ಚಿತ್ರ: ರಾಜ ತಂತ್ರ
ತಾರಾಗಣ: ರಾಘವೇಂದ್ರ ರಾಜ್ ಕುಮಾರ್
ನಿರ್ದೇಶನ: ಪಿವಿಆರ್ ಸ್ವಾಮಿ
ನಿರ್ಮಾಣ: ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ. ಲಿಮಿಟೆಡ್
ಬಿಸಿನಿಮಾಸ್ ರೇಟಿಂಗ್ : 4/5
ವಿಮರ್ಶೆ :
ರಾಜತಂತ್ರ ಎನ್ನುವ ಹೆಸರೇ ಸೂಚಿಸುವಂತೆ ಇದು ರಾಜಕೀಯದೊಳಗಿನ ತಂತ್ರ. ಈ ತಂತ್ರದ ಸೂತ್ರಧಾರ ರಾಜಾರಾಮ್. ಹೌದು, ರಾಘವೇಂದ್ರ ರಾಜ್ ಕುಮಾರ್ ಅವರು ನಿವೃತ್ತ ಸೇನಾ ಕ್ಯಾಪ್ಟನ್ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅದೇ ಕಾರಣದಿಂದ ಕುತೂಹಲ ಹೆಚ್ಚಿಸಿದೆ ಎನ್ನಬಹುದು. ಚಿತ್ರದಲ್ಲಿ ರಾಜಾರಾಮ್ ಎನ್ನುವ ಪಾತ್ರಕ್ಕೆ ಒಂದು ಉತ್ತಮ ತೂಕ ಇದೆ ಎನ್ನುವುದರ ಜೊತೆಗೆ ಇಂದಿನ ಸಮಸ್ಯೆಗಳಾದ ಡ್ರಗ್ಸ್ ಮತ್ತಿತರ ಮಾದಕ ವಸ್ತುಗಳ ಮಾರಾಟದ ವಿರುದ್ಧ ನಾಯಕ ಸಂದೇಶಾತ್ಮಕ ಹೋರಾಟವನ್ನು ಕೂಡ ತಿಳಿಸುವಂಥ ಚಿತ್ರ ಇದು.
ಸೈನ್ಯದಿಂದ ನಿವೃತ್ತಿಯಾಗುವ ವೇಳೆ ರಾಜಾರಾಮ್‌ಗೆ ವಯಸ್ಸಾಗಿರುತ್ತದೆ. ದೇಹಕ್ಕೆ ಏಟಾಗಿರುತ್ತದೆ. ಆದರೆ ಹೋರಾಟದ ಮನೋಭಾವದಲ್ಲಿ ಯಾವುದೇ ಬದಲಾವಣೆಯಾಗಿರುವುದಿಲ್ಲ. ದೇಶದ ಒಳಗಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆದಿರುತ್ತದೆ. ಅಂಥ ಪ್ರಯತ್ನದಲ್ಲಿ ಆತನಿಗೆ ತೀರ ಆತ್ಮೀಯರಾಗಿರುವವರೇ ಒಂದು ಡ್ರಗ್ಸ್ ದಂಧೆಯಲ್ಲಿ ಸೇರಿಕೊಂಡಿರುವ ಸತ್ಯ ಹೊರಬರುತ್ತದೆ. ಇದು ಪೊಲೀಸರಿಗೂ ತಿಳಿಯುತ್ತದೆ. ಪೊಲೀಸ್ ಮತ್ತು ರಾಜಕೀಯ ವ್ಯವಸ್ಥೆಯ ನಡುವೆ ನಾಯಕನ ಹೋರಾಟ ಹೇಗೆ ನಡೆಯುತ್ತದೆ ಎನ್ನುವುದನ್ನು ತಿಳಿಸುವಂಥ ರೋಚಕ ಕಥಾನಕ ಇದು.
