ರಾಜ್ಯದಲ್ಲಿ ಕರೋನ ಅಟ್ಟಹಾಸ ಮುಂದುವರೆದಿದ್ದು ರಾಜ್ಯ ಸರಕಾರ ಪೂರ್ಣ ಸೀಟುಗಳ ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದೆ ಇರುವ ಹಿನ್ನೆಲೆಯಲ್ಲಿ ದೊಡ್ಡ ನಟರ ಚಿತ್ರ ಬಿಡುಗಡೆಗೆ ತೊಡಕಾಗಿದೆ.
ಆಗಸ್ಟ್ ತಿಂಗಳಲ್ಲಿ ರಾಜ್ಯ ಸರಕಾರ ಶೇ. 100 ಸೀಟುಗಳ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವ ನಿರೀಕ್ಷೆಯನ್ನು ಚಿತ್ರರಂಗ ಹೊಂದಿತ್ತು. ಆದರೆ ರಾಜ್ಯದಲ್ಲಿ ಸೋಂಕು ಹೆಚ್ಚುತ್ತಿರುವ ಕಾರಣ ಇದುವರೆಗೆ ಶೇ. 50 ಸೀಟು ಸಾಮರ್ಥ್ಯದಲ್ಲಿ ಚಿತ್ರ ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸ್ಟಾರ್ ನಟರ ಚಿತ್ರಗಳು ಥಿಯೇಟರ್ ನಲ್ಲಿ ಬಿಡುಗಡೆಯಾಗಲು ಹಿಂದೇಟು ಹಾಕುತ್ತಿವೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ನೇತೃತ್ವದ ನಿಯೋಗ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಶೇ. 100 ಸೀಟು ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ.
ಆದರೆ ಸಿಎಂ ಬೊಮ್ಮಾಯಿ ಅವರು, ” ತಜ್ಞರ ವರದಿ ಬಂದ ಬಳಿಕ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದಿದ್ದು ದೊಡ್ಡ ನಟರ ಚಿತ್ರಗಳ ಬಿಡುಗಡೆಗೆ ಹಿನ್ನಡೆ ಉಂಟಾಗಿದೆ.
ದುನಿಯಾ ವಿಜಯ್ ನಟನೆಯ ಸಲಗ’ ಮತ್ತು ಕೆಜಿ ಸ್ವಾಮಿ ನಿರ್ಮಾಣದ, ಡಿಜೆ ರವಿ ನಿರ್ದೇಶನದ, ‘ಗ್ರೂಫಿ’ ಚಿತ್ರಗಳೂ ಆಗಸ್ಟ್ 20ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಆದರೆ ಶೇಕಡ ನೂರರಷ್ಟು ಸೀಟು ಸಾಮರ್ಥ್ಯಕ್ಕೆ ಸರಕಾರ ಅವಕಾಶ ಮಾಡಿಕೊಡದೆ ಹೋದರೆ ಈ ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆ ಆಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇದೇ ದಿನ ಡಾ. ರಾಜಕುಮಾರ್ ಮೊಮ್ಮಗಳು ನಟಿಸಿರುವ ‘ ನಿನ್ನ ಸನಿಹಕೆ ‘ ಚಿತ್ರ ಬಿಡುಗಡೆ ಆಗಲಿದೆ ಎಂದು ಘೋಷಣೆ ಮಾಡಲಾಗಿದೆ. ಸದ್ಯದ ಸ್ಥಿತಿಯಲ್ಲಿ ಈ ಚಿತ್ರ ಶೇ.50 ಸೀಟು ಸಾಮರ್ಥ್ಯದೊಂದಿಗೆ ರಿಲೀಸ್ ಆಗುವ ಬಗ್ಗೆ ಸಂದೇಹ ಮೂಡಿದೆ.
ಸೆ.10ರಂದು ಶಿವಣ್ಣ ನಟನೆಯ ಭಜರಂಗಿ 2 ಸಿನಿಮಾ ರಿಲೀಸ್ ಆಗಲಿದೆ. ಉಳಿದಂತೆ ದೊಡ್ಡ ಸ್ಟಾರ್ ನಟರ ಚಿತ್ರಗಳ ರಿಲೀಸ್ ಡೇಟ್, ಸರ್ಕಾರ ಶೇ.100 ಸೀಟು ಪ್ರದರ್ಶನಕ್ಕೆ ಅವಕಾಶ ನೀಡದ ಕಾರಣ ಇನ್ನೂ ಘೋಷಣೆ ಆಗಿಲ್ಲ.
ಆದಷ್ಟು ಬೇಗ ಸರಕಾರ ಶೇ.100 ಸೀಟು ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಸರಕಾರ ಅವಕಾಶ ನೀಡಬೇಕು ಎಂದು ಚಿತ್ರರಂಗದ ಗಣ್ಯರು ಮನವಿ ಮಾಡಿದ್ದಾರೆ.
_______
Be the first to comment