Mr.Bachelor Review : VIRGIN ಬ್ಯಾಚುಲರ್ ನ ವ್ಯರ್ಥ ಪ್ರಲಾಪ!

A weak ‘VERGINITY’ drama that fails to deliver the message

ಕ್ಲಾಸ್‌ರೂಮ್‌ನಲ್ಲಿ ಟೀಚರ್‌ ಮಕ್ಕಳನ್ನು ʻʻಭವಿಷ್ಯದಲ್ಲಿ ನೀವೇನಾಗುತ್ತೀರಿʼʼ ಎಂದು ಕೇಳಿದಾಗ, ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರವನ್ನು ಕೊಡಬಹುದು. ಆದರೆ, ʻಮಿ.ಬ್ಯಾಚುಲರ್‌ʼ ಚಿತ್ರದ ಕಥಾ ನಾಯಕ ಕಾರ್ತಿಕ್ (ಡಾರ್ಲಿಂಗ್ ಕೃಷ್ಣ) ʻʻಭವಿಷ್ಯದಲ್ಲಿ ಏನೂ ಸಾಧನೆ ಮಾಡದಿದ್ರೂ, ಮದುವೆ ಆಗಲೇಬೇಕುʼʼ ಎಂದು ಉತ್ತರಿಸುವ ʻವಿಷನ್‌ ಆಫ್‌ ಮ್ಯಾರೇಜ್‌ʼ ಆಸಾಮಿ! ಮದುವೆ ಎಂದರೆ ಹಬ್ಬ, ವಿವಾಹ ಆದಮೇಲೆ ಹಾಯಾಗಿ ಇರಬಹುದು ಎಂಬ ಆಲೋಚನೆ ಆತನದ್ದು. ಇದನ್ನು ನನಸು ಮಾಡಿಕೊಳ್ಳಬೇಕು ಎಂದು ಹೊರಡುವ ಈ ಬ್ಯಾಚುಲರ್ ಫಜೀತಿಗೆ ಸಿಲುಕುತ್ತಾನೆ. ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ನಾಯಕಿಯರ (ಮಿಲನಾ ನಾಗರಾಜ್, ನಿಮಿಕಾ ರತ್ನಾಕರ್) ಭೇಟಿ ಆಗುತ್ತದೆ. ಮುಂದೆ ಕಾರ್ತಿಕ್ ವರ್ಜಿನ್ ವಿಚಾರದಲ್ಲಿ ಸಿರೀಯಸ್‌ ಆಗೋದೇಕೆ? `ವರ್ಜಿನ್’ ಸಂಶೋಧನೆಯ ನಂತರ ಇಬ್ಬರು ನಾಯಕಿಯರಲ್ಲಿ ಅಂತಿಮವಾಗಿ ಕಾರ್ತಿಕ್ನ ʻಮ್ಯಾರೇಜ್‌ʼ ಕನಸು ನನಸು ಮಾಡೋರು ಯಾರು? ಈ ಮೂವರ ನಡುವೆ ವಿಲನ್‌ ಎಂಟ್ರಿ ಕೋಡೋದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಸಿನಿಮಾ ನೋಡಬೇಕು.

ಈ ಹಿಂದೆ, ಕೃಷ್ಣ ಅವರು ‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ -2’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡು ಒಂದು ಮಟ್ಟಕ್ಕೆ ಉತ್ತಮ ನಟ ಎಂದು ಕರೆಸಿಕೊಂಡಿದ್ದರು. ಆ ಸಿನಿಮಾಗಳಲ್ಲಿ ಲವ್, ಮದುವೆ ವಿಚಾರ ಪ್ರಮುಖವಾಗಿ ಹೈಲೈಟ್ ಆಗಿತ್ತು, ಇಲ್ಲೂ ಅದೇ ಕಂಟೆಂಟ್‌ ಮುಂದುವರಿದಿದ್ದು, ಕಥೆಯ ಟ್ರೀಟ್‌ಮೆಂಟ್‌ನಲ್ಲಿ ಸ್ವಲ್ಪ ವ್ಯತ್ಯಾಸವಿದೆ ಅಷ್ಟೆ. ಇಲ್ಲಿ ಡಾರ್ಲಿಂಗ್ ಕೃಷ್ಣ ಈ ಬಾರಿ ಮಾಸ್ ಅವತಾರ ಕಾಣಿಸಿಕೊಂಡಿದ್ದು, ಕಥೆಗೆ ಅಗತ್ಯ ಇಲ್ಲದೇ ಹೋದರು ʻಮಾಸ್‌ʼ ಎಂದು ಗುರುತಿಸಿಕೊಳ್ಳಲು ಸಖತ್ ಫೈಟ್ ಮಾಡಿದ್ದಾರೆ. ಪಸ್ಟ್‌ಹಾಫ್‌ನಲ್ಲಿ ʻಲಾಫಿಂಗ್‌ʼ ಬುದ್ಧನಂತಾಡುವ ಇವರು, ಸೆಕೆಂಡ್‌ ಹಾಫ್‌ನಲ್ಲಿ, ʻಜಂಪಿಂಗ್‌ʼ ಬುದ್ಧನಾಗುತ್ತಾರೆ!

