ಮಡ್ ರೇಸ್ ಕುರಿತ ಮಡ್ಡಿ ಚಿತ್ರ ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಡಿ.10ರಂದು ಬಿಡುಗಡೆ ಆಗಲಿದೆ.
ಅಂದಾಜು 25 ಕೋಟಿ ರೂ. ಬಜೆಟ್ನಲ್ಲಿ ತಯಾರಾಗಿರುವ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದೆ. ಇದು ಹಿಂದಿ ಮತ್ತು ಇಂಗ್ಲಿಷ್ಗೆ ಡಬ್ ಆಗಿದೆ. ನಿರ್ದೇಶಕ ಪ್ರಗ್ಬಲ್ ಅವರು ಈ ಚಿತ್ರಕ್ಕಾಗಿ 5 ವರ್ಷ ಸ್ಕ್ರಿಪ್ಟ್, ತಯಾರಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಡ್ಡಿ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಾಕಷ್ಟು ಸದ್ದು ಮಾಡುತ್ತಿದೆ. ಕಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ‘ಮಡ್ಡಿ’ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಯುವನ್ ಕೃಷ್ಣ ಮತ್ತು ರಿಧಾನ್ ಕೃಷ್ಣ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಇದ್ದಾರೆ.
ಬಾಹರ್ ಎಂಟರ್ಪ್ರೈಸಸ್ ಬಾಷಾ ಅವರು ಈ ಸಿನಿಮಾ ವಿತರಣೆ ಮಾಡುತ್ತಿದ್ದಾರೆ. ಚಿತ್ರದ ಟ್ರೈಲರ್ ನಲ್ಲಿ ಮೈ ಜುಂ ಎನಿಸುವ ಮಡ್ ರೇಸಿಂಗ್ ದೃಶ್ಯಗಳಿವೆ.
“ಇಂಥ ಸಿನಿಮಾದಲ್ಲಿ ಕೆಲಸ ಮಾಡಿದ್ದು ಒಳ್ಳೆಯ ಅನುಭವ. ಚಿತ್ರದಲ್ಲಿ ಹಿನ್ನೆಲೆ ಸಂಗೀತಕ್ಕೆ ಒಳ್ಳೆಯ ಮಹತ್ವ ಇದೆ. ಚಿತ್ರತಂಡದವರು ತೋರಿಸಿದ ದೃಶ್ಯಗಳನ್ನು ನೋಡಿದ ಬಳಿಕ ನಾನು ಸಂಗೀತ ನಿರ್ದೇಶನ ಮಾಡಲು ಒಪ್ಪಿಕೊಂಡೆ. ಹಲವು ರಾಜ್ಯಗಳ ಪ್ರತಿಭಾನ್ವಿತ ತಂತ್ರಜ್ಞರ ಸಮಾಗಮ ಈ ಚಿತ್ರದಲ್ಲಿ ಆಗಿದೆ “ಎಂದಿದ್ದಾರೆ ರವಿ ಬಸ್ರೂರು.
ಚಿತ್ರದಲ್ಲಿ ರಿಯಲ್ ಮಡ್ ರೇಸರ್ಗಳು ನಟಿಸಿದ್ದಾರೆ. ಉಳಿದ ಕಲಾವಿದರಿಗೆ 2 ವರ್ಷಗಳ ಕಾಲ ಮಡ್ ರೇಸ್ ತರಬೇತಿ ಕೊಡಿಸಿ ಚಿತ್ರೀಕರಣ ಮಾಡಲಾಗಿದೆ. ನಟರು ಡೂಪ್ ಬಳಸದೇ ಮಡ್ ರೇಸ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಒಂದು ಶಾಟ್ ಕೂಡ ಗ್ರಾಫಿಕ್ಸ್ ಮಾಡದೆ ಎಲ್ಲವನ್ನೂ ನೈಜವಾಗಿ ಚಿತ್ರೀಕರಿಸಲಾಗಿದೆ.
ಚಿತ್ರಕ್ಕೆ ರತೀಶ್ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ, ರನ್ ರವಿ ಅವರ ಸಾಹಸ ನಿರ್ದೇಶನ ಇದೆ. ಪ್ರೇಮಕೃಷ್ಣ ದಾಸ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕರ್ನಾಟಕದಲ್ಲಿ 75 ಚಿತ್ರಮಂದಿರ ಸೇರಿದಂತೆ ದೇಶಾದ್ಯಂತ ಅಂದಾಜು 400 ಚಿತ್ರಮಂದಿರಗಳಲ್ಲಿ ‘ಮಡ್ಡಿ’ ಸಿನಿಮಾ ಬಿಡುಗಡೆ ಆಗಲಿದೆ.
__
Be the first to comment