ಇಂದು ಕನ್ನಡದಲ್ಲಿ ಏಳು ಸಿನಿಮಾಗಳು ಬಿಡುಗಡೆಯಾಗಿವೆ. ‘ಒಂದು ಸರಳ ಪ್ರೇಮ ಕಥೆ’, ‘ಜೂನಿ’ , ‘ಜಸ್ಟ್ ಪಾಸ್’ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ.
‘ಒಂದು ಸರಳ ಪ್ರೇಮಕಥೆ’ : ವಿನಯ್ ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ತೆರೆಕಂಡಿದೆ. ಮ್ಯೂಸಿಕಲ್ ಲವ್‌ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಈ ಚಿತ್ರದ ಮೂಲಕ ತಮಿಳಿನ ಹಿಟ್ ಸಿನಿಮಾ ‘ವಿಕ್ರಮ್’ನಲ್ಲಿ ನಟಿಸಿದ್ದ ಸ್ವತಿಷ್ಠ ಕೃಷ್ಣನ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ಚಿತ್ರಕ್ಕೆ ಸಿಂಪಲ್ ಸುನಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ, ಪ್ರಸನ್ನ ಕಥೆ ಬರೆದಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಜೂನಿ: ಪೃಥ್ವಿ ಅಂಬಾರ್ ಹಾಗೂ ರಿಷಿಕಾ ನಟಿಸಿರುವ ‘ಜೂನಿ’ ವಿಭಿನ್ನ ಕಥಾಹಂದರದಿಂದ ವೀಕ್ಷಕರ ಗಮನ ಸೆಳೆದಿದೆ. ವೈಭವ್ ಮಹಾದೇವ್ ಆಕ್ಷನ್ ಕಟ್ ಹೇಳಿದ್ದಾರೆ. ಡಿಸೋಸಿಯೇಟಿವ್ ಐಡೆಂಟಿಟಿ ಕಾಯಿಲೆಯಿಂದ ಬಳಲುತ್ತಿರುವ ನಾಯಕಿ ಸುತ್ತ ಚಿತ್ರದ ಕಥೆಯಿದೆ. ‘ಜನ್ನಿ’ ಕಿರುಚಿತ್ರ ನಿರ್ದೇಶನ ಮಾಡಿದ್ದ, ವೈಭವ್‌ಗೆ ಇದು ಚೊಚ್ಚಲ ಸಿನಿಮಾ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಜಸ್ಟ್ ಪಾಸ್: ಕೆ.ಎಂ.ರಘು ನಿರ್ದೇಶನದ ಸಿನಿಮಾ ಇದು. ಜಸ್ಟ್ ಪಾಸ್ ಆದ ವಿದ್ಯಾರ್ಥಿಗಳಿಗೆಂದೇ ತೆರೆದಿರುವ ಕಾಲೇಜೊಂದರ ಸುತ್ತ ಚಿತ್ರದ ಕಥೆಯಿದೆ. ನಟ ರಂಗಾಯಣ ರಘು ಚಿತ್ರದಲ್ಲಿ ಪ್ರಾಂಶುಪಾಲರ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಶ್ರೀ ಚಿತ್ರದ ನಾಯಕ. ಪ್ರಣತಿ ನಾಯಕಿ. ಸಾಧುಕೋಕಿಲ, ಪ್ರಕಾಶ್ ತುಮಿನಾಡು, ದೀಪಕ್ ರೈ, ದಾನಪ್ಪ, ಗೋವಿಂದೇ ಗೌಡ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ.
ನಗುವಿನ ಹೂಗಳ ಮೇಲೆ: ‘ಕೆಂಪಿರ್ವೆ’ ಸಿನಿಮಾ ಖ್ಯಾತಿಯ ವೆಂಕಟ್ ಭಾರದ್ವಾಜ್ ನಿರ್ದೇಶನ, ಅಭಿದಾಸ್ ಮತ್ತು ಶರಣ್ಯ ಶೆಟ್ಟಿ ಜೋಡಿಯಾಗಿ ನಟಿಸಿರುವ ಸಿನಿಮಾ ಇದು. ಶ್ರೀ ಸತ್ಯಸಾಯಿ ಆರ್ಟ್ಸ್ ಲಾಂಛನದಲ್ಲಿ ಕೆ.ಕೆ ರಾಧಾಮೋಹನ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ, ಪ್ರಮೋದ್ ಭಾರತೀಯ ಛಾಯಾಗ್ರಹಣ, ಚಂದನ್ ಪಿ. ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ, ಲರ್ವಿನ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಇ-ಮೇಲ್: ಮಹಿಳಾ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಎಸ್. ಆರ್. ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿದೆ. ಆನ್‌ಲೈನ್ ಆಟಗಳಿಂದ ಆಗುವ ಪರಿಣಾಮಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ. ಮುರುಗ ಅಶೋಕ್ ನಾಯಕನಾಗಿದ್ದಾರೆ.
‘ಪ್ರಣಯಂ’: ‘ಬಿಚ್ಚುಗತ್ತಿ’ ಖ್ಯಾತಿಯ ರಾಜವರ್ಧನ್, ನೈನಾ ಗಂಗೂಲಿ ನಟಿಸಿರುವ ಈ ಸಿನಿಮಾ ಮಾಸ್ ಪ್ರೇಮಕಥೆ ಜಾನರ್‌ನಲ್ಲಿದೆ. ಪರಮೇಶ್ ಅವರ ಬ್ಯಾನರ್‌ನಲ್ಲಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಜಯಂತ ಕಾಯ್ಕಿಣಿ ಮೂರು ಪ್ರೇಮಗೀತೆಗಳನ್ನು ಬರೆದಿದ್ದು, ಮನೋಮೂರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ.
ಮಾಯೆ ಅಂಡ್ ಕಂಪನಿ: ಸಾಮಾಜಿಕ ಮಾಧ್ಯಮಗಳು ತಂದೊಡ್ಡುವ ಅನಾಹುತ, ಸೈಬರ್ ಅಪರಾಧಗಳ ಕುರಿತು ಸಿನಿಮಾದಲ್ಲಿ ನಿರ್ದೇಶಕ ಸಂದೀಪ್ ಕುಮಾರ್ ಕಥೆ ಹೇಳಿದ್ದಾರೆ. ಎಂ.ಎನ್. ರವೀಂದ್ರರಾವ್ ಮಾತೃಶ್ರೀ ವಿಷನ್ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದರಿಂದ ಏನೆಲ್ಲ ಅನಾಹುತ ಆಗುತ್ತದೆ ಎಂಬ ವಿಷಯವನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ತಾರಾಗಣದಲ್ಲಿ ಅರ್ಜುನ್ ಕಿಶೋರ್‌ಚಂದ್ರ, ಅನುಷಾ, ಯಶಶ್ರೀ, ಯಾಸೀನ್ ಮುಂತಾದವರು ಇದ್ದಾರೆ.
—–
Be the first to comment