ಚಿತ್ರ ವಿಮರ್ಶೆ : ಗಡಿಯಾರದ ಹಂಗಿಲ್ಲದೆ ನೋಡುವಂಥ ಚಿತ್ರ ‘ಗಡಿಯಾರ’
ಸಿನಿಮಾ: ಗಡಿಯಾರ
ತಾರಾಗಣ: ಶೀತಲ್ ಶೆಟ್ಟಿ ,ರಾಜ್ ದೀಪಕ್ ಶೆಟ್ಟಿ, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ಸಾಂಗ್ಲಿಯಾನ, ಯಶ್ ಶೆಟ್ಟಿ.
ನಿರ್ದೇಶನ: ಪ್ರಭಿಕ್ ಮೊಗವೀರ
ನಿರ್ಮಾಣ: ಪ್ರಭಿಕ್ ಮೊಗವೀರ
ಬಿಸಿನಿಮಾಸ್ ರೇಟಿಂಗ್ : 4/5
ಸಾಮಾನ್ಯವಾಗಿ ಸಿನಿಮಾಗಳು ಚೆನ್ನಾಗಿರದೇ ಹೋದಾಗ ನಾವು ಪದೇ ಪದೇ ಕೈ ಗಡಿಯಾರ ನೋಡಿಕೊಳ್ಳುತ್ತೇವೆ. ಸಿನಿಮಾ ಮುಗಿಯಲು ಇನ್ನೆಷ್ಟು ಹೊತ್ತು ಉಳಿದಿದೆ ಎನ್ನುವ ನಮ್ಮ ಆತಂಕವೇ ಅದಕ್ಕೆ ಕಾರಣ. ಆದರೆ ಗಡಿಯಾರ ಎನ್ನುವ ಹೆಸರಲ್ಲೇ ತೆರೆ ಕಂಡಿರುವ ಈ ಚಿತ್ರವನ್ನು ಒಮ್ಮೆ ವೀಕ್ಷಿಸಲು ಶುರು ಮಾಡಿದರೆ ಆಮೇಲೆ ನೀವು ಸಮಯದ ಪರಿವನ್ನೇ ಮರೆಯುವಂತೆ ಮಾಡುತ್ತದೆ.
ಇದೊಂದು ಕ್ರೈಂ ಥ್ರಿಲ್ಲರ್. ಆದರೆ ಚಿತ್ರದಲ್ಲಿ ಏನಿದೆ ಏನಿಲ್ಲ ಎಂದು ಲೆಕ್ಕ ಹಾಕುವ ಹಾಗಿಲ್ಲ. ಯಾಕೆಂದರೆ ಇದರಲ್ಲಿ ಪುರಾಣದಿಂದ ಹಿಡಿದು ಇತಿಹಾಸ, ಕಾಲೇಜ್ ಪ್ರೇಮ, ಗಾಂಜಾ ತನಿಖೆ, ಕೊಲೆ ಮತ್ತು ತನಿಖೆ ಸೇರಿದಂತೆ ಎಲ್ಲ ಜಾನರ್ ಸೇರಿಸಲಾಗಿದೆ. ಹಾಗಾಗಿ ಲಾಕ್ಡೌನ್ ಬಳಿಕ ತೆರೆ ಕಾಣುತ್ತಿರುವ ಸಂಪೂರ್ಣ ಮನೋರಂಜನೆಯ ಚಿತ್ರ ಎಂದು ಇದನ್ನು ಹೇಳಬಹುದು. ಚಿತ್ರದಲ್ಲಿ ಪತ್ರಕರ್ತೆಯೊಬ್ಬಳು ತನಿಖಾ ಪತ್ರಿಕೋದ್ಯಮದ ಮೂಲಕ ಕೊಲೆಯ ಹಿಂದಿನ ಸತ್ಯವನ್ನು ಹೊರಗೆ ತರುವ ಸಂಗತಿ ಇದೆ. ಅದರ ನಡುವೆ ಕಾಲದ ಗಡಿಯನ್ನು ದಾಟಿ ಕತೆಯೂ ಇದೆ. ಕಾಲೇಜ್ ಫ್ಲ್ಯಾಶ್ ಬ್ಯಾಕ್ ನಿಂದ ಆರಂಭವಾಗುವ ಕತೆಯಲ್ಲಿ ಕಲಿಯದ ವಿದ್ಯಾರ್ಥಿಗಳನ್ನು ಕಾಲೆಳೆಯುವಂಥ ಸಂಭಾಷಣೆಗಳು ಇವೆ. ಚಿತ್ರದ ಕೊನೆಯಲ್ಲಿ ಅದ್ಭುತವಾದ ಒಂದು ಸಾಹಸ ದೃಶ್ಯವಿದ್ದು ಅದರಲ್ಲಿ ಪೊಲೀಸ್ ಅಧಿಕಾರಿಗಳು ಖಳರನ್ನು ಹಿಡಿದು ಕಾನೂನು ಕ್ರಮ ಕೈಗೊಳ್ಳುವ ಸನ್ನಿವೇಶಗಳಿವೆ. ಡ್ರಗ್ಸ್ ಕುರಿತಾದ ಸದ್ಯದ ಸಮಸ್ಯೆಗಳಿಗೆ ಹೊಂದಿಕೊಂಡಿರುವಂಥ ಸನ್ನಿವೇಶಗಳನ್ನು ನಿರ್ದೇಶಕರು ಕಾಕಾತಾಳೀಯ ಎನ್ನುವಂತೆ ಲಾಕ್ಡೌನ್ಗೂ ಮೊದಲೇ ಚಿತ್ರೀಕರಿಸಿರುವುದು ವಿಶೇಷ.
