ಚಿತ್ರ: ಪ್ರೇಮಂ ಪೂಜ್ಯಂ
ತಾರಾಗಣ: ಲವ್ಲಿ ಸ್ಟಾರ್ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ, ಮಾಸ್ಟರ್ ಆನಂದ್, ಸಾಧುಕೋಕಿಲ ಮೊದಲಾದವರು.
ರೇಟಿಂಗ್ : 4/5
ಎಲ್ಲರೂ ಜೀವನದಲ್ಲಿ ಒಂದಲ್ಲ ಒಮ್ಮೆ ಪ್ರೇಮಾನುಭವದ ದಿವ್ಯತೆಯನ್ನು ಕಂಡಿರುತ್ತಾರೆ. ಆದರೆ ವಿಶೇಷವೇನೆಂದದರೆ ಅದನ್ನು ವಿವಾಹದ ತನಕ ಮಾತ್ರ ಧ್ಯಾನಿಸುತ್ತಾರೆ. ಬಳಿಕ ಬದುಕಿನ ಅನಿವಾರ್ಯತೆಗಳ ಕಡೆಗೆ ಮುಖ ಮಾಡುತ್ತಾರೆ. ಆದರೆ ಬದುಕನ್ನೇ ಪ್ರೇಮಕ್ಕೆ ಸಮರ್ಪಿಸಿ ವೃತ್ತಿಯಲ್ಲೂ ಸೇವಾ ಮನೋಭಾವ ಹೊಂದಿದ ಅಮರ ಪ್ರೇಮಿಯೊಬ್ಬನ ಕತೆ ಇದು.
ಶ್ರೀಹರಿ ಒಬ್ಬ ವೈದ್ಯಕೀಯ ವಿದ್ಯಾರ್ಥಿ. ಹಳ್ಳಿಯಿಂದ ಬಂದ ಹುಡುಗನಾದರೂ ಕಲಿಕೆಯಲ್ಲಿ ಬುದ್ಧಿವಂತ. ಆತನಿಗೆ ಏಂಜೆಲ್ ನಂಥ ಹುಡುಗಿಯ ಪರಿಚಯವಾಗುತ್ತದೆ. ಆಕೆಯನ್ನು ಮನಸಾರೆ ಪ್ರೀತಿಸುತ್ತಾನೆ. ಆದರೆ ಆಕೆ ಕ್ರಿಶ್ಚಿಯನ್ ಹುಡುಗಿ. ಹಿಂದೂ ಧರ್ಮದ ಹುಡುಗನೊಡನೆ ವಿವಾಹ ಕಷ್ಟವಾಗಬಹುದು ಎನ್ನುವ ಒಂದೇ ಒಂದು ಕಾರಣದಿಂದ ಆಕೆಯಿಂದ ಸದಾ ಒಂದು ಅಂತರ ಕಾಯ್ದುಕೊಳ್ಳುತ್ತಾನೆ. ಈ ಅಂತರ ನಿರಂತರವಾಗಿರುತ್ತದಾ? ಅಥವಾ ಜೋಡಿ ಸನಿಹ ಸೇರುತ್ತಾರ ? ಎನ್ನುವ ಪ್ರಶ್ನೆಗಳಿಗೆ ಚಿತ್ರವೇ ಉತ್ತರ ನೀಡುತ್ತದೆ.
ವಿದ್ಯಾರ್ಥಿ ಜೀವನದ ಹಾಸ್ಯಮಯ ಘಟನೆಗಳೊಂದಿಗೆ ಆರಂಭವಾಗುವ ಚಿತ್ರ ಮುಂದುವರಿಯುತ್ತಿರುವ ಹಾಗೇ ಪ್ರೀತಿಯ ಸುಳಿಗೆ ಸಿಲುಕುವ ನಾಯಕನ ಕತೆಯೊಂದಿಗೆ ಸಾಗುತ್ತದೆ. ಪ್ರೇಮ್ ಅವರ ಹೊರತು ಬೇರೊಬ್ಬ ನಾಯಕನನ್ನು ಈ ಪಾತ್ರದಲ್ಲಿ ಯೋಚಿಸಲಾಗದಷ್ಟು ಅವರು ಶ್ರೀಹರಿಯಾಗಿ ಮನತುಂಬಿಕೊಳ್ಳುತ್ತಾರೆ.
