ರವಿಚಂದ್ರನ್ ಪುತ್ರ ಮನು ಅಭಿನಯದ “ಮುಗಿಲ್ ಪೇಟೆ” ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಚಿತ್ರ ನವೆಂಬರ್ 19 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಂಬಂಧಗಳಿಗೆ ಬೆಲೆ ಕೊಡುವ ಕುಟುಂಬ ಒಂದು ಕಡೆ ಆದರೆ, ಸಂಬಂಧಗಳನ್ನು ಕಡೆಗಾಣಿಸುವ ಕುಟುಂಬ ಮತ್ತೊಂದು ಕಡೆ. ಈ ಎರಡು ಕುಟುಂಬದ ಎರಡು ಜೀವಗಳ ನಡುವೆ ಪ್ರೀತಿ ಆದಾಗ ಏನಾಗುತ್ತದೆ ಎನ್ನುವ ಕಥೆಯನ್ನು “ಮುಗಿಲ್ ಪೇಟೆ” ಹೊಂದಿದೆ.
ಚಿತ್ರವನ್ನು ಬೆಂಗಳೂರು, ಚಿಕ್ಕಮಗಳೂರು, ಹಾಸನ, ಸಕಲೇಶಪುರ, ಕುಂದಾಪುರ, ತೀರ್ಥಹಳ್ಳಿ ಮುಂತಾದ ಕಡೆ ಶೂಟಿಂಗ್ ಮಾಡಲಾಗಿದೆ. ಚಿತ್ರ ಕೌಟುಂಬಿಕ ಸನ್ನಿವೇಶ, ಪ್ರೀತಿ, ಸಾಹಸ, ಹಾಸ್ಯ ಎಲ್ಲವನ್ನೂ ಒಳಗೊಂಡಿದೆ.
ಸಿನಿಮಾದಲ್ಲಿ ಸಾಧುಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಸಾಧುಕೋಕಿಲ ಅವರು ಒಂದೇ ಚಿತ್ರದಲ್ಲಿ 17 ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂದೊಂದು ದಾಖಲೆ ಆಗಿದೆ.
ಮುಗಿಲ್ಪೇಟೆಗೆ ಎಸ್. ಭರತ್ ನಿರ್ದೇಶನ ಇದೆ. ಚಿತ್ರಕ್ಕೆ ನಿರ್ಮಾಪಕಿ ರಕ್ಷ ವಿಜಯಕುಮಾರ್ ಬಂಡವಾಳ ಹೂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಂಗೀತ ಚಿತ್ರಕ್ಕಿದೆ.
ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಜನರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರವಿಚಂದ್ರನ್ ಪುತ್ರ ಈಗ ಯಾವ ಮ್ಯಾಜಿಕ್ ಮಾಡುತ್ತಾರೆ ಎನ್ನುವುದು ಚಿತ್ರ ಬಿಡುಗಡೆ ನಂತರ ತಿಳಿಯಲಿದೆ.
___

Be the first to comment