ ಒಂದು ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದಾನೆ ಎಂದರು. ಆ ಚಿತ್ರವನ್ನು ನೋಡಿದ್ದೇನೆ ಎಂದ ಪುಟ್ಟಣ್ಣನವರು ನಾಳೆ ಸ್ಕ್ರೀನ್‍ಟೆಸ್ಟ್‍ಗೆ ಕರೆದುಕೊಂಡು ಬನ್ನಿ ನೋಡೋಣ ಎಂದರು. ಕಾಲೇಜಿನ ನಾಟಕಗಳಲ್ಲಿ ಸ್ತ್ರೀ ಪಾತ್ರಗಳಲ್ಲಿ ಅಭಿನಯಿಸಿದ್ದ ‘ಕುಮಾರ್’ ನಾಗರಹಾವು ಚಲನಚಿತ್ರದಲ್ಲಿ ರಾಮಾಚಾರಿ ಪಾತ್ರ ಮಾಡುವ ಮೂಲಕ ವಿಷ್ಣುವರ್ಧನ್ ಆಗಿ, ಕನ್ನಡ ಚಿತ್ರರಂಗಕ್ಕೆ ನಾಯಕ ನಟರಾಗಿ ಪರಿಚಿತರಾದರು.
ಹನುಮಂತನ ತಾಯಿತ ಮಾರ್ಗರೇಟ್ ಶಿಲುಬೆ
ರಾಮಾಚಾರಿ ಮತ್ತು ಮಾರ್ಗರೇಟ್ ಅವರ ನಡುವೆ ಪ್ರೀತಿ ಬೆಳೆದು ಪರಾಕಾಷ್ಠೆ ಮುಟ್ಟುವುದನ್ನು ಪುಟ್ಟಣನವರು ಸಂಕೇತಗಳ ಮೂಲಕವೇ ತೋರಿಸಿದ್ದರು. ರಾಮಚಾರಿಯ ಹನುಮಂತನ ತಾಯಿತ ಮತ್ತು ಮಾರ್ಗರೇಟ್‍ಗಳ ಶಿಲುಬೆಗಳನ್ನು ಸೇರಿಸಿ ಅಷ್ಟನ್ನು ಮಾತ್ರ ಸೆರೆಯಿಡಿಯಬೇಕೆಂದು ಪುಟ್ಟಣ್ಣ ಛಾಯಾಗ್ರಾಹಕ ಚಿಟ್ಟಿಬಾಬು ಅವರಿಗೆ ಹೇಳಿದರು. `ಸಾರ್, ಯಾರದ್ದೂ ಮುಖ ಕಾಣುತ್ತಿಲ್ಲ, ಕ್ಯಾಮರಾ ಆ್ಯಂಗಲ್ ಪೂರ್ತಿ ಹನುಮಂತನ ತಾಯಿತ ಮತ್ತು ಶಿಲುಬೆ ಸೇರಿ ಬೆಸುಗೆಯಾಗಿರುವುದು ಕಾಣುತ್ತಿದೆ ಮುಖಗಳು ಕಾಣದೆ ಶಾಟ್ ತೆಗೆಯಲು ಸಾಧ್ಯವೇ ಎಂದರು ಚಿಟ್ಟಿಬಾಬು. `ನೀವು ಅದೇ ಶಾಟ್ ತೆಗೆಯಿರಿ ನನಗೆ ಹಾಗೇ ಬೇಕು ಎಂದರು ಪುಟ್ಟಣ್ಣ. ಚಿತ್ರ ಬಿಡುಗಡೆಯಾದಾಗ ಈ ಶಾಟ್‍ಗೆ ಜನರ ಭಾರಿ ಪ್ರಶಂಸೆ ವ್ಯಕ್ತವಾಯಿತು.
ಕೇರೆ ಹಾವು
ನಾಗರಹಾವು ಚಿತ್ರದ ಪ್ರಥಮ ಪ್ರದರ್ಶನವನ್ನು ಉದ್ಯಮದವರಿಗೆ ಹಾಗೂ ಪತ್ರಕರ್ತರಿಗೆ ಸಾಗರ್ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದರು. ಸಾಗರ್‍ನ ಬೆಳಗಿನ ಪ್ರದರ್ಶನವೇ ಚಿತ್ರದ ಮೊದಲ ಪ್ರದರ್ಶನವಾಗಿತ್ತು. ಮೊದಲ ಪ್ರದರ್ಶನದಲ್ಲೇ ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ವೀರಾಸ್ವಾಮಿಯವರಿಗಂತೂ ವಿಪರೀತ ಸಂತೋಷ. ನಾಗರಹಾವು ಚಲನಚಿತ್ರವು ರಜತೋತ್ಸವ ಆಚರಿಸಿತು. ರಿಪೀಟ್ ಆಡಿಯೆನ್ಸ್ ಈ ಚಿತ್ರಕ್ಕೆ ಹೆಚ್ಚಾಗಿ ಬರುತ್ತಿದ್ದರು. ಗಲ್ಲಾ ಪೆಟ್ಟಿಗೆಯನ್ನು ಕೊಳ್ಳೇ ಹೊಡೆದ ಈ ಚಿತ್ರ ವೀರಾಸ್ವಾಮಿ ಅವರನ್ನು ಕನ್ನಡ ಚಿತ್ರರಂಗದ ಶ್ರೀಮಂತ ನಿರ್ಮಾಪಕರನ್ನಾಗಿ ಮಾಡಿತ್ತು.
`ನಾಗರಹಾವು’ ಚಿತ್ರಕ್ಕೆ ಸಂಬಂಧ ಪಟ್ಟ ಮೂರು ಕಾದಂಬರಿಯ ಹಕ್ಕುಗಳನ್ನು ನೀಡಿದ್ದ ತ.ರಾ.ಸು ಅವರನ್ನು ಚಿತ್ರ ಬಿಡುಗಡೆಯ ನಂತರ ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಕಾದಂಬರಿಯಲ್ಲಿ ತಾವು ಬರೆದಂತೆ ರಾಮಾಚಾರಿ, ಚಾಮಯ್ಯ ಮೇಷ್ರ್ಟು, ಮಾರ್ಗರೇಟ್, ಅಲಮೇಲು ಪಾತ್ರಗಳು ಚಿತ್ರದಲ್ಲಿ ತಮ್ಮ ಕಲ್ಪನೆಗೆ ಅನುಗುಣವಾಗಿ ಮೂಡಿಬಂದಿಲ್ಲ ಎಂದು ಪತ್ರಿಕೆಯೊಂದಕ್ಕೆ ಪತ್ರ ಬರೆದು ತಮ್ಮ ಅಸಹನೆ ದಾಖಲಿಸಿ `ನಾಗರಹಾವು’ ಚಿತ್ರವನ್ನು ‘ಕೇರೆ ಹಾವು’ ಎಂದು ಕರೆದರು.
ಚಿತ್ರೀಕರಣ ನಡೆಯುತ್ತಿರವಾಗಲೇ ಪುಟ್ಟಣ್ಣನವರಿಗೆ ಮದರಾಸು ಚಿತ್ರ ಪ್ರೇಮಿಗಳ ಸಂಘದ `ಶ್ರೇಷ್ಠ ನಿರ್ದೇಶಕ’ ಪ್ರಶಸ್ತಿ `ಶರಪಂಜರ’ ಚಿತ್ರಕ್ಕಾಗಿ ಬಂದಿತ್ತು. `ನಾಗರಹಾವು’ ಚಲನಚಿತ್ರದ ಭರ್ಜರಿ ಯಶಸ್ಸು ಪುಟ್ಟಣ್ಣನವರ ಏರುಮುಖದ ಕೀರ್ತಿಗೆ ಮತ್ತೊಂದು ಗರಿಯಾಗಿ ಸೇರ್ಪಡೆಯಾಗಿ ಒಂದು ಇತಿಹಾಸವನ್ನು ಸೃಷ್ಠಿಸಿತು.

-ಆರ್. ವೆಂಕಟರಾಜು (ಸದಸ್ಯರು, ಕರ್ನಾಟಕ ನಾಟಕ ಆಕಾಡೆಮಿ)

This Article Has 1 Comment
  1. Pingback: regression testing

Leave a Reply

Your email address will not be published. Required fields are marked *

Translate »
error: Content is protected !!