ಕನ್ನಡದ ಹಿರಿಯ ನಿರ್ದೇಶಕ ಎಸ್ ಮುರಳಿ ಮೋಹನ್ ( 56) ನಿಧನರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್ ಅವರು ಬಹು ಅಂಗಾಂಗ ವೈಫಲ್ಯದಿಂದ ಆಗಸ್ಟ್ 13ರಂದು ನಿಧನರಾಗಿದ್ದಾರೆ. ಉಪೇಂದ್ರ ಜತೆಗೆ ʼಶ್ʼ, ʼಓಂʼ ಚಿತ್ರಗಳಲ್ಲಿ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದ ಮುರುಳಿ ಮೋಹನ್ ಬಳಿಕ ಉಪೇಂದ್ರ ನಟನೆಯ ʼನಾಗರಹಾವುʼ, ಶಿವ ರಾಜ್ಕುಮಾರ್ ನಟನೆಯ ʼಸಂತʼ, ರವಿಚಂದ್ರನ್ ಅಭಿನಯದ ‘ಮಲ್ಲಿಕಾರ್ಜುನʼ ಮುಂತಾದ ಚಿತ್ರಗಳಿಗೆ ನಿರ್ದೇಶನ ಮಾಡಿದ್ದರು.
ಕೆಲವು ತಿಂಗಳ ಅನಾರೋಗ್ಯ ಕಾಡುತ್ತಿದೆ. ದಯವಿಟ್ಟು ಬದುಕಿಸಿ. ಮೂತ್ರಪಿಂಡ ಕಸಿ ಚಿಕಿತ್ಸೆಗೆ 25 ಲಕ್ಷ ರೂ. ಅಗತ್ಯವಿದ್ದು, ದಾನಿಗಳು ಹಣಕಾಸಿನ ನೆರವು ನೀಡಿ ಎಂದು ಚಿತ್ರರಂಗದ ಆತ್ಮೀಯರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಮುರಳಿ ಮೋಹನ್ ಮನವಿ ಮಾಡಿದ್ದರು. ಆದರೆ ಇದೀಗ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.
2018ರಿಂದ ಮುರಳಿ ಮೋಹನ್ ಅವರಿಗೆ ಅನಾರೋಗ್ಯ ಬಾಧಿಸುತ್ತಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮುರಳಿ ಮೋಹನ್ ವಾರಕ್ಕೆ 3 ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. 2020 ರಲ್ಲಿ ಕಿಡ್ನಿ ಟ್ರ್ಯಾನ್ಸ್‌ಪ್ಲಾಂಟ್‌ಗೆ ಮುರಳಿ ಮೋಹನ್ ಒಳಗಾಗಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮುರುಳಿ ಮೋಹನ್ ಅವರು, ”’ಓಂʼ, ‘ಶ್ʼ ಮುಂತಾದ ಸಿನಿಮಾ ಮಾಡುವಾಗ ಕೇವಲ 2 ಗಂಟೆ ಮಲಗುತ್ತಿದ್ದೆವು. ಬೆಳಗಿನ ಜಾವ 3 ಗಂಟೆಗೆ ಮಲಗಿ 5 ಗಂಟೆಗೆ ಏಳುತ್ತಿದ್ದೆವು. ಬಳಿಕ ಅದು ಅಭ್ಯಾಸವಾಗಿ ಬಿಟ್ಟಿತ್ತು. ಶೂಟಿಂಗ್ ಇಲ್ಲದಾಗಲೂ 3 ಗಂಟೆ ತನಕ ನಿದ್ದೆ ಬರುತ್ತಿರಲಿಲ್ಲ. ಈಗಲೂ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಸಿನಿಮಾದವರ ಜೀವನವೇ ಅಶ್ತಿನಿಂದ ಕೂಡಿರುತ್ತದೆ. ಎಲ್ಲೋ ತಿಂತೀವೆ. ಎಲ್ಲೋ ಮಲಗ್ತೀವಿ. ಸರಿಯಾದ ನಿದ್ದೆ ಇರಲ್ಲ. ಇದರಿಂದ ಕಾಯಿಲೆ ವಕ್ಕರಿಸುತ್ತವೆʼʼ ಎಂದಿದ್ದರು.
ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಮುರಳಿ ಮೋಹನ್, ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಪ್ತ ಸ್ನೇಹಿತರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ್ದರು. ನಿರ್ದೇಶಕರಾಗಿ, ನಟರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದರು.
ಎಸ್ ಮುರಳಿ ಮೋಹನ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.





Pingback: purchase enclomiphene usa cheap