ತನಿಖಾ ಪತ್ರಕರ್ತೆ ಶೀತಲ್ ಪಾತ್ರದಲ್ಲಿ ಶೀತಲ್ ಶೆಟ್ಟಿ ನಟಿಸಿರುವುದು ವಿಶೇಷ. ಈ ಹಿಂದೆ ವಾರ್ತಾ ವಾಚಕಿಯಾಗಿ ಗುರುತಿಸಿಕೊಂಡಿದ್ದ ಶೀತಲ್ ಶೆಟ್ಟಿ ಈ ಪಾತ್ರಕ್ಕೆ ಹೆಚ್ಚು ಹೊಂದುತ್ತಾರೆ. ಪೊಲೀಸ್ ಅಧಿಕಾರಿ ಶಂಕರ್ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ ನಟಿಸಿದ್ದಾರೆ. ಇದುವರೆಗೆ ಖಳನಾಗಿ ಅಥವಾ ಪೋಷಕ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ರಾಜ್ ದೀಪಕ್ ಶೆಟ್ಟಿಯವರು ಚಿತ್ರದಲ್ಲಿ ನಾಯಕ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ತುಂಬ ಒಳ್ಳೊಳ್ಳೆಯ ಪಾತ್ರಗಳು ಮತ್ತು ಅವುಗಳಿಗೆ ತಕ್ಕಂತೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ನಿರ್ದೇಶಕ ಪ್ರಭಿಕ್ ಮೊಗವೀರ ಅವರು ಗೆದ್ದಿದ್ದಾರೆ. ಕಾಲೇಜ್ ಪ್ರಾಂಶುಪಾಲರಾಗಿ ನಟಿಸಿರುವ ಸುಚೇಂದ್ರ ಪ್ರಸಾದ್ ಎಂದಿನಂತೆ ತಮ್ಮ ಪಾತ್ರದ ಮೂಲಕ, ಮಾತಿನ ಮೂಲಕ ಮನಸೆಳೆಯುತ್ತಾರೆ. ಖಳ ಛಾಯೆಯ ಪ್ರೊಫೆಸರ್ ಪಾತ್ರವನ್ನು ನಿರ್ವಹಿಸಿರುವ ಶರತ್ ಲೋಹಿತಾಶ್ವ ಅವರು ಚಿತ್ರದ ಪ್ರಧಾನ ಕೇಂದ್ರವಾಗಿದ್ದಾರೆ ಎಂದೇ ಹೇಳಬಹುದು. ಚಿತ್ರದಲ್ಲಿ ಅತಿಥಿ ಪಾತ್ರವಾಗಿ ಕಾಣಿಸಿಕೊಂಡಿರುವ ಯಶ್ ಶೆಟ್ಟಿಯವರದ್ದು ಅಘೋರಿಯೋರ್ವನ ಪಾತ್ರ. ಯಶ್ ಶೆಟ್ಟಿ ಕಾಣಿಸಿಕೊಂಡಿರುವ ಶಿವ ಭಕ್ತಿ ಪ್ರಧಾನವಾದ ಹಾಡು ಕೂಡ ಮನಮೋಹಕವಾಗಿದೆ. ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿರುವ ಗಣೇಶ್ ರಾವ್ ಕೇಸರ್ಕರ್ ಮತ್ತು ಮಾಜಿ ಐಪಿಎಸ್ ಅಧಿಕಾರಿಗಳಾದ ಸಾಂಗ್ಲಿಯಾನ ಚಿತ್ರದಲ್ಲಿ ಖಾಕಿಗೆ ಕಳೆ ತಂದುಕೊಟ್ಟಿದ್ದಾರೆ.
ಒಂದೇ ಚಿತ್ರದಲ್ಲಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಿಂದ ಆಯ್ದ ಶ್ಲೋಕದಿಂದ ಹಿಡಿದು ಆಧುನಿಕ ಬದುಕಿನವರೆಗಿನ ಪರಾಮರ್ಶೆ ನಡೆಸಿರುವುದು ನಿರ್ದೇಶಕರ ಅದ್ಭುತ ಪ್ರಯತ್ನವೇ ಸರಿ. ಚಿತ್ರದ ಹಿನ್ನಲೆ ಸಂಗೀತ ಮತ್ತು ಸಂಕಲನದ ವಿಚಾರ ಮಾತ್ರ ಚಿತ್ರದ ಬಗ್ಗೆ ಒಂದಷ್ಟು ನೆಗೆಟಿವ್ ಹೇಳುವಂತೆ ಮಾಡುತ್ತದೆ ಬಿಟ್ಟರೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಯುವ ಕಲಾವಿದರ ಆಯ್ಕೆ ಸೇರಿದಂತೆ ಒಟ್ಟು ಚಿತ್ರವೇ ಪ್ರಭಿಕ್ ಮೊಗವೀರ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಉತ್ತಮ ಭವಿಷ್ಯ ಇದೆ ಎನ್ನುವುದನ್ನು ಸಾಬೀತು ಮಾಡುವಂತಿದೆ.
#bcinemasReviews
Be the first to comment