ಕಾಲೇಜ್ ಹುಡುಗನಾಗಿ, ಜವಾಬ್ದಾರಿಯುತ ವೈದ್ಯನಾಗಿ, ನೋವು ನುಂಗಿದ ಪ್ರೇಮಿಯಾಗಿ ಅವರ ನಟನೆ ಅನನ್ಯ. ನಾಯಕಿ ಬೃಂದಾ ಆಚಾರ್ಯ ಹೊಸ ಪ್ರತಿಭೆಯಾದರೂ ಆಕೆಯನ್ನು ಕೂಡ ಕನ್ನಡದ ಉತ್ತಮ ನಟಿಯರ ಪಟ್ಟಿಗೆ ಸೇರಿಸಬಹುದು ಎನ್ನುವಂಥ ನಟನೆಯನ್ನು ಅವರಿಂದ ತೆಗೆಯುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ಒಂದು ಗ್ಯಾಪ್ ಬಳಿಕ ಮಾಸ್ಟರ್ ಆನಂದ್ ಅವರು ಚಿತ್ರದ ತುಂಬ ತುಂಬಿಕೊಂಡಿದ್ದಾರೆ. ಜೊತೆಗೆ ಚಿತ್ರ ನೋಡಲು ಬಂದ ಪ್ರೇಕ್ಷಕರಿಗೆ ಐಂದ್ರಿತಾ ರೇ ರೂಪದಲ್ಲಿ ಅಚ್ಚರಿಯೊಂದನ್ನು ನೀಡುತ್ತಾರೆ ನಿರ್ದೇಶಕರು. ಯಾಕೆಂದರೆ ಚಿತ್ರದ ಒಂದು ಪ್ರಧಾನ ಪಾತ್ರವನ್ನು ಐಂದ್ರಿತಾ ಅವರೇ ನಿರ್ವಹಿಸುವ ಬಗ್ಗೆ ಅವರು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.
ಬಹಳ ವರ್ಷಗಳಿಂದ ಫೇಲಾಗಿ ಹಾಸ್ಟೆಲಲ್ಲಿರುವ ಸಾಧುಕೋಕಿಲ ಪಾತ್ರ ಸಿನಿಮಾವನ್ನು ರಂಜನೀಯಗೊಳಿಸುವಲ್ಲಿ ಗೆದ್ದಿದೆ.
ಪ್ರೇಮಂ ಪೂಜ್ಯಂ ಚಿತ್ರ ಪರದೆಯ ಮೇಲೆ ಪ್ರದರ್ಶನ ಆರಂಭವಾದ ಘಳಿಗೆಯಿಂದ ಸೆಳೆಯುವಂಥ ಅಂಶ ಏನೆಂದರೆ ಚಿತ್ರದ ಸಂಗೀತ ಮತ್ತು ಛಾಯಾಗ್ರಹಣ. ಇದೊಂದು ಸುದೀರ್ಘವಾದ ಸಿನಿಮಾವಾಗಿದ್ದರೂ ಆ ಕಾಲಾವಧಿಯ ಅಷ್ಟು ಸಮಯವನ್ನು ಕೂಡ ಪರದೆಯ ಮೇಲೆ ನೋಡಲು ಸಹ್ಯವಾಗಿಸುವುದು ಮನಮೋಹಕವಾದ ಛಾಯಾಗ್ರಹಣ ಎಂದು ಹೇಳಲೇಬೇಕು. ಅದೇ ಸಂದರ್ಭದಲ್ಲಿ ಮನಸೆಳೆಯುವಂಥ ಹಾಡುಗಳು ಮತ್ತು ಮುದನೀಡುವ ಥೀಮ್ ಮ್ಯೂಸಿಕ್ ಗೆ ಮನಸೋಲದವರು ಕಡಿಮೆ ಎನ್ನಬಹುದು. ಹಾಗಾಗಿ ಒಟ್ಟು ಸಿನಿಮಾ ಜೀವನದಲ್ಲಿ ಒಮ್ಮೆಯಾದರೂ ನೈಜವಾದ ಪ್ರೇಮವನ್ನು ಕಂಡವರಿಗೆ ಆತ್ಮೀಯವಾಗದೇ ಇರಲಾರದು.
-ಭೀಮರಾಯ
Be the first to comment