ಚಿತ್ರ ವಿಮರ್ಶೆ : ಪ್ರೇಮದ ಧನ್ಯಾನುಭವ

ಚಿತ್ರ: ನಿನ್ನ ಸನಿಹಕೆ

ನಿರ್ದೇಶನ: ಸೂರಜ್ ಗೌಡ

ನಿರ್ಮಾಣ: ಅಕ್ಷಯ್ ರಾಜಶೇಖರ್, ರಂಗನಾಥ್ ಕೂಡ್ಲಿ

ತಾರಾಗಣ: ಸೂರಜ್ ಗೌಡ, ಧನ್ಯಾ ರಾಮ್ ಕುಮಾರ್ ಮೊದಲಾದವರು….

ರೇಟಿಂಗ್ : 4/5

ಡಾ.ರಾಜ್ ಕುಟುಂಬದ ಹೆಣ್ಣುಮಗಳು ನಾಯಕಿಯಾಗಿರುವ ಸಿನಿಮಾ ಎನ್ನುವ ಕಾರಣದಿಂದ ಸುದ್ದಿ ಮಾಡಿದ ಚಿತ್ರ ನಿನ್ನ ಸನಿಹಕೆ. ಆದರೆ ಸಿನಿಮಾ‌ ನೋಡಿ ಹೊರ ಬರುವ ಪ್ರೇಕ್ಷಕ ಚಿತ್ರದಲ್ಲಿನ ಯುವ ಜೋಡಿಯ ಬಗ್ಗೆಯೇ ನೆನಪಿಸಿಕೊಳ್ಳುತ್ತಾರೆ. ಅಷ್ಟರಮಟ್ಟಿಗೆ ಮನಸೆಳೆವ ಯುವಪ್ರೇಮಿಗಳಾಗಿ ನಾಯಕ ನಾಯಕಿ ಮನ ಸೆಳೆಯುತ್ತಾರೆ.

ಬಾರ್ ಒಂದರಲ್ಲಿ ಭಗ್ನ ಪ್ರೇಮಿಯ ಪ್ರೇಮ ವಿರೋಧಿ ಮಾತುಗಳೊಂದಿಗೆ ಚಿತ್ರ ಆರಂಭವಾಗುತ್ತದೆ. ನಾಯಕ ಪ್ರೇಮ ವಿರೋಧಿಯಾಗಲು ಕಾರಣವಾದ ಕತೆ ಕುತೂಹಲಕಾರಿಯಾಗಿದೆ. ನಾಯಕನ ಹೆಸರು ಆದಿತ್ಯ. ಆತ ಶ್ರೀರಂಗಪಟ್ಟಣದಿಂದ ಇಂಜಿನಿಯರ್ ಕೆಲಸದಲ್ಲಿ ಬೆಂಗಳೂರಿಗೆ ಬಂದವನು. ಆತನಿಗೆ ಅನಿರೀಕ್ಷಿತವಾಗಿ ಪರಿಚಯವಾಗುವವಳು ಅಮೃತಾ ಚಿಕ್ಕಮಗಳೂರಿನ ಚೆಲುವೆ. ಬೆಂಗಳೂರಿನಲ್ಲಿ ದಂತವೈದ್ಯೆಯಾಗಿರುವ ಆಕೆಯೊಂದಿಗಿನ ಪರಿಚಯ ಸ್ನೇಹಕ್ಕೆ ಎಡೆ ಮಾಡಿಕೊಡುತ್ತದೆ. ಫ್ರೆಂಡ್ ಶಿಪ್ ಪ್ರೇಮವಾಗುತ್ತದೆ. ಆದರೆ ವೇಗದ ಪ್ರೇಮವಾದ ಕಾರಣ ಅಷ್ಟೇ ಬೇಗ ವಿರಹಕ್ಕೂ ಕಾರಣವಾಗುತ್ತದೆ. ಇದೇ ಸಂದರ್ಭದಲ್ಲಿ ಅಮೃತಾಗೆ ಆಕೆಯ ಮನೆಯಲ್ಲಿ ಮದುವೆಯ ಮಾತುಕತೆ ನಡೆಯುತ್ತದೆ. ಅದನ್ನು ಒಪ್ಪಬೇಕಾದ ಅನಿವಾರ್ಯತೆ ಆಕೆಗೂ ಸೃಷ್ಟಿಯಾಗುತ್ತದೆ. ಅಮೃತಾ ಮತ್ತು ಆದಿತ್ಯ ವಿರಸಕ್ಕೆ ಕಾರಣವೇನು? ಅಮೃತಾ ಬೇರೆ ಹುಡುಗನನ್ನು ಒಪ್ಪಬೇಕಾದ ಅನಿವಾರ್ಯತೆ ಏನು? ಅಲ್ಲಿಗೆ ನಾಯಕ ಹೋದಾಗ ನಡೆಯುವ ಡ್ರಾಮ ಏನು ಎನ್ನುವುದನ್ನು ಚಿತ್ರದಲ್ಲಿ ಆಕರ್ಷಕವಾಗಿ ತೋರಿಸಲಾಗಿದೆ. ಅದನ್ನು ಕಂಡು ಅನುಭವಿಸಬೇಕಾದರೆ ನೀವು ಥಿಯೇಟರ್ ಗೆ ಹೋಗಲೇಬೇಕು.

ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಧನ್ಯಾ ರಾಮ್ ಕುಮಾರ್ ಅವರಿಗೆ ಇದು ಪ್ರಥಮ ಚಿತ್ರ ಎಂದು ನಂಬುವುದು ಕಷ್ಟ. ಆಕೆ ಪ್ರೇಮಿಯಾಗಿ ಪಾತ್ರದ ಎಲ್ಲ ಬಗೆಯ ಮಜಲುಗಳನ್ನು ತೋರಿಸುವ ರೀತಿಯಲ್ಲಿ ನಟಿಸಿದ್ದಾರೆ. ಧ್ವನಿಯಲ್ಲಿನ ಏರಿಳಿತಗಳೂ ಆಕರ್ಷಕವಾಗಿದೆ. ನಾಯಕ ಆದಿತ್ಯನಾಗಿ ಸೂರಜ್ ಗೌಡ ಅವರು ಕೂಡ ಗೆದ್ದಿದ್ದಾರೆ. ಜೊತೆಗೆ ನಿರ್ದೇಶನದಲ್ಲಿಯೂ ಗಮನ ಸೆಳೆದಿದ್ದಾರೆ.

ಚಿತ್ರದಲ್ಲಿನ ಪೋಷಕ ಪಾತ್ರಗಳು ಕೂಡ ಲವಲವಿಕೆಯ ಪಾತ್ರಗಳಾಗಿರುವುದು ಪ್ರೇಕ್ಷಕರಿಗೆ ಹುರುಪು ಮೂಡಿಸುತ್ತದೆ. ನಾಯಕನ ತಾಯಿಯಾಗಿ ಅರುಣಾ ಬಾಲರಾಜ್ ನಟಿಸಿದ್ದರೆ, ನಾಯಕಿಯಾಗಿ ತಾಯಿಯ ಚಿತ್ಕಳಾ ಬಿರಾದಾರ ಇದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ಮಂಜುನಾಥ ಹೆಗ್ಡೆ ಹುರುಪಿನಿಂದ ಓಡಾಡುತ್ತಾರೆ. ಚಿತ್ರದಲ್ಲಿ ಬರುವ ಪ್ರತಿಯೊಂದು ಸಣ್ಣಸಣ್ಣ ಪಾತ್ರಗಳು ಕೂಡ ತಮ್ಮ ಸಂಭಾಷಣೆಗಳಿಂದಾಗಿಯೇ ಮನತುಂಬುತ್ತವೆ. ನಾಯಕಿಯ ಬಾಡಿಗೆ ಮನೆಯ ಮಾಲೀಕರಾಗಿ
ಕರಿಸುಬ್ಬು ಸೇರಿದಂತೆ ನಾಯಕನ ಸ್ನೇಹಿತನ ಪಾತ್ರಗಳು ನೆನಪಲ್ಲಿ ಉಳಿದು ನಗಿಸುತ್ತವೆ.

ಸಂಗೀತ ನಿರ್ದೇಶಕರಾಗಿ ರಘು ದೀಕ್ಷಿತ್ ನೀಡಿರುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಹಿತವಾಗಿದೆ. ಅಭಿಲಾಷ್ ಕಳತ್ತಿಯವರ ಛಾಯಾಗ್ರಹಣ, ಹೊಡೆದಾಟದ ದೃಶ್ಯಗಳಲ್ಲಿಯೂ ಅಮೋಘ. ಒಂದು ಬ್ರೇಕ್ ಬಳಿಕ ಕುಟುಂಬ ಸಮೇತ ಥಿಯೇಟರ್ ಸನಿಹಕೆ ಹೋಗಲು ಇದು ಸರಿಯಾದ ಚಿತ್ರ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!