ಸದ್ಯದಲ್ಲಿಯೇ ತೆರೆಕಾಣಲಿರುವ “ಮುಂದಿನ ನಿಲ್ದಾಣ” ಚಿತ್ರದಲ್ಲಿ ಅಜಯ್ ರಾಜ್ ಅವರು ‘ಏಕ’ ಅರ್ಥಾತ್ ಏಕಲವ್ಯ ಎಂಬ ಹೆಸರಿನ ಕಥಾಪಾತ್ರವೊಂದಕ್ಕೆ ಜೀವತುಂಬಲಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರಿಗೂ ಆಪ್ತ ಮಿತ್ರನೊಬ್ಬ ಇದ್ದೇ ಇರ್ತಾನಂತೆ. ಚಿತ್ರದ ನಾಯಕ ನಟ ಪ್ರವೀಣ್ ತೇಜ್ ಅವರು ನಟಿಸುತ್ತಿರುವ ಪಾರ್ಥ ಎಂಬ ಕಥಾ ಪಾತ್ರಕ್ಕೂ ಅಂತಹುದೇ ಒಬ್ಬ ಪ್ರಾಣಸ್ನೇಹಿತ ಇದ್ದಾನೆ. ಅವನೇ ಅಜಯ್ ರಾಜ್ ಅವರು ನಟಿಸುತ್ತಿರುವ ಏಕ! ಇತ್ತೀಚೆಗೆ ಬಿಡುಗಡೆಗೊಂಡ ಆ ಚಿತ್ರದ ಪೋಸ್ಟರ್ ಒಂದರಲ್ಲಿ ಅಜಯ್ ರಾಜ್, ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಅವರು ಕಾಫೀ ಶಾಪ್ ಒಂದರಲ್ಲಿ ಒಟ್ಟಾಗಿ ಕುಳಿತು ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ಚಿತ್ರವೊಂದು ಗಮನ ಸೆಳೆಯುತ್ತಿದೆ. ಈ ಪೋಸ್ಟರನ್ನು ನೋಡಿದವರು ಯಾರೇ ಆದರೂ ಒಂದು ಕ್ಷಣ ತಾವೆಂದೋ ತಮ್ಮ ಸ್ನೇಹಿತರೊಂದಿಗೆ ಕಳೆದ ಸ್ಮರಣೀಯ ಕ್ಷಣಗಳನ್ನು ನೆನಪಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ!
ನಾಯಕ ನಟನ ಪ್ರಾಣ ಸ್ನೇಹಿತ ಅಂದ ಮೇಲೆ, ಈ ಚಿತ್ರದಲ್ಲಿ ಆ ಪಾತ್ರಕ್ಕಿರುವ ಪ್ರಾಮುಖ್ಯತೆಯನ್ನು ಬಿಡಿಸಿ ಹೇಳಬೇಕಾಗಿಯೇ ಇಲ್ಲ. ಅಂತಹಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಜಯ್ ರಾಜ್ ಅವರು ತಮ್ಮ ಐದನೇಯ ವರ್ಷದಲ್ಲಿಯೇ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು..ಅದೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಹಳ್ಳಿ ಮೇಷ್ಟ್ರು ಚಿತ್ರದಲ್ಲಿ! ಗಿರೀಶ್ ಕಾಸರವಳ್ಳಿ ಅವರ ಕ್ರೌರ್ಯ, ಕೂರ್ಮಾವತಾರ ಮೊದಲಾದ ಚಿತ್ರಗಳ ಸಹಿತ ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡ ಹಲವಾರು ಚಿತ್ರಗಳಲ್ಲಿ ಅವರು ಬಾಲನಟರಾಗಿದ್ದು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.
ಟಿ. ಎನ್ ಸೀತಾರಾಂ ನಿರ್ದೇಶನದ ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿದ ಅವರು ಮನೆ ಮಾತಾಗಿ ಹೋಗಿದ್ದು ಮಾತ್ರವಲ್ಲದೇ ಆ ಹೆಸರಿನಲ್ಲಿಯೇ ಕನ್ನಡಿಗರೆಲ್ಲರಿಗೂ ಚಿರಪರಿಚಿತರು.
ಕನ್ನಡಿಗರೇ ಆದ ರಮೇಶ್ ಅರವಿಂದ್ ಅವರು ತಮಿಳು ಭಾಷೆಯಲ್ಲಿ ನಿರ್ದೇಶಿಸಿರುವ ಉತ್ತಮ ವಿಲ್ಲನ್ ಸಿನಿಮಾದಲ್ಲಿ ಅವರು ಮೇರು ನಟ ಕಮಲ್ ಹಾಸನ್ ಜೊತೆಯಲ್ಲಿಯೂ ತೆರೆಯ ಮೇಲೆ ಕಾಣಿಸಿಕೊಂಡರು. ಅದರ ಜೊತೆಗೇ ಇನ್ನಷ್ಟು ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲಿ ಕನ್ನಡದ ಸೊಗಡನ್ನು ತೋರಿಸಿಕೊಟ್ಟರು.
ತುಂಬಾ ಹೊಸತನಗಳೊಂದಿಗೆ ತೆರೆಕಾಣಲಿರುವ ಮುಂದಿನ ನಿಲ್ದಾಣ ಚಿತ್ರದಲ್ಲಿ ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಮುಖ್ಯ ಪಾತ್ರದಲ್ಲಿದ್ದಾರೆ. ಇಬ್ಬರು ನಗರವಾಸಿಗಳ ಪ್ರೇಮ ಪಯಣದ ಕಥೆಯನ್ನು ಹೇಳುವ ಈ ಚಿತ್ರದಲ್ಲಿ ಅಜಯ್ ರಾಜ್ ಅವರು ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶಿಸಿರುತ್ತಾರೆ. ಲಕ್ಷ ಲಕ್ಷ ಕೇಳುಗರ ಮನವನ್ನು ಸೂರೆಗೊಂಡ ‘ಮನಸೇ ಮಾಯ’ ಎಂಬ ಹಾಡು, ಹಾಗೂ ವಿಭಿನ್ನ ಮಾದರಿಯ ಪೋಸ್ಟರ್ ಗಳಿಂದ ತೀವ್ರ ಕುತೂಹಲ ಕೆರಳಿಸುತ್ತಿರುವ ಈ ಚಿತ್ರವು ನವೆಂಬರ್ ಮೊದಲವಾರದಲ್ಲಿ ತೆರೆ ಕಾಣಲಿದೆ. ಇಷ್ಟೊಂದು ವಿಶೇಷತೆಗಳಿಂದ ಕೂಡಿದ್ದು, ಬಿಡುಗಡೆಗೂ ಮುನ್ನವೇ ಸ್ಯಾಂಡಲ್ವುಡ್’ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಚಿತ್ರವನ್ನು ಕನ್ನಡಿಗ ಕೈಬೀಸಿ ಸ್ವಾಗತಿಸುತ್ತಾನೆ ಎನ್ನುವುದರಲ್ಲಿ ಸಂದೇಹವೇ ಇಲ್ಲ!
Be the first to comment