ಸಿನಿಮಾದಲ್ಲಿ ರಾಜಾರಾಮ್ ಪಾತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಸ್ವತಃ ಜೀವಿಸಿದ್ದಾರೆ ಎಂದೇ ಹೇಳಬಹುದು. ಹಾಗೆ ಕಾಣಿಸಲು ರಾಘಣ್ಣನಿಗೆ ಹೊಂದಿಕೊಳ್ಳುವಂತೆ ಕತೆ ಬರೆದಿರುವ ಮಲ್ಲಿಕಾರ್ಜುನ್ ಅವರ ಪ್ರತಿಭೆಯನ್ನು ಮೆಚ್ಚಲೇಬೇಕು. `ಅಮ್ಮನ ಮನೆ’ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸಿಕ್ಕಂಥ ಅಪರೂಪದ ಪಾತ್ರ ಇದು. ಮಲ್ಲಿಕಾರ್ಜುನ್ ಅವರು ಕತೆ ಮಾತ್ರವಲ್ಲ, ಚಿತ್ರಕತೆ, ಸಂಭಾಷಣೆಯಲ್ಲಿಯೂ ತಮ್ಮ ಮ್ಯಾಜಿಕ್ ಮಾಡಿದ್ದಾರೆ. ರಾಜಾರಾಮ್ ಮನೆಯಲ್ಲಿ ಕೆಲಸ ಮಹಿಳೆಯಾಗಿ ಭವ್ಯಾ ಅವರು ನಟಿಸಿದ್ದಾರೆ. ಮನೆಕೆಲಸದಾಕೆಯ ಪಾತ್ರವನ್ನು ಭವ್ಯಾ ಅವರು ಒಪ್ಪಿಕೊಂಡಿದ್ದೇಕೆ ಎನ್ನುವುದಕ್ಕೆ ಚಿತ್ರದಲ್ಲೇ ಉತ್ತರ ಇದೆ. ಭವ್ಯಾ ಅವರು ತಮಗೆ ದೊರಕಿರುವ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಗೃಹಮಂತ್ರಿಯಾಗಿ ನಟಿಸಿರುವ ದೊಡ್ಡಣ್ಣ ಹಾಸ್ಯದ ಜೊತೆಗೆ ತಮ್ಮ ಹಿಂದಿನ ಖಳ ಪಾತ್ರಧಾರಿಯ ಚಾರ್ಮಿಂಗ್ ಕೂಡ ಉಳಿಸಿಕೊಂಡಿದ್ದಾರೆ. ಶಂಕರ್ ಅಶ್ವಥ್, ನೀನಾಸಂ ಅಶ್ವಥ್ ಮೊದಲಾದವರು ಉಳಿದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮುಖ್ಯಮಂತ್ರಿಯ ಪಾತ್ರದಲ್ಲಿ ಶ್ರೀನಿವಾಸ ಮೂರ್ತಿ ಕೂಡ ಎಂದಿನಂತೆ ಗಮನಾರ್ಹವಾದ ನಟನೆ ನೀಡಿದ್ದಾರೆ.
ಚಿತ್ರದಲ್ಲಿ ಮೈಂಡ್ ಗೇಮ್ ಮಾತ್ರವಲ್ಲ, ಆಕ್ಷನ್ ದೃಶ್ಯಗಳಿಗೂ ಸಾಕಷ್ಟು ಅವಕಾಶ ಇದೆ. ಖುದ್ದು ರಾಘವೇಂದ್ರ ರಾಜ್ ಕುಮಾರ್ ಅವರು ಕೂಡ ಹೊಡೆದಾಟದಲ್ಲಿ ಭಾಗಿಯಾಗಿರುವುದು ವಿಶೇಷ. ಅಮ್ಮನ ಮನೆ ಚಿತ್ರದ ಛಾಯಾಗ್ರಾಹಕ ಪಿವಿಆರ್ ಸ್ವಾಮಿಯವರು ತಮ್ಮ ಚೊಚ್ಚಲ ನಿರ್ದೇಶನದಲ್ಲೇ ತಾವು ನಿರ್ದೇಶಕರಾಗಿಯೂ ಗುರುತಿಸಿಕೊಳ್ಳಬಲ್ಲ ವ್ಯಕ್ತಿ ಎಂದು ತೋರಿಸಿಕೊಟ್ಟಿದ್ದಾರೆ. ಚಿತ್ರದಲ್ಲಿ ಪೊಲೀಸ್ ಪಾತ್ರದ ಆಗಮನದ ವೇಳೆ ಪ್ರತಿ ಬಾರಿಯೂ ನೀಡಲಾದ ಸಂಗೀತ ಆಕರ್ಷಕವೆನಿಸುತ್ತದೆ. ಒಂದೊಳ್ಳೆಯ ಸಂದೇಶ ಹೊಂದಿರುವ ರಾಜತಂತ್ರ ಖಂಡಿತವಾಗಿಯೂ ಪ್ರತಿಯೊಬ್ಬರ ಮನಸೆಳೆಯುವ ಸಬ್ಜೆಕ್ಟ್ ಹೊಂದಿರುವ ಸಿನಿಮಾ ಎನ್ನಬಹುದು.
Be the first to comment