ಚಿತ್ರ ವಿಮರ್ಶೆ : ಸಖತ್ ಕಿಕ್ ನೀಡುವ ಒಂಬತ್ತನೇ ದಿಕ್ಕು

ಸಖತ್ ಕಿಕ್ ನೀಡುವ ಒಂಬತ್ತನೇ ದಿಕ್ಕು

ಚಿತ್ರ : ಒಂಬತ್ತನೇ ದಿಕ್ಕು

ನಿರ್ಮಾಪಕ : ಗುರು ದೇಶಪಾಂಡೆ

ನಿರ್ದೇಶಕ : ದಯಾಳ್ ಪದ್ಮನಾಭನ್

ತಾರಾಗಣ: ಯೋಗೇಶ್ , ಅದಿತಿ ಪ್ರಭುದೇವ, ರಮೇಶ್ ಭಟ್ , ಸಾಯಿಕುಮಾರ್, ಇತರರು.

ಸ್ಟಾರ್ : 4/5

ಕ್ಷಣ ಕ್ಷಣಕ್ಕೂ ಗೊಂದಲ, ಗಾಬರಿ, ಗುಟ್ಟು ಬಿಟ್ಟು ಕೊಡದೆ ಸಖತ್ ಕಿಕ್ ಕೊಡುವ ಕ್ರೈಂ ಕಥೆಯಾಗಿ ಒಂಬತ್ತನೆ ದಿಕ್ಕು ಪ್ರೇಕ್ಷಕರ ಗಮನ ಸೆಳೆಯುತ್ತದೆ.

ಮಲೆನಾಡಿನ ಮಡಿಲಿನಲ್ಲಿರುವ ದೇವಾಲಯದ ಪುರಾತನ ವಿಗ್ರಹದ ಕಳವಿನ ಮೂಲಕ ಸಾಗುವ ಚಿತ್ರ ಪ್ರೇಕ್ಷಕರ ಮನಸಿಗೆ ಚಿತ್ರಕಥೆಯ ಮೂಲಕ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿದೆ. ಕದ್ದ ವಿಗ್ರಹಕ್ಕೆ ಸಂಬಂಧಿಸಿದ ದಿಕ್ಸೂಚಿ ಚಿಹ್ನೆ ಇರುವ ಬ್ಯಾಗು ಸಿನಿಮಾದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತದೆ. ಸಸ್ಪೆನ್ಸ್ ಜೊತೆಗೆ ಚಿತ್ರದಲ್ಲಿ ಲವ್, ಬ್ರೇಕಪ್ ಕೂಡಾ ಇದೆ. ಇದನ್ನು ಅನುಭವಿಸಲು ಪೂರ್ಣ ಚಿತ್ರವನ್ನು ನೋಡುವುದು ಒಳಿತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಾಯ್ಸ್ ಓವರ್ ಜೊತೆಗೆ ಒಂಭತ್ತನೇ ದಿಕ್ಕು ಸಿನಿಮಾ ಕಥೆ ತೆರೆದುಕೊಳ್ಳುತ್ತದೆ. ಪಕ್ಕಾ ರೂರಲ್ ಟಚ್ ಜೊತೆಗೆ ಬೆಂಗಳೂರಿನ ನಗರದೊಳಗೆ ಕಥೆ ಸಾಗುವುದು ಸಿನಿಮಾದ ವಿಶೇಷ. ಚಿತ್ರದಲ್ಲಿ ಹಳ್ಳಿ ಹುಡುಗಿಯ ಪಾತ್ರವಾದ ಸರೋಜಾದೇವಿಯಾಗಿ ಅದಿತಿ ಪ್ರಭುದೇವ್ , ಸಿಟಿಯ ಮಿಡಲ್ ಕ್ಲಾಸ್ ಹುಡುಗನ ಪಾತ್ರವಾದ ಚನ್ನಕೇಶವನಾಗಿ ಲೂಸ್ ಮಾದ ಯೋಗಿ ಕಾಣಿಸಿದ್ದಾರೆ. ತಮಿಳಿನ ರೀಮೇಕ್ ಕಥೆಯನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಟ್ರೈಲರ್ ನಲ್ಲಿದ್ದ ಕಥೆಯ ಗ್ಲಿಮ್ಸ್ ತೆರೆಯ ಮೇಲೆ ವಿಸ್ತಾರವಾಗಿ ತೆರೆದುಕೊಳ್ಳುತ್ತದೆ.

ಲೂಸ್ ಮಾದ ಯೋಗಿ ಸಹಜಾಭಿನಯದ ಮೂಲಕ ಗಮನ ಸೆಳೆಯುತ್ತಾರೆ. ಹಿರಿಯ ನಟ ಅಶೋಕ್ ಅವರು ಯೋಗಿ ತಂದೆ ಪಾತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ಡೈಲಾಗ್ ಕಿಂಗ್ ಸಾಯಿಕುಮಾರ್ ಜಬರ್ದಸ್ತ್ ಪಾತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮೇಶ್ ಭಟ್ ಅವರು ಅಮಾಯಕ ತಂದೆಯಾಗಿ ಕ್ರೈಂನಲ್ಲಿ ಸಿಲುಕಿ ಒದ್ದಾಡುವ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ .

ಕ್ಲೈಮ್ಯಾಕ್ಸ್ ನಲ್ಲಿ ಸಂಪತ್ ಕುಮಾರ್ ಹಾಗೂ ಯೋಗಿ ಅವರ ಜುಗಲ್ ಬಂದಿ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದಲ್ಲಿ ಪ್ರಶಾಂತ್ ಸಿದ್ದಿಕಿ ಅದ್ಭುತವಾಗಿ ನಕ್ಕು ನಗಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಇಂಪಿನ ಅನುಭವ ನೀಡುತ್ತದೆ.

ಕೋವಿಡ್ ಕಾರಣದಿಂದ ಹಲವು ಬಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಮುಂದೂಡಲ್ಪಟ್ಟ ಒಂಬತ್ತನೇ ದಿಕ್ಕು ಚಿತ್ರ ತಡವಾಗಿ ತೆರೆಗೆ ಬಂದರೂ, ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಈ ಚಿತ್ರ ಯೋಗಿ ವೃತ್ತಿ ಬದುಕಿಗೆ ಮೈಲೇಜ್ ನೀಡುವ ಸಾಧ್ಯತೆ ಇದೆ.
___________

Be the first to comment

Leave a Reply

Your email address will not be published. Required fields are marked *

Translate »
error: Content is protected !!