ಡಾರ್ಲಿಂಗ್ ಕೃಷ್ಣ ಅವರ ಸಿನಿಮಾದಲ್ಲಿ ನಗು ಇರಲೇಬೇಕು ಎಂದು DIRECTOR ಡಿಸೈಡ್‌ ಮಾಡಿ, ನಗುಬಾರದ ಸೀನ್‌ಗಳನ್ನು ಅಲ್ಲಲ್ಲಿ ತುರುಕಿದ್ದಾರೆ. ಗಿರಿ, ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಸಖತ್ ನಗುವಿನ ಸುಳಿವಷ್ಟೇ ನೀಡಿ ಮರೆಯಾಗುತ್ತಾರೆ. ಸಾಧು ಕೋಕಿಲ ಅವರನ್ನು ಕೆಲವೇ ದೃಶ್ಯಗಳಿಗೆ ಸೀಮಿತಗೊಳಿಸಿರುವ DIRECTOR, ಅವರ ಡೇಟ್‌ ಉಳಿಸಿ PRODUCER ಕಾಸು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮಿಲನಾ ನಾಗರಾಜ್ಗಿಂತ, ನಿಮಿಕಾ ರತ್ನಾಕರ್ ಅವರು ತೆರೆಯ ಮೇಲೆ ಹೆಚ್ಚು ಕಾಣಿಸಿಕೊಂಡು ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಯಶ್ ಶೆಟ್ಟಿ ಅವರು ಕೆಲವೇ ನಿಮಿಷ ತೆರೆಮೇಲೆ ಬಂದು ಹೋಗುತ್ತಾರೆ. ಅಯ್ಯಪ್ಪ ಅವರು ವಿಲನ್ ಆಗಿ ಇನ್ನಷ್ಟು ನ್ಯಾಚುರಲ್‌ ಆಗಿ ಅಭಿನಯಿಸಬಹುದಿತ್ತು. ಪವಿತ್ರಾ ಲೋಕೇಶ್ ಅವರ ತಾಯಿ ಸೆಂಟಿಮೆಂಟ್ನ್  DIRECTOR ಸಿನಿಮಾದಲ್ಲಿ ʻಎಲ್ಲಾʼ ಇರಬೇಕು ಎಂದು ತುರುಕಿದಂತಿದೆ.

ʻಮಿಸ್ಟರ್‌ ಬ್ಯಾಚುಲರ್’ ಸಿನಿಮಾಗೆ ನಿರ್ದೇಶನ ಮಾಡಿರುವ ನಾಯ್ಡು ಬಂಡಾರು ಒಂದು ಸಾಮಾನ್ಯ ಕಥೆಯನ್ನು ʻಅಸಮಾನ್ಯʼವಾಗಿ ತೋರಿಸಲು ಹೋಗಿ ಅಲ್ಲಲ್ಲಿ ಮುಗ್ಗರಿಸಿದ್ದಾರೆ. ʻವರ್ಜಿನಿಟಿʼ ವಿಚಾರ ಪದೇಪದೇ ಪಾತ್ರಗಳ ಮೂಲಕ ಹೇಳಿಸಿ, ಫ್ಯಾಮಿಲಿ ಆಡಿಯನ್ಸ್ಗೆ ಮುಜುಗರ ತರಿಸುವ ನಾಯ್ಡು, ಚಿತ್ರಕ್ಕೆ ʻ Virgin ಬ್ಯಾಚುಲರ್‌ʼ ಎಂದು ಟೈಟಲ್‌ ಇಡಬಹುದಿತ್ತು. ಚಿತ್ರದ ಹಾಡುಗಳು ಸಿನಿಮಾವನ್ನು ನೋಡುಗನಿಗೆ ಕನೆಕ್ಟ್‌ ಮಾಡುವಲ್ಲಿ ಸೋಲುತ್ತದೆ. ಮಾಸ್‌ ಫೈಟ್ ನೋಡಿ ನಾಯಕನ ಮೇಲೆ ಕ್ಲಾಸ್‌ ನಾಯಕಿಗೆ ಲವ್ ಆಗೋದು, ಓಪನ್ ಸೀನ್ನಲ್ಲಿ ನಾಯಕ ಬಾರ್ಗೆ ಬಂದು ಕೂತು ಕಂಟಪೂರ್ತಿ ಕುಡಿದು ʻಓವರ್‌ ಆಕ್ಟಿಂಗ್‌ʼ ಮಾಡೋದು.. ಹೀಗೆ ಓಬಿರಾಯನ ಕಾಲದ ದೃಶ್ಯಗಳು ಚಿತ್ರದಲ್ಲಿವೆ. ಕಥೆ ಹಾಗೂ ನಿರೂಪಣೆ ವಿಚಾರದಲ್ಲಿ ನಿರ್ದೇಶಕರು ಸಾಕಷ್ಟು HOME WORK ಮಾಡಬೇಕಿತ್ತು.

ಒಟ್ಟಿನಲ್ಲಿ, ಜಗತ್ತು ತಿರುಗಿ ನೋಡುವಂತಹ ಚಿತ್ರಗಳನ್ನು ಕನ್ನಡ ಚಿತ್ರರಂಗ ನೀಡುತ್ತಿರುವಾಗ, ನಾಯ್ಡು ಅಂತಹ DIRECTORS ಅಪ್‌ಡೇಟ್‌ ಆಗಬೇಕಿದೆ. ಜೊತೆಗೆ, ಪ್ರೆಕ್ಷಕನಿಗೆ ಹತ್ತಿರಚಾಗಬಲ್ಲ ಕಂಟೆಂಟ್‌ನ ಚಿತ್ರಗಳ ಆಯ್ಕೆಯಲ್ಲಿ PRODUCERS ಕೂಡ ಎಚ್ಚರದಿಂದಿರಬೇಕಾಗಿದೆ. ʻಮಿಸ್ಟರ್‌ ಬ್ಯಾಚುಲರ್‌ʼ ನೋಡದವರು ಈಗಲೇ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಇದ್ದರೆ ನೋಡಿ, ಮೋಸ್ಟ್ಲೀ ಇರೋದೇ ಡೌಟ್‌!

Be the first to comment

Leave a Reply

Your email address will not be published. Required fields are marked *

Translate »
error: Content is protected !!