ಚಿತ್ರ : ತನಿಖೆ
ನಿರ್ದೇಶಕ : ಜಿ.ಎಸ್. ಕಲಿಗೌಡ
ನಿರ್ಮಾಪಕರು : ಜಿ.ಎಸ್. ಕಲಿಗೌಡ , ಆರ್. ಡಿ. ಅನಿಲ್ , ಮಚ್ಚು ಮುನಿರಾಜು.
ಸಂಗೀತ : ಕ್ರಿಸ್ಟೋಫರ್ ಛಾಯಾಗ್ರಹಣ : ಶ್ಯಾಮ್ ಸಿಂಧನೂರು.
ತಾರಾಗಣ : ಆರ್.ಡಿ. ಅನಿಲ್, ಚಂದನ , ಸಂತೋಷ್ ವಿಜಯ ಕುಮಾರ್,ಮಚ್ಚು ಮುನಿರಾಜು, ಗುಲ್‌ಷನ್, ನಿಖಿತ್, ರವಿ, ಕಲ್ಕೆರೆ ಗಂಗಾಧರ್, ಗೋಪಿ ಹಾಗೂ ಮುಂತಾದವರು…
ಬಿಸಿನಿಮಾಸ್ ರೇಟಿಂಗ್ 4/5
ಕೊರೋನಾ ಹಾವಳಿ ಕಡಿಮೆ ಆಗುತ್ತಿದ್ದಂತೆ ಪ್ರೇಕ್ಷಕರ ಮುಂದೆ ಚಿತ್ರಗಳು ಬರಲು ಆರಂಭಿಸಿದೆ. ಈ ಸಾಲಿಗೆ ಸೇರುವ ಚಿತ್ರ ‘ತನಿಖೆ’. ತನಿಖೆ ಟೈಟಲ್ ಕೇಳಿದ ತಕ್ಷಣ ನಿಮಗೆ, ೧೯೯೪ರಲ್ಲಿ ರಿಲೀಸ್ ಆದ ಗುಲ್ಜಾರ್ ಖಾನ್, ಸುಜಾತಾ ಮತ್ತು ದಿಸ್ಕೋಶಾಂತಿ ಅಭಿನಯದ ಚಿತ್ರ ನೆನಪಾಗಬಹುದು. ಆದರೆ, ನಾವು ಹೇಳಲು ಹೊರಟಿರೋದು ೨೦೨೦ರ ಲೇಟೆಸ್ಟ್ ‘ತನಿಖೆ’. ಆ ಅಂದಿನ ತನಿಖೆಗೂ ಇಂದಿನ ಈ ಹೊಸಬರ ‘ತನಿಖೆ’ಗೂ ಯಾವುದೇ ಸಾಮ್ಯತೆಯಿಲ್ಲ. ಹಳ್ಳಿ ಸೊಗಡಿನ ಕಥಾನಕದಲ್ಲಿ , ಪ್ರೇಮ ಕಾವ್ಯದ ನಡುವೆಯೇ ಕೊಲೆಯ ರಹಸ್ಯವನ್ನು ಬೇಧಿಸುವ ವಿನೂತನ ಚಿತ್ರ “ತನಿಖೆ” ಈ ವಾರ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ “ತನಿಖೆ” ಆರಂಭದಿಂದಲೂ ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ.
