ಚಿತ್ರ: ಹೋಮ್ ಮಿನಿಸ್ಟರ್
ನಿರ್ದೇಶನ: ಸುಜಯ್
ನಿರ್ಮಾಪಕ: ಪೂರ್ಣಚಂದ್ರ ನಾಯ್ಡು
ರೇಟಿಂಗ್: 4/5
ರಾಜಕೀಯದ ಹೋಮ್ ಮಿನಿಸ್ಟರ್ ಅಲ್ಲದ ‘ ಹೋಮ್ ಮಿನಿಸ್ಟರ್ ‘ ಚಿತ್ರ ಫ್ಯಾಮಿಲಿ ಬದುಕಿನ ಕುರಿತದ್ದು. ಸಿನಿಮಾದ ಹಾಡುಗಳು, ಟ್ರೇಲರನ್ನು ನೋಡಿದವರ ಈ ಊಹೆಯನ್ನು ಸಿನಿಮಾ ಸುಳ್ಳು ಮಾಡುವುದಿಲ್ಲ.
ಹೋಮ್ ಮಿನಿಸ್ಟರ್ ಸಿನಿಮಾದ ಕಥಾನಾಯಕ ಕಾರ್ಪೊರೆಟ್ ವೃತ್ತಿ ಬಿಟ್ಟು ಮನೆಗೆಲಸ ನೋಡಿಕೊಳ್ಳುವವ. ಪುಟ್ಟ ಮಗಳ ಪಾಲನೆಯಲ್ಲಿ ತೊಡಗುತ್ತಾನೆ. ಮನೆಯಲ್ಲಿ ಪತ್ನಿಯೊಬ್ಬಳು ಮಾಡುವ ಕೆಲಸಗಳನ್ನು ಪತಿಯಾಗಿ ಆತ ನಿರ್ವಹಿಸುತ್ತಾನೆ.
ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರುವ ಉಪೇಂದ್ರ ಕುಟುಂಬದಲ್ಲಿ ವೇದಿಕಾ ದುಡಿಯುವ ಮಹಿಳೆ. ಉಪೇಂದ್ರ ಅಪಾರ್ಟ್ ಮೆಂಟಿನಲ್ಲಿ ನೆಲೆಸಿರುವ ಎಲ್ಲ ಮಹಿಳೆಯರ ಖಾಸಗಿ ಸಮಸ್ಯೆಗಳನ್ನು ಬಗೆಹರಿಸುವಷ್ಟು ಸ್ನೇಹಿತ. ಒಂದು ದಿನ ನೆರೆಮನೆಯಾಕೆ ಹಣದ ಸಮಸ್ಯೆಯಲ್ಲಿ ಸಿಕ್ಕಿಕೊಂಡಾಗ ಕಥಾನಾಯಕ ಮನೆಯಲ್ಲಿಟ್ಟಿದ್ದ 10 ಲಕ್ಷ ರೂ. ನೀಡುತ್ತಾನೆ. ಅದು ಮಾವನ ಸರ್ಜರಿಗೆಂದು ಪತ್ನಿ ಎತ್ತಿಟ್ಟಿದ್ದ ಹಣ. ಎಷ್ಟೋ ದಿನಗಳ ಬಳಿಕ ಹಲವರ ಬಳಿ ಹಣ ಪಡೆದ ನೆರೆಮನೆಯಾಕೆ ಎಸ್ಕೇಪ್ ಆಗುತ್ತಾಳೆ. ಇದರಿಂದ ಉಪೇಂದ್ರ ಕುಟುಂಬ ಸಮಸ್ಯೆಗೆ ಸಿಲುಕುತ್ತದೆ. ಸಮಸ್ಯೆಯ ಸುಳಿಯಿಂದ ನಾಯಕ ಹೇಗೆ ಹೊರಬರುತ್ತಾನೆ? ಕಥಾ ನಾಯಕ ಹೋಮ್ ಮಿನಿಸ್ಟರ್ ಆಗಲು ಏನು ಕಾರಣ ಎನ್ನುವ ಸತ್ಯಗಳು ಸಿನಿಮಾದ ಕೊನೆಯಲ್ಲಿ ಬಹಿರಂಗವಾಗುತ್ತವೆ.
ಹೋಮ್ ಮಿನಿಸ್ಟರ್ ಸಿನಿಮಾದಿಂದ ಉಪೇಂದ್ರ ಫ್ಯಾಮಿಲಿ ಆಡಿಯೆನ್ಸ್ ಗೆ ಇನ್ನಷ್ಟು ಹತ್ತಿರವಾಗಲು ಹೊರಟಿದ್ದಾರೆ. ಪತ್ನಿಯನ್ನು ಯಾವ ರೀತಿ ಕಾಪಾಡಿಕೊಳ್ಳಬೇಕು. ಸಂಸಾರ ಹೇಗೆ ನಿಭಾಯಿಸಬೇಕು ಎನ್ನುವ ಬಗ್ಗೆ ಸಂದೇಶ ಸಿನಿಮಾದಲ್ಲಿದೆ.
ಅಂದದಿಂದ ಗಮನ ಸೆಳೆಯುವ ವೇದಿಕಾ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಸುಮನ್ ರಂಗನಾಥ್, ತಾನ್ಯಾ ಹೋಪ್, ಶುಭ ರಕ್ಷಾ, ಅವಿನಾಶ್, ಸುಧಾ ಬೆಳವಾಡಿ, ಮಾಳವಿಕಾ, ಶ್ರೀನಿವಾಸ ಮೂರ್ತಿ, ಸಾಧು ಕೋಕಿಲ, ತಿಲಕ್ ಉತ್ತಮ ಅಭಿನಯ ನೀಡಿದ್ದಾರೆ. ಹಿರಿಯ ಗಾಯಕಿ ಕಸ್ತೂರಿ ಶಂಕರ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.
ವಿಭಿನ್ನ ಸಿನಿಮಾ ಎಂದು ಹೇಳಲು ಸಾಧ್ಯವಾಗದೆ ಹೋದರೂ, ಉತ್ತಮ ಚಿತ್ರ ನೀಡಲು ನಿರ್ದೇಶಕ ಸುಜಯ್ ಯತ್ನಿಸಿದ್ದಾರೆ. ಉಪೇಂದ್ರ ಅಭಿಮಾನಿಗಳು ಮಾತ್ರವಲ್ಲದೆ, ಸಿನಿಮಾಸಕ್ತರು ಕುಟುಂಬ ಸಮೇತ ನೋಡುವ ರೀತಿ ಸಿನಿಮಾ ಮೂಡಿ ಬಂದಿದೆ.
Be the first to comment