ಸಂಗೀತ ನಿರ್ದೇಶಕ ಹಂಸಲೇಖ ಅವರ ಶಿಷ್ಯರಲ್ಲಿ ಅನೇಕರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾಗಿದೆ. ಆ ಸಾಲಿಗೆ ಈಗ ವಸಂತ್‌ರಾಜ್ ಹೊಸ ಸೇರ್ಪಡೆ. ಯಾರು ಈ ವಸಂತ್‌ರಾಜ್ ಎಂಬ ಪ್ರಶ್ನೆಗೆ “ಕದ್ದು ಮುಚ್ಚಿ’ ಚಿತ್ರ ಉತ್ತರ. ಹೌದು, ಕಳೆದ ಎರಡು ವರ್ಷಗಳ ಹಿಂದೆ ಶುರುವಾಗಿದ್ದ #ಕದ್ದುಮುಚ್ಚಿ ಚಿತ್ರ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ.
ಈ ಚಿತ್ರಕ್ಕೆ ವಿಜಯ್ ಸೂರ್ಯ ನಾಯಕ. ಅವರಿಗೆ ಮೇಘಶ್ರೀ ನಾಯಕಿ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ಲವ್‌ಸ್ಟೋರಿ ಚಿತ್ರ. ಈ ಕುರಿತು ಹೇಳಿಕೊಳ್ಳುವ ನಿರ್ದೇಶಕ ವಸಂತ್‌ರಾಜ್, “ಯೂಥ್ ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರದಲ್ಲಿದೆ.
ಫ್ಯಾಮಿಲಿಗೂ ಕನೆಕ್ಟ್ ಆಗುವಂತಹ ವಿಷಯಗಳು ಅಡಕವಾಗಿವೆ. ತಂದೆ-ತಾಯಿ ಪ್ರೀತಿ ಕಾಣದ ಹೀರೋ, ಬದಲಾವಣೆಗಾಗಿ ತೀರ್ಥಹಳ್ಳಿಗೆ ಹೋಗುತ್ತಾನೆ. ಆಕಸ್ಮಿಕವಾಗಿ ಅಲ್ಲೊಬ್ಬ ಮುಗ್ಧ ಮತ್ತು ಸುಸಂಸ್ಕೃತ ಹುಡುಗಿಯ ಭೇಟಿಯಾಗುತ್ತೆ. ಅವರಿಬ್ಬರ ನಡುವೆ ಒಂದಷ್ಟು ಮಾತುಕತೆ ನಡೆಯುತ್ತೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರದ ಕಥೆ. ಯಾವುದೇ ಮುಜುಗರ ಇಲ್ಲದ ಸಿನಿಮಾ ಇದಾಗಿದ್ದು, ಈಗಿನ ಯೂಥ್ಸ್ ಮನದಲ್ಲಿಟ್ಟುಕೊಂಡು ಮಾಡಿರುವ ಚಿತ್ರ’ ಎಂಬ ವಿವರ ಕೊಡುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಹಂಸಲೇಖ ಅವರನ್ನೇ ಸಂಗೀತ ನಿರ್ದೇಶಕರನ್ನಾಗಿಸಬೇಕು ಎಂಬ ಉದ್ದೇಶ ನಿರ್ದೇಶಕರಿಗೆ ಬರಲು ಕಾರಣ, ಅವರು ಹತ್ತು ವರ್ಷಗಳ ಕಾಲ ಹಂಸಲೇಖ ಅವರ ಗರಡಿಯಲ್ಲಿದ್ದವರು. ಅಷ್ಟೇ ಅಲ್ಲ, ನಾಗತಿಹಳ್ಳಿ ಅವರ ಜೊತೆಗೆ ನಾಲ್ಕು ಚಿತ್ರಗಳು ಮತ್ತು ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದಾರೆ. ಹಂಸಲೇಖ ಅವರನ್ನು ಮೊದಲ ಗುರು ಎಂದು ಭಾವಿಸಿದ್ದ ವಸಂತ್‌ರಾಜ್, ಹಂಸಲೇಖ ಅವರೇ ಈ ಚಿತ್ರಕ್ಕೆ ಸಂಗೀತ ಕೊಡಬೇಕು ಅಂತ ನಿರ್ಧರಿಸಿ ಅವರಿಂದಲೇ ಆರು ಹಾಡುಗಳನ್ನು ಮಾಡಿಸಿಕೊಂಡಿದ್ದಾರಂತೆ.
ತಮ್ಮ ಮುಂದಿನ ಚಿತ್ರಗಳಿಗೂ ಹಂಸಲೇಖ ಅವರದೇ ಸಂಗೀತ ಇರಲಿದೆ ಎಂಬುದು ವಸಂತ್‌ರಾಜ್ ಮಾತು. ಅಂದಹಾಗೆ, ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ನಿರ್ದೇಶಕರದ್ದು. ಸೆಪ್ಟೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ತಯಾರಿಯಲ್ಲಿ ಚಿತ್ರತಂಡವಿದೆ.
ಚಿತ್ರಕ್ಕೆ ವಿ.ಜಿ.ಮಂಜುನಾಥ ನಿರ್ಮಾಪಕರು. ತೀರ್ಥಹಳ್ಳಿ, ಸೋಮವಾರಪೇಟೆ, ಮಡಿಕೇರಿ, ಕುಶಾಲನಗರ, ಮಡಿಕೇರಿ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ದೊಡ್ಡಣ್ಣ, ಬಿ.ವಿ. ರಾಧಾ, ಸುಚೇಂದ್ರಪ್ರಸಾದ್, ವಾಣಿಶ್ರೀ, ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಉಮೇಶ್, ಪ್ರಶಾಂತ್ ಸಿದ್ದಿ ಇತರರು ನಟಿಸಿದ್ದಾರೆ. ಚಿತ್ರಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣವಿದೆ. ಬಸವರಾಜ್ ಅರಸ್ ಅವರ ಸಂಕಲನವಿದೆ.
Pingback: playing cornhole