ಚಿತ್ರದ ಕಥಾಹಂದರದ ಪ್ರಕಾರ ಹಳ್ಳಿ ಸೊಬಗಿನ ನಡುವೆ ಯುವ ಪಡೆ ಗೆಳೆಯರ ಬಳಗ ಲೀಲಾಜಾಲವಾಗಿ ಊರ್ ತುಂಬಾ ಓಡಾಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಸಮಸ್ಯೆ ಎಂದು ಬಂದ ಹಳ್ಳಿ ಜನರಿಗೆ ಸ್ಪಂದಿಸುವ ಕಾಯಕದಲ್ಲಿಯೂ ನಿರತನಾಗಿರುತ್ತಾರೆ. ಇದರ ನಡುವೆ ಅಚಾನಕ್ಕಾಗಿ ಪೋಲಿಸರಿಗೆ ಬರುವ ಒಂದು ಫೋನ್, ಕೆರೆಯ ದಡದಲ್ಲಿ ಮೂಟೆ ಕಟ್ಟಿರುವ ವ್ಯಕ್ತಿಯ ಕೊಲೆಯ ಸತ್ಯಾಂಶವನ್ನು ಹುಡುಕಲು ಹೊರಡುತ್ತದೆ ಯುವಕರ ತಂಡ. ಇದರ ಬೆನ್ನಲ್ಲೇ ೬ಜನ ಸ್ನೇಹಿತರು ಕೂಡ ನಾಪತ್ತೆ ಯಾಗಿರುತ್ತಾರೆ. ಕೊಲೆಗೆ ನಿಖರವಾದ ಕಾರಣ ಹುಡುಕುವ ಹಾದಿಯಲ್ಲಿರುವ ಪೊಲೀಸ್ ಅಧಿಕಾರಿಗೆ ಸ್ಕೆಚ್ ಹಾಕುವ ೬ ಮಂದಿ ಗೆಳೆಯರು. ಆದರೆ ಅವರ ಕೆಲಸ ಕೈಗೂಡದೆ ಪೋಲೀಸರ ಅತಿಥಿ ಆಗುವರು. ಇಲ್ಲಿಂದ ಟೇಕ್‌ಆಫ್ ಆಗುವ ಚಿತ್ರ ಕೊನೆಯವರೆಗೂ ಇಂಟ್ರೆಸ್ಟಿಂಗ್ ಆಗಿ ಸಾಗುತ್ತದೆ.
ಖಡಕ್ ಪೊಲೀಸ್ ಅಧಿಕಾರಿಯ ಸ್ಪೆಷಲ್ ಟ್ರೀಟ್ಮೆಂಟ್ ನಡುವೆ ಚಿತ್ರದ ಫ್ಲ್ಯಾಷ್ ಬ್ಯಾಕ್ ಕಥೆ ತೆರೆಯುತ್ತಾ ಸಾಗುತ್ತದೆ. ಇದರಲ್ಲಿ ಪ್ರೇಮ ಕಾವ್ಯದ ಕಂಪು ಹಳ್ಳಿ ಸೊಗಡಿನ ಮೂಲಕ ನೋಡುಗನನ್ನು ಸೆಳೆಯುತ್ತದೆ. ಈ ೬ ಜನ ಗೆಳೆಯರು ಹಾಗೂ ಒಬ್ಬ ನಾಯಕಿ ಇದ್ದು , ಇದರಲ್ಲಿ ತ್ರಿಕೋನ ಪ್ರೇಮಕಥೆಯ ಸಾರಾಂಶವು ಎದ್ದು ಕಾಣುತ್ತದೆ.
ಪ್ರೀತಿ ಕುರುಡು ಅನ್ನೋ ಮಾತಿದೆ. ಏನೇ ಇದ್ದರೂ ಪ್ರೀತಿ ವಿಚಾರವೆಂದರೆ ಸ್ನೇಹಿತರು ಕೂಡ ದ್ವೇಷಿಗಳಾಗುತ್ತಾರೆ. ಈ ತ್ರಿಕೋನ ಪ್ರೇಮಕತೆಗೆ ಗೆಳೆಯರ ಮಧ್ಯಸ್ಥಿಕೆ ಇದ್ದರೂ ಸಹ ಯಾವುದೇ ಪ್ರಯೋಜನವಾಗದೆ ಕೊಲೆಯೊಂದಕ್ಕೆ ದಾರಿಯಾಗುತ್ತದೆ. ಹೀಗೆ ಪ್ರತಿ ಹಂತದಲ್ಲೂ ಸಾಗುವ ಕತೆಯ ಹಾದಿಯಲ್ಲಿ ಫ್ಲ್ಯಾಶ್ ಬ್ಯಾಕ್ ಗಳು ಬಂದು ಚಿತ್ರದ ಒಂದಷ್ಟು ಸೂಕ್ಷ್ಮ ವಿಚಾರವನ್ನು ತೆರೆದಿಡುತ್ತಾ ಹೋಗುತ್ತದೆ.
ಇನ್ನು ಚಿತ್ರದ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವಷ್ಟರಲ್ಲಿ ತನಿಖೆ ಯಾವ ಹಾದಿಯನ್ನು ಮುಟ್ಟಿರುತ್ತದೆ ಎಂಬುವುದೇ ಚಿತ್ರದ ಜೀವಾಳ. ನಿಜವಾಗಿಯೂ ಯಾರ ಕೊಲೆ ನಡೆದಿತ್ತು…? ಇದಕ್ಕೆ ಕಾರಣ ಏನು…? ತ್ರಿಕೋನ ಪ್ರೀತಿಯಲ್ಲಿ ಗೆದ್ದವರು ಯಾರು…? ಕೊಲೆಯ ಹಿಂದಿನ ರಹಸ್ಯವೇನು…? ಈ ಎಲ್ಲಾ ಅಂಶವನ್ನು ತಿಳಿಯಬೇಕಾದರೆ ನೀವು “ತನಿಖೆ” ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಬೇಕು, ಆಗ ನಿಮಗೆ ಸತ್ಯಾಂಶ ತಿಳಿಯಲಿದೆ.
ಇನ್ನೂ ಚಿತ್ರದಲ್ಲಿ ಸನ್ಯಾಸಿ ಪಾತ್ರಧಾರಿಯಾಗಿ ಗಡಿಯಾರ ಚಿತ್ರದ ನಿರ್ದೇಶಕರಾದ ಪ್ರಭೀಕ್ ಮೋಗವೀರ್ ಅವರು ತಮ್ಮ ಪಾತ್ರವನ್ನು ನಿಭಾಯಿಸುವ ಮೂಲಕ, ತಾನೊಬ್ಬ ಸಮರ್ಥ ನಟ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.
ತಮ್ಮ ಪ್ರಥಮ ಪ್ರಯತ್ನದಲ್ಲೇ ನಿರ್ದೇಶಕ ಜಿ.ಎಸ್. ಕಲಿಗೌಡ ಹಳ್ಳಿ ಪರಿಸರದ ಸೊಬಗನ್ನು ತೆರೆಮೇಲೆ ತರುವ ಜೊತೆಗೆ ಒಂದು ಕೊಲೆಯ ಮೂಲಕ ಯುವಜನಾಂಗದ ಸೂಕ್ಷ್ಮ ಮನಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಇದರೊಟ್ಟಿಗೆ ಪ್ರೇಮದ ಸಿಂಚನವನ್ನು ತುಂಬಿದ್ದಾರೆ. ಚಿತ್ರದಲ್ಲಿ ಕನಕಪುರ ಸಮೀಪದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಇಟ್ಟುಕೊಂಡು ಈ ಚಿತ್ರದ ಎಳೆಯನ್ನು ಸಿದ್ಧಪಡಿಸಿದ್ದಾರಂತೆ. ಗೆಳೆತನ, ಸಂಬಂಧ, ಪ್ರೀತಿಯ ಜೊತೆಗೆ ಇತ್ತೀಚೆಗೆ ದೊಡ್ಡ ಜಾಲವಾಗಿ ಹಬ್ಬಿರುವ ಡ್ರಗ್ಸ್ ಕುರಿತಾಗಿ ಕೂಡ ಬೆಳಕು ಚೆಲ್ಲಿರುವುದು ಗಮನಾರ್ಹವಾಗಿದೆ.
ನಾಗರಿಕ ಸಮಾಜದಲ್ಲಿ ಜಾಗೃತಿ ವಹಿಸಬೇಕಾದ ವ್ಯಕ್ತಿಗಳು ಸುಮ್ಮನಾದರೆ…. ಅದಕ್ಕೆ ಪರ್ಯಾಯ ವ್ಯಕ್ತಿಯು ಹುಟ್ಟಬಹುದು ಎಚ್ಚರದಿಂದಿರಿ ಎಂಬ ಸಂದೇಶವನ್ನು ಕೂಡ ಹೇಳ ಹೊರಟಿದ್ದಾರೆ. ಚಿತ್ರದ ಓಟದಲ್ಲಿ ಮತ್ತಷ್ಟು ಬಿಗಿಯಾಗಿದ್ದರೆ ನೋಡುಗರ ಗಮನ ಇನ್ನೂ ಹೆಚ್ಚು ಆಕರ್ಷಿಸಬಹುದಿತ್ತು. ಮೊದಲ ಚಿತ್ರದಲ್ಲೇ ಉತ್ತಮ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಭರವಸೆಯ ನಿರ್ದೇಶಕರಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ.
Be the first to comment